ಮುಂಬೈ: ಇನ್ನು ಕೆಲವೇ ದಿನಗಳಲ್ಲಿ ಕ್ರಿಕೆಟ್ ನ ಅತಿದೊಡ್ಡ ಕೂಟ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಆರಂಭವಾಗಲಿದೆ. ಅಕ್ಟೋಬರ್ 5ರಂದು ಅಹಮದಾಬಾದ್ ನಲ್ಲಿ ಉದ್ಘಾಟನಾ ಪಂದ್ಯದೊಂದಿಗೆ ವಿಶ್ವಕಪ್ ಗೆ ಚಾಲನೆ ಸಿಗಲಿದೆ. ಕೂಟದ ಯಶಸ್ಸಿಗಾಗಿ ಐಸಿಸಿ ಮತ್ತು ಬಿಸಿಸಿಐ ಸಕಲ ಸಿದ್ದತೆ ನಡೆಸುತ್ತಿದೆ. ಇದೀಗ ಐಸಿಸಿ ಕೂಟದ ಬಹುಮಾನದ ವಿವರವನ್ನು ಬಹಿರಂಗ ಪಡಿಸಿದೆ.
2023ರ ಏಕದಿನ ವಿಶ್ವಕಪ್ ವಿಜೇತರು ನಾಲ್ಕು ಮಿಲಿಯನ್ ಯುಎಸ್ ಡಾಲರ್ (ಸುಮಾರು 33 ಕೋಟಿ ರೂ) ಪಡೆಯಲಿದ್ದಾರೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನವೆಂಬರ್ 19 ರಂದು ನಡೆಯಲಿರುವ ಫೈನಲ್ ನ ರನ್ನರ್ ಅಪ್ ತಂಡವು ಎರಡು ಮಿಲಿಯನ್ ಯುಎಸ್ ಡಾಲರ್ ಹಣ ಬಹುಮಾನ ರೂಪದಲ್ಲಿ ಪಡೆಯಲಿದೆ.
ಹತ್ತು ತಂಡಗಳ ಕೂಟವು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅದರಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿ ಫೈನಲ್ ಆಡಲಿದೆ. ಗುಂಪು ಹಂತದಲ್ಲಿ ಪ್ರತಿ ಗೆಲುವಿಗಾಗಿ ತಂಡಗಳು 40,000 ಯುಎಸ್ ಡಾಲರ್ ಪಡೆಯುತ್ತವೆ. ಗುಂಪು ಹಂತದ ಕೊನೆಯಲ್ಲಿ, ನಾಕೌಟ್‌ಗಳನ್ನು ತಲುಪಲು ವಿಫಲವಾದ ತಂಡಗಳು ತಲಾ 100,000 ಯುಎಸ್ ಡಾಲರ್ ಪಡೆಯುತ್ತವೆ. ಸೆಮಿ ಫೈನಲ್ ನಲ್ಲಿ ಸೋಲನುಭವಿಸಿದ ತಂಡಗಳು ತಲಾ 800,000 ಯುಎಸ್ ಡಾಲರ್ ಪಡೆಯಲಿದೆ.
ಇದನ್ನೂ ಓದಿ:B’luru; ವಿವಾಹವಾಗುವುದಾಗಿ ಮತಾಂತರಕ್ಕೆ ಕಿರುಕುಳ: ಕಾಶ್ಮೀರದ ಯುವಕನ ಬಂಧನ
13ನೇ ಆವೃತ್ತಿಯ ಏಕದಿನ ವಿಶ್ವಕಪ್ ಈವೆಂಟ್ ನಲ್ಲಿ ಒಟ್ಟು 10 ತಂಡಗಳು ಟ್ರೋಫಿಗಾಗಿ ಸೆಣಸಲಿವೆ. ನ್ಯೂಜಿಲ್ಯಾಂಡ್, ಇಂಗ್ಲೆಂಡ್, ಬಾಂಗ್ಲಾದೇಶ, ಪಾಕಿಸ್ತಾನ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಸೂಪರ್ ಲೀಗ್‌ನಿಂದ ಮುನ್ನಡೆದರೆ ಭಾರತವು ಆತಿಥೇಯರಾಗಿ ಅರ್ಹತೆ ಪಡೆದಿದೆ. ಉಳಿದೆರಡು ತಂಡಗಳಾದ ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ ತಂಡಗಳು ವಿಶ್ವಕಪ್ ಅರ್ಹತಾ ಕೂಟದಿಂದ ಮುಖ್ಯ ಕೂಟಕ್ಕೆ ಅರ್ಹತೆ ಸಂಪಾದಿಸಿವೆ.
ಕ್ರಿಕೆಟ್ ಮಹಾಕೂಟದಲ್ಲಿ 10 ಸ್ಟೇಡಿಯಂಗಳಲ್ಲಿ 48 ಪಂದ್ಯಗಳು ನಡೆಯಲಿದೆ. ಅಕ್ಟೋಬರ್ 5ರಂದು ಕಳೆದ ವಿಶ್ವಕಪ್ ನ ಫೈನಲಿಸ್ಟ್ ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ಗಳು ಮೊದಲ ಪಂದ್ಯದಲ್ಲಿ ಸೆಣಸಾಡಲಿದೆ.