ದುಬಾೖ: ಹಾಲಿ ಚಾಂಪಿಯನ್ ಭಾರತವು ಮಲೇಷ್ಯ ದಲ್ಲಿ ಮುಂದಿನ ವರ್ಷ ನಡೆಯಲಿರುವ ಎರಡನೇ ಐಸಿಸಿ ಅಂಡರ್ 19 ವನಿತಾ ಟಿ20 ವಿಶ್ವಕಪ್ ಕೂಟದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಕೂಟವು ಜ. 18ರಿಂದ ಫೆ. 2ರ ವರೆಗೆ ನಡೆಯಲಿದೆ.
ಭಾರತವು ಆತಿಥ್ಯ ವಹಿಸಲಿರುವ ಮಲೇಷ್ಯ ಸಹಿತ ವೆಸ್ಟ್‌ಇಂಡೀಸ್ ಮತ್ತು ಶ್ರೀಲಂಕಾ ಜತೆ “ಎ’ ಬಣದಲ್ಲಿದೆ. ಇಂಗ್ಲೆಂಡ್, ಐರ್ಲೆಂಡ್, ಪಾಕಿಸ್ಥಾನ ಮತ್ತು ಅಮೆರಿಕ “ಬಿ’ ಬಣದಲ್ಲಿದ್ದರೆ ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್, ಸಮೋವ ಮತ್ತು ಆಫ್ರಿಕಾ ಖಂಡದ ಅರ್ಹತಾ ತಂಡ “ಸಿ’ ಬಣದಲ್ಲಿಯೂ ಆಸ್ಟ್ರೇಲಿಯ, ಬಾಂಗ್ಲಾದೇಶ, ಸ್ಕಾಟ್ಲೆಂಡ್ ಮತ್ತು ಏಷ್ಯಾ ಖಂಡದ ಅರ್ಹತಾ ತಂಡ “ಡಿ’ ಬಣದಲ್ಲಿದೆ.
ರೌಂಡ್ ರಾಬಿನ್ ಹಂತದಲ್ಲಿ ಎಲ್ಲ ತಂಡಗಳು ಎದುರಾಳಿ ವಿರುದ್ಧ ಆಡಲಿದ್ದು ಪ್ರತಿ ಬಣದ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೇರಲಿವೆ. ಸೂಪರ್ ಸಿಕ್ಸ್ ಹಂತದಲ್ಲಿ 12 ತಂಡಗಳನ್ನು ಎರಡು ಬಣಗಳಲ್ಲಿ ವಿಂಗಡಿಸಲಾಗುತ್ತದೆ. ಇಲ್ಲಿ ಪರಸ್ಪರ ಮುಖಾಮುಖೀಯಾದ ಬಳಿಕ ಅಗ್ರ ಎರಡು ತಂಡಗಳು ಸೆಮಿಫೈನಲಿಗೇರಲಿವೆ. ಫೈನಲ್ ಪಂದ್ಯ ಫೆ. 2ರಂದು ನಡೆಯಲಿದೆ.
ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಉದ್ಘಾಟನ ವರ್ಷದ ಕೂಟದಲ್ಲಿ ಭಾರತವು ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿತ್ತು.