ಹ್ಯಾಮಿಲ್ಟನ್: ವನಿತಾ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ 2ನೇ ದಿನವೂ 2 ಶತಕ ದಾಖಲಾಗಿದೆ. ಆಸ್ಟ್ರೇಲಿಯದ ಓಪನರ್ ರಶೆಲ್ ಹೇನ್ಸ್ ಮತ್ತು ಇಂಗ್ಲೆಂಡಿನ ಮಧ್ಯಮ ಕ್ರಮಾಂಕದ ಆಟಗಾರ್ತಿ ನಥಾಲಿ ಶೀವರ್ ಸೆಂಚುರಿ ಬಾರಿಸಿ ದೊಡ್ಡ ಮೊತ್ತದ ರೋಮಾಂಚನವನ್ನು ತೆರೆದಿರಿಸಿದರು. ಈ ಪಂದ್ಯವನ್ನು ಆಸ್ಟ್ರೇಲಿಯ 12 ರನ್ನುಗಳಿಂದ ಗೆದ್ದಿತು.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ ಮೂರೇ ವಿಕೆಟಿಗೆ 310 ರನ್ ಪೇರಿಸಿತು. ಇದರಲ್ಲಿ ರಶೆಲ್ ಹೇನ್ಸ್ ಪಾಲು 130 ರನ್. 131 ಎಸೆತಗಳ ಈ ಆಟದಲ್ಲಿ 14 ಬೌಂಡರಿ, ಒಂದು ಸಿಕ್ಸರ್ ಒಳಗೊಂಡಿತ್ತು. ಮೆಗ್ ಲ್ಯಾನಿಂಗ್ 86 ರನ್ ಬಾರಿಸಿದರು.
ಇಂಗ್ಲೆಂಡ್ 8 ವಿಕೆಟಿಗೆ 298 ರನ್ ಬಾರಿಸಿ ಗೆಲುವಿನಿಂದ ವಂಚಿತವಾಯಿತು. ಆಗ ನಥಾಲಿ ಶೀವರ್ 109 ರನ್ ಬಾರಿಸಿ ಅಜೇಯರಾಗಿದ್ದರು.
ಸಣ್ಣ ಮೊತ್ತ ಉಳಿಸಿಕೊಂಡ ದಕ್ಷಿಣ ಆಫ್ರಿಕಾ
ಡ್ಯುನೆಡಿನ್: ದಿನದ ಇನ್ನೊಂದು ಪಂದ್ಯ ಸಣ್ಣ ಮೊತ್ತಕ್ಕೆ ಸಾಕ್ಷಿಯಾಯಿತು. ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ ಕೇವಲ 207 ರನ್ ಮಾಡಿಯೂ ಪಂದ್ಯವನ್ನು ಉಳಿಸಿಕೊಂಡಿತು. ಬಾಂಗ್ಲಾ 49.3 ಓವರ್‌ಗಳಲ್ಲಿ 175ಕ್ಕೆ ಆಲೌಟ್ ಆಯಿತು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-49.5 ಓವರ್‌ಗಳಲ್ಲಿ 207 (ಕಾಪ್ 42, ವೋಲ್ವಾರ್ಟ್ 41, ಟ್ರಯಾನ್ 39, ತ್ರಿಸ್ನಾ 25ಕ್ಕೆ 3, ಆಲಂ 28ಕ್ಕೆ 2, ಮೋನಿ 36ಕ್ಕೆ 2). ಬಾಂಗ್ಲಾದೇಶ-49.3 ಓವರ್‌ಗಳಲ್ಲಿ 175 (ಶರ್ಮಿನ್ 34, ನಿಗರ್ ಸುಲ್ತಾನಾ 29, ಶಮಿಮಾ 27, ಮೋನಿ 27, ಖಾಕಾ 32ಕ್ಕೆ 4, ಕ್ಲಾಸ್ 36ಕ್ಕೆ 2).
ಪಂದ್ಯಶ್ರೇಷ್ಠ: ಅಯಬೊಂಗಾ ಖಾಕಾ.