ಹೊಸದಿಲ್ಲಿ: ಐಸಿಐಸಿಐ ಬ್ಯಾಂಕ್ ಮತ್ತು ವೀಡಿಯೋಕಾನ್ ಕಂಪೆನಿಯ ಸಾಲ ಹಗರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್‌ನ ಮಾಜಿ ಮುಖ್ಯಸ್ಥೆ ಹಾಗೂ ಸಿಇಒ ಚಂದಾ ಕೊಚ್ಚಾರ್, ಅವರ ಪತಿ ದೀಪಕ್ ಕೊಚ್ಚಾರ್ ಹಾಗೂ ವೀಡಿಯೋಕಾನ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ಧೂತ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ನಿಯಮಗಳನ್ನು ಮೀರಿ ಸಾಲ ಮಂಜೂರು ಮಾಡಿರುವ ಆರೋಪದಡಿ, ಕಳೆದ ವರ್ಷ ಮಾರ್ಚ್ ನಲ್ಲಿ ವೇಣುಗೋಪಾಲ್ ಧೂತ್, ಚಂದಾ ಕೊಚ್ಚಾರ್ ಹಾಗೂ ಇತರ ಅನಾಮಧೇಯ ವ್ಯಕ್ತಿಗಳ ವಿರುದ್ಧ ಸಿಬಿಐ ಪೂರ್ವಭಾವಿ ತನಿಖೆ (ಪಿಇ) ದಾಖಲಿಸಿತ್ತು. ಅದಾಗಿ, 10 ತಿಂಗಳ ಅನಂತರ, ಈಗ ಪ್ರಕರಣ ದಾಖಲಿಸಲಾಗಿದೆ. ಹೊಸದಾಗಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ, ಗುರುವಾರ ಮುಂಬೈ ಮತ್ತು ಔರಂಗಾಬಾದ್‌ನಲ್ಲಿರುವ ವೀಡಿಯೋಕಾನ್ ಕಂಪೆನಿಯ ಕೇಂದ್ರ ಕಚೇರಿ ಹಾಗೂ ನ್ಯೂಪವರ್ ರಿನ್ಯೂವಬಲ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಸುಪ್ರೀಂ ಎನರ್ಜಿ ಮೇಲೆ ಸಿಬಿಐ ಏಕಕಾಲದಲ್ಲಿ ದಾಳಿ ನಡೆಸಿದೆ.