“ಗಾಂಚಾಲಿ’ ಎಂಬ ಸಿನಿಮಾ ಆರಂಭವಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಸದ್ದಿಲ್ಲದೇ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಹೊಸಬರ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಆ ತಂಡದಲ್ಲಿ ಕೆಲಸ ಮಾಡಿದ ಅನೇಕರು ನಿರೀಕ್ಷೆ ಕಂಗಳೊಂದಿಗೆ ಎದುರು ನೋಡುತ್ತಿರುತ್ತಾರೆ. ಆ ಸಾಲಿಗೆ “ಗಾಂಚಾಲಿ’ ಚಿತ್ರದ ನಾಯಕ ಆದರ್ಶ್ ಕೂಡಾ ಸೇರುತ್ತಾರೆ. “ಗಾಂಚಾಲಿ’ ಮೂಲಕ ತನಗೊಂದು ಬ್ರೇಕ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಆದರ್ಶ್.
ಎಲ್ಲಾ ಓಕೆ, “ಗಾಂಚಾಲಿ’ಯಲ್ಲಿ ಏನಿದೆ, ಟೈಟಲ್‌ಗೂ ಕಥೆಗೂ ಏನು ಸಂಬಂಧ ಎಂದು ನೀವು ಕೇಳಬಹುದು. ಅದಕ್ಕೆ ಆದರ್ಶ್ ಉತ್ತರಿಸೋದು ಹೀಗೆ, “ಇಡೀ ಸಿನಿಮಾದಲ್ಲಿ ಫ್ರೆಂಡ್‌ಶಿಪ್ ವ್ಯಾಲ್ಯೂ ಬಗ್ಗೆ ಹೇಳಿದ್ದೇವೆ. ಜೊತೆಗೆ ಸ್ನೇಹವನ್ನು ದುರುಪಯೋಗ ಪಡಿಸಿಕೊಳ್ಳಲು ಮತ್ತೂಬ್ಬ ವ್ಯಕ್ತಿ ಹೇಗೆ ಪ್ರಯತ್ನಿಸುತ್ತಾರೆ, ಇದರಿಂದ ಏನೆಲ್ಲಾ ತೊಂದರೆಗಳಾಗುತ್ತದೆ ಎಂಬ ಅಂಶಗಳ ಮೂಲಕ ಇಡೀ ಸಿನಿಮಾ ಸಾಗುತ್ತದೆ’ ಎನ್ನುತ್ತಾರೆ ಆದರ್ಶ್.
ಚಿತ್ರದ ಟೈಟಲ್ ಕಥೆಗೆ ತುಂಬಾ ಚೆನ್ನಾಗಿ ಹೊಂದಿಕೆಯಾಗುತ್ತದೆಯಂತೆ. “ಚಿಕ್ಕ ವಯಸ್ಸಿನಿಂದಲೇ ಗಾಂಚಾಲಿ ಮಾಡುತ್ತಲೇ ಇರುತ್ತಾರೆ. ಕೈಯಲ್ಲಿ ಕಾಸಿಲ್ಲದಿದ್ದರೂ ಶೋಕಿಗೇನೂ ಕಮ್ಮಿ ಇರೋದಿಲ್ಲ. ಸ್ಟೈಲಿಶ್ ಬಟ್ಟೆ ಹಾಕಿಕೊಂಡು, ಯಾವುದೋ ಮದುವೆ ಮನೆಗೆ ಹೋಗಿ ಊಟ ಮಾಡುತ್ತಾ ಗಾಂಚಾಲಿಯಲ್ಲೇ ಬದುಕುತ್ತಿರುತ್ತಾರೆ. ಆ ಕಾರಣದಿಂದ ಚಿತ್ರಕ್ಕೆ “ಗಾಂಚಾಲಿ’ ಎಂಬ ಟೈಟಲ್ ಇಡಲಾಗಿದೆ ಎಂಬ ವಿವರ ಅವರಿಂದ ಬರುತ್ತದೆ.
ಚಿತ್ರದಲ್ಲಿ ಆದರ್ಶ್, ಆಕಾಶ್ , ಪ್ರಕೃತಿ, ಅಖೀಲಾ, ನವ್ಯ, ರಾಜು ತಾಳಿಕೋಟೆ, ಮಿತ್ರ, ಮೋಹನ್ ಜುನೇಜಾ ಸೇರಿದಂತೆ ಅನೇಕರು ನಟಿಸಿದ್ದಾರೆ. “ಭಜರಂಗಿ’ ಲೋಕಿ, ಶರತ್ ಲೋಹಿತಾಶ್ವ ಇಲ್ಲಿ ಖಳರು. ಜೈ ಮಾರುತಿ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಈ ಚಿತ್ರ ನಿರ್ಮಾಣವಾಗಿದ್ದು, ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. “ಬಹದ್ದೂರ್’ ಚೇತನ್, ಎ.ಪಿ.ಅರ್ಜುನ್, ಚಂದನ್ ಸಾಹಿತ್ಯ ಚಿತ್ರಕ್ಕಿದೆ. ಚಿತ್ರ ನವೆಂಬರ್‌ನಲ್ಲಿ ತೆರೆ ಕಾಣಲಿದೆ.