ಪರ್ತ್: ಹಾಲಿ ಟಿ20 ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವನ್ನು ಅವರದೇ ನೆಲದಲ್ಲಿ ಮಣಿಸಿ ತಮ್ಮ ಟಿ20 ವಿಶ್ವಕಪ್ ಅಭಿಯಾನವನ್ನು ಯಶಸ್ವಿಯಾಗಿ ಪ್ರಾರಂಭಿಸಿದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇಂದು ಬಾಂಗ್ಲಾ ಎದುರಿನ ತಮ್ಮ ಎರಡನೇ ಪಂದ್ಯದಲ್ಲಿ ಸಾಧಾರಣ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಹರ್ಮನ್ ಪ್ರೀತ್ ಕೌರ್ ಬಳಗ ನಿಗದಿತ 20 ಓವರುಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 142 ರನ್ ಗಳನ್ನು ಕಲೆಹಾಕಿತು. ಈ ಮೂಲಕ ಬಾಂಗ್ಲಾ ಮಹಿಳೆಯರ ಗೆಲುವಿಗೆ 143 ರನ್ ಗಳ ಅಗತ್ಯವಿದೆ.
ಟಾಸ್ ಗೆದ್ದ ಬಾಂಗ್ಲಾದೇಶ ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಅವರ ಸ್ಪೋಟಕ ಬ್ಯಾಟಿಂಗ್ (17 ಎಸೆತೆಗಳಲ್ಲಿ 39 ರನ್) ಮತ್ತು ಜೆಮಿಮಾ ರೋಡ್ರಿಗಸ್ (34) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನೊಂದಿಗೆ ಭಾರತ ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸುವಂತಾಯಿತು.
ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕೈಕೊಟ್ಟ ಕಾರಣ ಬಾಂಗ್ಲಾ ಮಹಿಳೆಯರ ಎದುರು ಭಾರೀ ಮೊತ್ತವನ್ನು ಕಲೆಹಾಕುವ ಭಾರತೀಯ ಮಹಿಳಾ ತಂಡದ ಪ್ರಯತ್ನ ಯಶಸ್ವಿಯಾಗಲಿಲ್ಲ. ಇನ್ನಿಂಗ್ಸ್ ನ ಕೊನೆಯಲ್ಲಿ ವೇದ ಕೃಷ್ಣಮೂರ್ತಿ ವೇಗದ ಬ್ಯಾಟಿಂಗ್ ನಡೆಸಿದ ಕಾರಣ ಭಾರತ ಈ ಮೊತ್ತವನ್ನು ದಾಖಲಿಸಲು ಸಾಧ್ಯವಾಯಿತು. ವೇದ ಕೃಷ್ಣಮೂರ್ತಿ ಅವರು ಕೇವಲ 11 ಎಸೆತಗಳಲ್ಲಿ 4 ಬೌಂಡರಿ ಸಹಿತ 20 ರನ್ ಬಾರಿಸಿ ಔಟಾಗದೇ ಉಳಿದರು.
ಭಾರತದ ಪರ ಶೆಫಾಲಿ ಶರ್ಮಾ (39), ಜೆಮಿಮಾ ರೋಡ್ರಿಗಸ್ (34), ವೇದ ಕೃಷ್ಣಮೂರ್ತಿ (20) ಮತ್ತು ರಿಚಾ ಘೋಷ್ (14) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಶೆಫಾಲಿ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ನಲ್ಲಿ 4 ಸಿಕ್ಸರ್ ಸಹ ಸೇರಿತ್ತು.
ಬಾಂಗ್ಲಾ ಪರ ಸಲ್ಮಾ ಖಟೂನ್ ಹಾಗೂ ಪನ್ನಾ ಘೋಷ್ ಅವರು ತಲಾ 2 ವಿಕೆಟ್ ಪಡೆದರು.