ದುಬೈ: ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಇಂಗ್ಲೆಂಡ್ ವಿರುದ್ಧದ ತವರಿನಲ್ಲಿ ನಡೆಯುತ್ತಿರುವ ಸರಣಿಯಲ್ಲಿ ಪ್ರಚಂಡ ಫಾರ್ಮ್‌ನ ಹಿನ್ನೆಲೆಯಲ್ಲಿ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಐಸಿಸಿ ರ‍್ಯಾಂಕಿಂಗ್ ಟೆಸ್ಟ್ ಬ್ಯಾಟ್ಸ್ ಮ್ಯಾನ್ ಅಗ್ರ-10 ರೊಳಗೆ ಕಾಣಿಸಿಕೊಂಡಿದ್ದಾರೆ.
2023 ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಜೈಸ್ವಾಲ್, 727 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡು ಸ್ಥಾನ ಮೇಲಕ್ಕೇರಿ 10 ನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 22 ವರ್ಷದ ಜೈಸ್ವಾಲ್ 600ಕ್ಕಿಂತ ಹೆಚ್ಚಿನ ರನ್ ಗಳಿಸಿದ ಭಾರತೀಯ ಬ್ಯಾಟ್ಸ್ ಮ್ಯಾನ್ ವಿಶೇಷ ಕ್ಲಬ್‌ಗೆ ಸೇರುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾಧನೆ ಮಾಡಿದ ಏಕೈಕ ಎಡಗೈ ಬ್ಯಾಟ್ಸ್ ಮ್ಯಾನ್ ಆಗಿದ್ದಾರೆ. ಸುನಿಲ್ ಗವಾಸ್ಕರ್, ದಿಲೀಪ್ ಸರ್ದೇಸಾಯಿ, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಟೆಸ್ಟ್ ಸರಣಿಯಲ್ಲಿ 600 ರನ್ ಗಡಿ ದಾಟಿದ ಐದನೇ ಭಾರತೀಯ ಆಟಗಾರರಾಗಿದ್ದಾರೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ 11ನೇ ಸ್ಥಾನದಲ್ಲಿದ್ದಾರೆ.ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳ ಸಂಪೂರ್ಣ ಸರಣಿಯನ್ನು ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಕೂಡ ಒಂದು ಸ್ಥಾನ ಮೇಲೇರಿ ಎಂಟನೇ ಸ್ಥಾನದಲ್ಲಿದ್ದಾರೆ.
ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಇಂಗ್ಲಿಷ್ ಬ್ಯಾಟ್ಸ್ ಮ್ಯಾನ್ ಅಮೋಘ ಶತಕ ಸಿಡಿಸಿದ ನಂತರ ಜೋ ರೂಟ್ ಎರಡನೇ ಸ್ಥಾನಕ್ಕೆ ಬಂದಿದ್ದಾರೆ. ಆಸೀಸ್ ನ ಸ್ಟೀವ್ ಸ್ಮಿತ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ನ್ಯೂ ಜಿಲ್ಯಾಂಡ್ ನ ಕೇನ್ ವಿಲಿಯಮ್ಸನ್ ಮೊದಲ ಸ್ಥಾನದಲ್ಲಿದ್ದಾರೆ.
ಬೌಲರ್‌ಗಳಲ್ಲಿ, ಭಾರತದ ರವೀಂದ್ರ ಜಡೇಜಾ ಒಂದು ಸ್ಥಾನ ಕುಸಿದು ಏಳನೇ ಸ್ಥಾನದಲ್ಲಿದ್ದಾರೆ. ನ್ಯೂಜಿ ಲ್ಯಾಂಡ್ ವಿರುದ್ಧ 172 ರನ್‌ಗಳಿಂದ ಆಸ್ಟ್ರೇಲಿಯದ ಬೃಹತ್ ಜಯದ ನಂತರ ಜೋಶ್ ಹೇಜಲ್‌ವುಡ್ ಮತ್ತು ನಾಥನ್ ಲಿಯಾನ್ ಇಬ್ಬರೂ ಕ್ರಮವಾಗಿ ನಾಲ್ಕನೇ ಮತ್ತು ಆರನೇ ಸ್ಥಾನಕ್ಕೆ ಏರಿದ್ದಾರೆ.
ಬೌಲಿಂಗ್ ನಲ್ಲಿ ಬುಮ್ರಾ ಮೊದಲ ಸ್ಥಾನ, ಅಶ್ವಿನ್ ಎರಡನೇ ಸ್ಥಾನ ಮತ್ತು 7 ನೇ ಸ್ಥಾನದಲ್ಲಿ ರವೀಂದ್ರ ಜಡೇಜ ಇದ್ದಾರೆ. ತಂಡದ ರ‍್ಯಾಂಕಿಂಗ್ ನಲ್ಲಿ ಆಸ್ಟ್ರೇಲಿಯ 117 ರೇಟಿಂಗ್ ಪಾಯಿಂಟ್ಸ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಭಾರತವೂ 117 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದು ಎರಡನೇ ಸ್ಥಾನದಲ್ಲಿದೆ. ಆಲ್ ರೌಂಡರ್ ಪಟ್ಟಿಯಲ್ಲಿ ಜಡೇಜ ಮೊದಲ ಸ್ಥಾನದಲ್ಲಿದ್ದು, ಅಶ್ವಿನ್ ಎರಡನೇ ಮತ್ತು ಅಕ್ಷರ್ ಪಟೇಲ್ 5 ನೇ ಸ್ಥಾನದಲ್ಲಿದ್ದಾರೆ.