ಕೈಕಂಬದಲ್ಲಿ ಸೆಲೂನ್ ಹೊರಗಡೆ ಕುಳಿತಿದ್ದೆ , ನನ್ನ ಸರದಿಗಾಗಿ ಕಾಯುತ್ತ. ಎಲ್ಲಿಂದಲೋ ಪುರ್ರನೆ ಹಾರಿಬಂದ ಗುಬ್ಬಿಗಳಂತೆ ಬಂದ ಪುಟಾಣಿಗಳಿಂದಾಗಿ ಬಿಕೋ ಅನ್ನುತ್ತಿದ್ದ ಪಕ್ಕದ ಅಂಗಡಿ ನೋಡನೋಡುತ್ತಿದ್ದಂತೆಯೇ ತುಂಬಿ ಹೋಯ್ತು. ಅಂಗಡಿಯೆಲ್ಲಾ ಹಕ್ಕಿಗಳ ಕಲರವದಿಂದ ತುಂಬಿ ವಾತಾವರಣಕ್ಕೆ ಲವಲವಿಕೆ ಬಂತು. ಅದು ಬಹುಶಃ ಅಂಗಡಿಯಾತನಿಗೆ ನಿತ್ಯದ ವ್ಯವಹಾರ. ಎಲ್ಲರದ್ದೂ ಒಂದೇ ಬೇಡಿಕೆ. ಅದನ್ನು ಪೂರೈಸುವುದಷ್ಟೇ ಆತನ ಕೆಲಸ. ಪುಟಾಣಿಗಳ ಗುಂಪು ಮೆಲ್ಲನೇ ಕರಗುವಾಗ ಎಲ್ಲರ ಕೈಯಲ್ಲೂ ಒಂದು ರೂಪಾಯಿಯ ಕೋಲ್ಡ… ಪೆಪ್ಸಿ. ಅದರಲ್ಲಿ ಕೆಲವೊಂದು ಕೋಲ, ಕೆಲವೊಂದು ಆರೆಂಜ್. ಹಲವಾರು ನೆನಪುಗಳು ಒಮ್ಮೆಗೇ ಮನದಲ್ಲಿ ಸುಳಿದು ಮನಸ್ಸು ಅರಳಿದ್ದು ಮುಖದ ಮೇಲೆ ಕಾಣುವಂತಿತ್ತು. ಆದರೂ ಕೆಲವು ಹುಡುಗರು ಮಾತ್ರ ಖಾಲಿ ಕೈಯಲ್ಲಿ ಇನ್ನೂ ಅಲ್ಲಿಯೇ ನಿಂತಿದ್ದರು. ಕರೆದು ಕೇಳಿದೆ, “”ಯಾಕೆ ನೀವು ತಗೊಳ್ಳೋಲ್ವಾ?” ಅಂತ. ಅವರಿಂದ ಏನೂ ಉತ್ತರ ಬಾರದೆ ಇದ್ದಾಗ ಅಂಗಡಿಯವನನ್ನು ಕೇಳಿದೆ.ಅದಕ್ಕವನು, “”ಹೋ ಬಿಡಿ ಸರ್, ಇದು ನಿತ್ಯದ ಕತೆ. ಎಲ್ಲರೂ ಬರ್ತಾರೆ ಪೆಪ್ಸಿಗಾಗಿ. ಒಂದು ರೂಪಾಯಿ ಕೊಟ್ಟವರಿಗೆಲ್ಲ ಕೊಡ್ತೇನೆ. ಕೆಲವರತ್ರ ದುಡ್ಡಿರಲ್ಲ, ಫ್ರೆಂಡ್ಸ್ ತೆಗ್ಸಿ ಕೊಡ್ತಾರೆ ಅಂತ ಅವರ ಜೊತೆಗೇ ಬರ್ತಾರೆ. ದಿನ ಎಲ್ಲಿ ಕೊಡ್ಲಿಕ್ಕಾಗ್ತದೆ ಅವರಿಗೆ. ಹಾಗಾಗಿ ಕೆಲವು ದಿನ ಇವರಿಗೆ ಸಿಗಲ್ಲ”
ಎಷ್ಟೊಂದು ಸಣ್ಣ ಸಣ್ಣ ಆಸೆಗಳು, ಆದರೂ ಕೈಗೂಡೋದು ಎಷ್ಟು ಕಷ್ಟ ಅಲ್ವಾ?
ನೆನಪುಗಳು ಒಂದರ ಮೇಲೊಂದರಂತೆ ದಾಂಗುಡಿಯಿಟ್ಟು ಮನಸ್ಸು ಬಾಲ್ಯಕ್ಕೆ ಜಿಗಿಯಿತು. ಅವು ಬೇಸಿಗೆಯ ರಜೆಯ ದಿನಗಳು. ಬೆಳಗ್ಗೆಯಿಂದ ಅಂಗಳಕ್ಕೆ, ಗದ್ದೆಗೆ ಆಡಲು ಇಳಿದರೆ ಯಾವುದೂ ನೆನಪಾಗುತ್ತಿರಲಿಲ್ಲ. ಊಟಕ್ಕೆ ಬನ್ನಿ ಅಂತ ಅಮ್ಮ ದೊಣ್ಣೆ ತಂದು ನಮ್ಮ ಹಿಂದೆ ಓಡುವಾಗಲೇ ಆಟಕ್ಕೆ ಬ್ರೇಕ್ ಬೀಳುತ್ತಿದ್ದದ್ದು. ಇದರ ನಡುವೆಯೂ ಒಂದು ಕೂಗಿಗೆ, ಒಂದು ಸಿಗ್ನಲ್‌ಗೆ ನಮ್ಮ ಕಿವಿಗಳು ಕಾತರದಿಂದ ಕಾಯುತ್ತಲೇ ಇರುತ್ತಿದ್ದವು. ಆ ಧ್ವನಿ ನಮ್ಮನ್ನು ತಲುಪುವುದೇ ತಡ ಯಾವುದೋ ಮೋಹನ ಮುರಳಿಯ ದನಿಗೆ ಶತಮಾನಗಳಿಂದ ಕಾಯುತ್ತ ಕುಳಿತಿದ್ದೆವೇನೋ ಎಂಬಂತೆ ಆಟವನ್ನೆಲ್ಲ ಬಿಟ್ಟು ಓಡುತ್ತಿದ್ದೆವು. ಆ ಮಧುರ ಧ್ವನಿ ಮತ್ತಾವುದೂ ಅಲ್ಲ.ಅದು, ಎರಡು ದಿನಗಳಿಗೊಮ್ಮೆ ಬೆಳಗ್ಗೆ ಹನ್ನೊಂದು ಗಂಟೆಯ ಬಿಸಿಲಲ್ಲಿ ಬರುತ್ತಿದ್ದ ಕೃಷ್ಣಪ್ಪನ ಸಂಗಮ್ ಐಸ್‌ಕ್ಯಾಂಡಿಯ ಸೈಕಲ್‌ನ “ಪೋಂ… ಪೋಂ…’ ಸಿಗ್ನಲ…! ಮನೆ ಹತ್ತಿರದವರೆಗೆ ಬರಲು ದಾರಿಯ ವ್ಯವಸ್ಥೆ ಇಲ್ಲದ್ದರಿಂದ ಮನೆಯಿಂದ ಸುಮಾರು ಅರ್ಧ ಕಿ.ಮೀ. ದೂರದ ಗುಡ್ಡದ ರಸ್ತೆಯಲ್ಲಿಯೇ ನಿಂತು ನಮ್ಮ ಕಿವಿಗಳನ್ನು ತಲುಪುವವರೆಗೂ ಹಾರ್ನ್ ಮಾಡುತ್ತಿದ್ದ. ಅದು ನಮ್ಮ ಕಿವಿಗಳನ್ನು ತಲುಪಿದ್ದೇ ತಡ ಮತ್ತೆ ತಡ ಮಾಡುತ್ತಿರಲಿಲ್ಲ, ಮನೆಯ ಒಳಗೆ ಓಡಿ ಹಣಕ್ಕಾಗಿ ಅಮ್ಮನ್ನು ಪೀಡಿಸಿ ಹಣ ಪಡೆದು ಓಡುತ್ತಿದ್ದೆವು ಐಸ್‌ಕ್ಯಾಂಡಿಗಾಗಿ, ಗೊಲ್ಲನ ಕೊಳಲನಾದಕ್ಕೆ ಮನಸೋತು ಓಡಿಬರುವ ಗಂಗೆ-ಗೌರಿಗಳಂತೆ! ಕ್ಯಾಂಡಿಯನ್ನು ಚೀಪುತ್ತ ಮರಳಿ ಬರುವಾಗ ಕಾಲವೇ ಕರಗಿ ಹೋಗುತ್ತಿತ್ತು, ಮಕ್ಕಳ ಸಂತೋಷದ ಆ ಕ್ಷಣಗಳಲ್ಲಿ.ಕೆಲವೊಮ್ಮೆ ಮನೆಯವರೆಲ್ಲರಿಗೂ ಐಸ್‌ಕ್ಯಾಂಡಿಯ ದಾಹವಾಗುವುದುಂಟು. ಆಗ ಅಗಲವಾದ ಬಟ್ಟಲನ್ನು ಹಿಡಿದುಕೊಂಡು ಹೋಗುತ್ತಿದ್ದೆವು. ಬರುವಾಗ ಐಸ್‌ಕ್ಯಾಂಡಿ ಕರಗಿದರೂ ಅದರ ನೀರಾದರೂ ಮನೆಯ ಹಿರಿಯರಿಗೆ ಉಳಿಯುತ್ತಿತ್ತು!
ಆ ಐಸ್‌ಕ್ಯಾಂಡಿಯನ್ನು ಚೀಪಲಾಗದ ದಿನಗಳೆಂದರೆ ನಮಗೆ ಏನನ್ನೋ ಕಳೆದುಕೊಂಡಂತೆ.ಹೆಚ್ಚಾಗಿ ಬೇಸಗೆಯ ದಿನಗಳಲ್ಲಿ ಮಾತ್ರ ಬರುತ್ತಿದ್ದ ಈ ಕೃಷ್ಣಪ್ಪ ನಮ್ಮ ಪಾಲಿಗೆ ಬಲು ಹತ್ತಿರದ ನೆಂಟನಾದರೆ ನನ್ನ ಅಪ್ಪನ ಪಾಲಿಗೆ ತೀರದ ತಲೆನೋವಾಗಿದ್ದ ಅನ್ನುವುದು ಆಗ ನನಗೆ ತಿಳಿದಿರಲೇ ಇಲ್ಲ ಮತ್ತು ಬಹಳ ದಿನಗಳವರೆಗೆ ಕೂಡ! ಎಲ್ಲಾ ದಿನ ಈ ಐಸ್‌ಕ್ಯಾಂಡಿಗಾಗಿ ಐದು-ಹತ್ತು ರೂಪಾಯಿ ಕೊಡುವುದೆಂದರೆ ಅದು ಸಣ್ಣ ಮೊತ್ತವಾಗಿರಲಿಲ್ಲ ಅಪ್ಪನ ಪಾಲಿಗೆ. ಬೇಸಾಯವನ್ನೇ ನಂಬಿಕೊಂಡಿದ್ದ ಆದಾಯ, ಕೂಡು ಕುಟುಂಬವಾದ್ದರಿಂದ ಮನೆ ತುಂಬಾ ಮಕ್ಕಳು. ಅವರಿಗೆಲ್ಲ ವಾರದಲ್ಲಿ ಮೂರು-ನಾಲ್ಕು ದಿನ ಈ ಐಸ್ ಕ್ಯಾಂಡಿ ಕೊಡ್ಸೋದಂದ್ರೆ ಸುಲಭದ ಮಾತಾಗಿರಲಿಲ್ಲ. ಈ ಯಾವುದೇ ವಿಷಯ ಗೊತ್ತಿಲ್ಲದೇ ನಾವು ದಿನಾ ದಿನ ಕ್ಯಾಂಡಿಗಾಗಿ ಕಾತರದಿಂದ ಕಾಯುತ್ತಿ¨ªೆವು. ಯಾವತ್ತೂ ನಮಗೆ ನಿರಾಶೆಯನ್ನುಂಟು ಮಾಡುತ್ತಿರಲಿಲ್ಲ.
ಆದರೆ, ಈ ನಮ್ಮ ಸಂತೋಷದ ಕ್ಷಣಗಳ ಮೇಲೆ ಯಾವ ಕೆಟ್ಟ ದೈವದ ಕಣ್ಣು ಬಿತ್ತೋ, ಯಾರು ನಮ್ಮ ಖುಷಿಯನ್ನು ಕಂಡು ಕರುಬಿದರೋ ಗೊತ್ತಿಲ್ಲ. ಗುರುವಾರದ ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ಹನ್ನೊಂದು ಕಳೆದು ಗಂಟೆ ಹನ್ನೆರಡಾದರೂ ಹಾರ್ನ್ ಕೇಳಲೇ ಇಲ್ಲ. ಗುರುವಾರ ತಪ್ಪದೇ ಬರುತ್ತಿದ್ದ ಸಂಗಮ್‌ನ ಕೃಷ್ಣಪ್ಪ ಆ ದಿನ ಹಾರ್ನ್ ಹಾಕಲೇ ಇಲ್ಲ. ಬಹುಶಃ ಹಾರ್ನ್ ಕೆಟ್ಟು ಹೋಗಿರಬೇಕು ಅಂತ ಗುಡ್ಡದ ರಸ್ತೆಯವರೆಗೂ ಹೋದರೆ ಅಲ್ಲಿ ಐಸ್‌ಕ್ಯಾಂಡಿ ಗಾಡಿ ಇರಲೇ ಇಲ್ಲ. ನಿರಾಶೆಯಿಂದ ವಾಪಸಾದೆವು. ಆದರೆ, ಇದು ಮತ್ತೆ ಹೀಗೆಯೇ ಮುಂದುವರೆದಾಗ ನಮಗಾದ ಬೇಸರಕ್ಕೆ ಮಿತಿಯೇ ಇರಲಿಲ್ಲ. ಮತ್ತೆ ಆ ವರ್ಷದ ಬೇಸಿಗೆಯಲ್ಲಿ ಸಂಗಮ್ ಐಸ್‌ಕ್ಯಾಂಡಿಯ ಕೃಷ್ಣಪ್ಪನ ಸೈಕಲ್ ಹಾರ್ನ್ ಕೇಳಲೇ ಇಲ್ಲ. ಯಾವುದೋ ಒಂದು ರೂಟೀನ್ ಅನ್ನು ನಾವು ಕಳೆದುಕೊಂಡೇ ವರ್ಷದ ಬೇಸಗೆಯ ರಜೆಯನ್ನು ಮುಗಿಸಿದೆವು. ಆದರೆ, ಹಠಾತ್ ಆಗಿ ಕೃಷ್ಣಪ್ಪನ ಸೈಕಲ್ ಕಣ್ಮರೆಯಾದದ್ದು ಹೇಗೆ ಅಂತ ಗೊತ್ತಾಗಲೇ ಇಲ್ಲ ಮತ್ತು ಆ ಸೀಕ್ರೇಟ್ ಗೊತ್ತಾಗಲು ಮತ್ತೆ ಮುಂದಿನ ವರ್ಷದ ಊರ ಜಾತ್ರೆಯೇ ಬರಬೇಕಾಯಿತು. ಊರಿನ ಜಾತ್ರೆಯಲ್ಲಿ ಸುತ್ತಾಡಿ ಐಸ್‌ಕ್ಯಾಂಡಿ ಕೊಳ್ಳಲೆಂದು ಹೋದಾಗ ಇದೇ ಕೃಷ್ಣಪ್ಪ ಇದ್ದದ್ದನ್ನು ನೋಡಿ ಅಲ್ಲಿಗೆ ಹೋದಾಗ ಕೃಷ್ಣಪ್ಪನ ಕಣ್ಮರೆಯ ವಿಷಯ ತಿಳಿಯಿತು. ಪ್ರತೀದಿನ ಮಕ್ಕಳ ಐಸ್‌ಕ್ಯಾಂಡಿಗಾಗಿ ಹಣ ಕೊಡಲಾಗದೇ ಅಪ್ಪ ಮತ್ತು ಹಳ್ಳಿಯ ಕೆಲವರು ಕೃಷ್ಣಪ್ಪನನ್ನು ಊರಿಗೇ ಬಾರದಂತೆ ತಾಕೀತು ಮಾಡಿದ್ದೇ ಆ ವರ್ಷದ ಹಠಾತ್ ಕಣ್ಮರೆಗೆ ಕಾರಣವಾಗಿತ್ತು.
ಎಷ್ಟೊಂದು ಸಣ್ಣ ಸಣ್ಣ ಆಸೆಗಳು, ಆದರೂ ಕೈಗೂಡೋದು ಎಷ್ಟು ಕಷ್ಟ ಅಲ್ವಾ?
ನೆನಪುಗಳಿಂದ ಹೊರಬಂದು ಉಳಿದ ಮಕ್ಕಳಿಗೆ ಪೆಪ್ಸಿ ಕೊಡಿಸಿ ಕಳಿಸಿದೆ. ಅವರು ಚೀಪುತ್ತಾ ಹೋದಾಗ ಅವರ ಕಣ್ಣುಗಳಲ್ಲಿ ಕಾಣುತ್ತಿದ್ದ ಸಂತೋಷದಲ್ಲಿ ಮತ್ತೆ ಐಸ್‌ಕ್ಯಾಂಡಿಗಾಗಿ ಕಾತರದಿಂದ ಕಾಯುತ್ತಿದ್ದ ಬಾಲಕನಾದೆ.
ರವೀಂದ್ರ ನಾಯಕ್