Advertisement

ಮಲೆನಾಡಿನ ಕೃಷಿ ವಲಯ ಗುರುತಿಸಲಿ

06:15 AM Dec 07, 2018 | |

ಬೆಂಗಳೂರು: ಮಲೆನಾಡಿನ ರೈತರಿಗೆ ಜೀವನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮೊದಲು ಮಲೆನಾಡಿನ ಕೃಷಿ ವಲಯವನ್ನು ಗುರುತಿಸಿ ಆ ನಂತರ ಮಾಧವ ಗಾಡ್ಗಿàಳ್‌ ಹಾಗೂ ಕಸ್ತೂರಿ ರಂಗನ್‌ ವರದಿ ಜಾರಿಗೆ ಸರ್ಕಾರ ಮುಂದಾಗಲಿ ಎಂದು ಮಲೆನಾಡು ಉಳಿಸಿ ಹೋರಾಟ ಸಮಿತಿಯು ದುಂಡು ಮೇಜಿನ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿತು.

Advertisement

ಗುರುವಾರ ಶಾಸಕರ ಭವನದಲ್ಲಿ ಮಲೆನಾಡು ಉಳಿಸಿ ಹೋರಾಟ ಸಮಿತಿ ವತಿಯಿಂದ “ಮಾಧವ ಗಾಡ್ಗಿàಳ್‌ ಮತ್ತು ಕಸ್ತೂರಿ ರಂಗನ್‌ ವರದಿ ಅನುಷ್ಠಾನದಿಂದ ಪಶ್ಚಿಮಘಟ್ಟ ಮತ್ತು ಮಲೆನಾಡನ್ನು ರಕ್ಷಿಸಲು ಸಾಧ್ಯವೇ’ ಎಂಬ ಕುರಿತು ದುಂಡು ಮೇಜಿನ ಸಭೆ ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ಹೋರಾಟ ಸಮಿತಿ ಸದಸ್ಯರು, ಪರಿಸರವಾದಿಗಳು, ಪರಿಸರ ಹೋರಾಟಗಾರರು ಹಾಗೂ ರೈತರು ಭಾಗವಹಿಸಿ ಪಶ್ಚಿಮಘಟ್ಟ ಸೂಕ್ಷ್ಮಅರಣ್ಯ ಪ್ರದೇಶ ಉಳಿಸುವ ನಿಟ್ಟಿನಲ್ಲಿ ಮಾಧವ ಗಾಡ್ಗಿàಳ್‌ ಮತ್ತು ಕಸ್ತೂರಿ ರಂಗನ್‌ ವರದಿಗಳು ರೈತ ವಿರೋಧಿ ಹಾಗೂ ಅವೈಜ್ಞಾನಿಕ ಅಂಶಗಳನ್ನು ಒಳಗೊಂಡಿವೆ. ಅವುಗಳನ್ನು ಜಾರಿ ಮಾಡುವುದಕ್ಕು ಮುಂಚಿತವಾಗಿ ಮಲೆನಾಡಿನ ಕೃಷಿ ವಲಯದ ವ್ಯಾಪ್ತಿಯನ್ನು ಗುರುತಿಸಿ ಲಕ್ಷಾಂತರ ರೈತರನ್ನು ಉಳಿಸಬೇಕು ಎಂಬ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಹಾಗೂ ಆ ವರದಿಗಳಲ್ಲಿರುವ ಅವೈಜ್ಞಾನಿಕ ಅಂಶಗಳನ್ನು ಜನಸಾಮಾನ್ಯರಿಗೆ ತಿಳಿಸಲು ಸಮಿತಿ ನಿರ್ಧರಿಸಿತು.

ಸಭೆಯಲ್ಲಿ ಮಾಜಿ ಶಾಸಕ ವೈ.ಎಸ್‌.ವಿ.ದತ್ತ ಮಾತನಾಡಿ, ಸರ್ಕಾರವು ಜಾರಿ ಮಾಡಲು ಮುಂದಾಗಿರುವ ಮಾಧವ ಗಾಡ್ಗಿàಳ್‌ ವರದಿ ಹಾಗೂ ಕಸ್ತೂರಿ ರಂಗನ್‌ ವರದಿ ಕೃಷಿ ವಲಯವನ್ನು ದಿಕ್ಕರಿಸಿ, ಸಂಪೂರ್ಣ ರೈತ ವಿರೋಧಿಯಾಗಿ ಸಿದ್ಧಪಡಿಸಲಾಗಿದೆ. ಸ್ಯಾಟಲೈಟ್‌ ಆಧಾರಿತ ವರದಿ ಇದಾಗಿದ್ದು, ಸೂಕ್ಷ್ಮವಲಯ ಹಾಗೂ ಕೃಷಿ ಭೂಮಿಯ ವರ್ಗೀಕರಣವಾಗಿಲ್ಲ. ಬದಲಾಗಿ ಹಸಿರಾಗಿ ಕಂಡ ಪ್ರದೇಶವನ್ನೆಲ್ಲಾ ಅರಣ್ಯ ಎಂದು ಗುರುತಿಸಿ ಆ ವಲಯವನ್ನು ರಕ್ಷಿಸಿ ಎಂದು ವರದಿ ನೀಡಲಾಗಿದೆ. ಆದರೆ, ಹಸಿರು ಕಂಡ ಪ್ರದೇಶದಲ್ಲಿ ಹೆಚ್ಚಾಗಿ ಕೃಷಿ ಭೂಮಿ ಇದ್ದು, ವರದಿಯು ಯಥಾವತ್ತಾಗಿ ಜಾರಿಯಾದರೆ ಆ ಭಾಗದ ರೈತರು ತಮ್ಮ ಜಮೀನನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ, ವರದಿ ಜಾರಿಗೆ ಮುನ್ನ ಆ ಸ್ಥಳಕ್ಕೆ ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿ ಕೃಷಿ ವಲಯವನ್ನು ಗುರುತಿಸಿ ಅದಕ್ಕೊಂಡು ಚೌಕಟ್ಟು ಹಾಕಿ ಮಲೆನಾಡಿನ ರೈತರ ಜೀವನಕ್ಕೆ ಭದ್ರತೆ ಒದಗಿಸಬೇಕು ಎಂದರು.

ಸತತ ಹತ್ತು ವರ್ಷಗಳಿಂದ ಬರಪೀಡಿತ ತಾಲೂಕು ಎಂದು ಘೋಷಣೆಯಾಗಿರುವ ಕಡೂರು ಕೂಡಾ ಈ ಎರಡೂ ವರದಿಗಳಲ್ಲಿ ವಲಯ 3 ರಲ್ಲಿ ಅರಣ್ಯ ಸೂಕ್ಷ್ಮಪ್ರದೇಶ ಎಂದು ಗುರುತಿಸಿದ್ದಾರೆ. ಆದರೆ, ಅಲ್ಲಿ ಮಳೆಯಿಲ್ಲದೇ ಜಾಲಿ ಗಿಡ, ಗುಡ್ಡ ಬೆಳೆದು ನಿಂತಿದೆ. ಈ ರೀತಿ ಸ್ಥಳ ಪರಿಶೀಲನೆ ಮಾಡದೆ ನಗರದಲ್ಲಿ ಕುಳಿತು ಚಿತ್ರಗಳ ಮೂಲಕ ಸಮೀಕ್ಷೆ ಮಾಡಿ ವರದಿ ಮಾಡಿದರೆ ಜನವಿರೋಧಿ ವರದಿಗಳು ರೂಪುಗೊಳ್ಳುತ್ತವೆ ಎಂದರು.

Advertisement

ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಮಾತನಾಡಿ, ಮಲೆನಾಡಿನ ರೈತರು ಅರಣ್ಯ ಹಾಳು ಮಾಡುತ್ತಿದ್ದಾರೆ ಎಂಬ ಆರೋಪವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಅದು ಸುಳ್ಳು. ಯಾವ ರೈತರೂ ಕಾಡಿನ ನಾಶಕ್ಕೆ ಮುಂದಾಗುವುದಿಲ್ಲ. ಕಾಡಿನಲ್ಲಿ  ನೀಲಗಿರಿ, ಅಕೇಶಿಯ, ರಬ್ಬರ್‌ ನಂತಹ ಮರಗಳನ್ನು ನೆಟ್ಟು ಅರಣ್ಯ ಇಲಾಖೆ ಅಧಿಕಾರಿಗಳೇ ಕಾಡನ್ನು ಹಾಳು ಮಾಡುತ್ತಿದ್ದಾರೆ. ಈ ಪರಿಣಾಮ ಕಾಡು ಪ್ರಾಣಿಗಳು ನಾಡಿಗೆ ಬಂದು ಮನುಷ್ಯರ ಮೇಲೆ ಹಾನಿ ಮಾಡುತ್ತಿವೆ. ಇನ್ನು ಸರ್ಕಾರ ವ್ಯವಸ್ಥಿತವಾಗಿ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಮಾಡಿದ್ದರೆ, ಇಷ್ಟೊಂದು ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ, ಯಾವ ವರದಿಯನ್ನು ಜಾರಿ ಮಾಡುವ ಅಗತ್ಯವು ಇರಲಿಲ್ಲ ಎಂದರು.

ಮಾಜಿ ಸಚಿವ ಬಿ.ಎಲ್‌.ಶಂಕರ್‌ ಮಾತನಾಡಿ, ರಾಜ್ಯದ ಸಮತೋಲನತೆ ಕಾಪಾಡಲು ಶೇ.33ರಷ್ಟು ಅರಣ್ಯ ಪ್ರದೇಶವಿರಬೇಕು ಎಂಬ ಅಂಶ ಕೇವಲ ಮಲೆನಾಡಿನ ಭಾಗದಲ್ಲಿ ಮಾತ್ರ ಜಾರಿಯಾಗಬೇಕೆ?. ಮಲೆನಾಡಿನ ಜನರಷ್ಟೇ ಕಾಡು ಬೆಳೆಸುವ ಜವಬ್ದಾರಿ ಹೋರಬೇಕ?. ನಗರ ಪ್ರದೇಶಗಳಲ್ಲಿ ಸಾವಿರಾರು ಖಾಸಗಿ ಕಂಪನಿಗಳು ಸರ್ಕಾರಿ ಜಮೀನಲ್ಲಿ ಆಶ್ರಯ ಪಡೆದಿದ್ದು, ಆ ಜಾಗದಲ್ಲಿ ಇಂತ್ತಿಷ್ಟು ಪ್ರಮಾಣದ ಅರಣ್ಯ ಬೆಳೆಸಬೇಕು ಎಂದು ಕಾನೂನು ಮಾಡಬೇಕು ಎಂದರು.

ರೈತ ಹೋರಾಟಗಾರ ಕೆ.ಟಿ.ಗಂಗಾಧರ್‌, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌,  ಕೆ.ಎಲ್‌. ಅಶೋಕ್‌ ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದರು.

ಮಾಧವ ಗಾಡ್ಗಿàಳ್‌ ವರದಿ ಹಾಗೂ ಕಸ್ತೂರಿ ರಂಗನ್‌ ವರದಿ ಅವಾಸ್ತವಿಕ ಹಾಗೂ ಅವೈಜ್ಞಾನಿಕತೆಯಿಂದ ಕೂಡಿದೆ. ಈ ವರದಿಗಳು ಜಾರಿಯಾದರೆ ಪಶ್ಚಿಮಘಟ್ಟಗಳ ತಪ್ಪಲಿನಲ್ಲಿರುವ ಕೃಷಿ ನಾಶವಾಗುತ್ತದೆ. ಆ ಮೂಲಕ ಮಲೆನಾಡಿನವರ ಸಂಸ್ಕೃತಿ ಹಾಗೂ ಬದುಕನ್ನು ನಾಶ ಮಾಡಿದಂತಾಗುತ್ತದೆ. ಈ ವರದಿಯನ್ನು ಮರು ಪರಿಶೀಲನೆ ಮಾಡಿ ಮಲೆನಾಡು ಪ್ರದೇಶದಲ್ಲಿ ಕೃಷಿಗೆ ಪೂರಕವಾದ ಯೋಜನೆಗಳು ಸರ್ಕಾರ ಜಾರಿ ಮಾಡಲಿ.ಅರಣ್ಯಸಂರಕ್ಷಣೆ ಮಾಡುವ ಜವಾಬ್ದಾರಿ ಕೇವಲ ಮಲೆನಾಡು ಮತ್ತು ಪಶ್ಚಿಮ ಘಟ್ಟದ ಜನರದಲ್ಲ ಎಂಬುದನ್ನು ಎಲ್ಲರು ತಿಳಿಯಬೇಕು.
–  ಎ.ಕೆ.ಸುಬ್ಬಯ್ಯ, ಚಿಂತಕ

ವಿದೇಶಗಳಿಂದ ಹಣ ಪಡೆದು ನಡೆಯುತ್ತಿರುವ ಕೆಲವು ಎನ್‌ಜಿಒಗಳು ನೀಡಿರುವ ಅಂಕಿಅಂಶಗಳ ಆಧಾರದ ಮೇಲೆ ಮಾಧವ ಗಾಡ್ಗಿàಳ್‌ ವರದಿ ಹಾಗೂ ಕಸ್ತೂರಿ ರಂಗನ್‌ ವರದಿಯನ್ನು ಸಿದ್ಧಪಡೆಸಲಾಗಿದೆ. ಯಾವ ತಜ್ಞರು ಸ್ಥಳಕ್ಕೆ ಭೇಟಿ ಮಾಡಿ ಮಾತುಕತೆ ನಡೆಸಿಲ್ಲ. ಇದೊಂದು ಏಕಪಕ್ಷೀಯ ವರದಿ.
– ಕಲ್ಕುಳಿ ವಿಠಲ್‌ ಹೆಗಡೆ,  ಮಲೆನಾಡು ಉಳಿಸಿ ಹೋರಾಟ ಸಮಿತಿ ಸಂಚಾಲಕ

Advertisement

Udayavani is now on Telegram. Click here to join our channel and stay updated with the latest news.

Next