ದುಬಾೖ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತದ ಆರಂಭಿಕರಾದ ಶಿಖರ್ ಧವನ್ ಮತ್ತು ಕೆ.ಎಲ್. ರಾಹುಲ್ ಜೀವನಶ್ರೇಷ್ಠ ರ್‍ಯಾಂಕಿಂಗ್ ಸಾಧನೆಗೈದಿದ್ದಾರೆ.
ರಾಹುಲ್ ಆಡಿದ ಎಲ್ಲ ಇನ್ನಿಂಗ್ಸ್‌ಗಳಲ್ಲೂ ಅರ್ಧ ಶತಕ ಬಾರಿಸಿ ಮಿಂಚಿರುವುದು ವಿಶೇಷ. ಇದರೊಂದಿಗೆ 2 ಸ್ಥಾನ ಮೇಲೇರಿದ ಕರ್ನಾಟಕದ ಈ ಆರಂಭಕಾರ 9ನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ. ರಾಹುಲ್ ಕಳೆದ ಜುಲೈಯಲ್ಲೂ 9ನೇ ಸ್ಥಾನ ಅಲಂಕರಿಸಿದ್ದರು. ಆದರೆ ಈ ಬಾರಿ ಅಂದಿಗಿಂತ ಹೆಚ್ಚಿನ ರೇಟಿಂಗ್ ಅಂಕ ಹೊಂದಿದ್ದಾರೆ (761).
ಸರಣಿಯಲ್ಲಿ 2 ಶತಕ ಸಹಿತ 358 ರನ್ ಬಾರಿಸಿ ಮಿಂಚಿದ ಶಿಖರ್ ಧವನ್ 10 ಸ್ಥಾನಗಳ ಭರ್ಜರಿ ನೆಗೆತದೊಂದಿಗೆ 28ನೇ ಸ್ಥಾನಕ್ಕೆ ಬಂದಿದ್ದಾರೆ. ಲಂಕಾ ವಿರುದ್ಧ ಸರಣಿ ಶ್ರೇಷ್ಠ ಗೌರವ ಪಡೆದ ಹೆಗ್ಗಳಿಕೆ ಧವನ್ ಅವರದಾಗಿದೆ. ಪಲ್ಲೆಕಿಲೆಯಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ ಅವರದು 45 ಸ್ಥಾನಗಳ ಪ್ರಚಂಡ ನೆಗೆತ. ಇದರೊಂದಿಗೆ ಅವರು 68ನೇ ಸ್ಥಾನಕ್ಕೆ ಆಗಮಿಸಿದ್ದಾರೆ. ಇದು ಪಾಂಡ್ಯ ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್ ಕೂಡ ಆಗಿದೆ. ಚೇತೇಶ್ವರ್ ಪೂಜಾರ ಒಂದು ಸ್ಥಾನ ಕೆಳಗಿಳಿದು 4ಕ್ಕೆ ಬಂದರೆ, ನಾಯಕ ವಿರಾಟ್ ಕೊಹ್ಲಿ 5ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಅಜಿಂಕ್ಯ ರಹಾನೆ ಅವರದು 4 ಸ್ಥಾನಗಳ ಕುಸಿತ. ಅವರೀಗ 10ನೇ ಸ್ಥಾನದಲ್ಲಿದ್ದಾರೆ. ಇದೇ ಟೆಸ್ಟ್‌ನಲ್ಲಿ ಘಾತಕ ಬೌಲಿಂಗ್ ಪ್ರದರ್ಶಿಸಿದ ಕುಲ ದೀಪ್ ಯಾದವ್ 29 ಸ್ಥಾನ ಮೇಲೇರಿ 58ನೇ ಕ್ರಮಾಂಕದಲ್ಲಿ ಬಂದು ನಿಂತಿದ್ದಾರೆ. ಜಡೇಜ, ಜೇಮ್ಸ್ ಆ್ಯಂಡರ್ಸನ್, ಅಶ್ವಿನ್ ಮೊದಲ 3 ಸ್ಥಾನ ಕಾಯ್ದುಕೊಂಡಿದ್ದಾರೆ.
ಭಾರತಕ್ಕೆ 2 ಅಂಕ
3-0 ಸರಣಿ ಗೆಲುವಿನಿಂದ ಭಾರತಕ್ಕೆ 2 ಅಂಕ ಲಭಿಸಿದೆ; 125 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ವೈಟ್‌ವಾಶ್ ಮಾಡಿಕೊಂಡರೂ ಲಂಕೆಗೆ ಹೆಚ್ಚಿನ ಹಾನಿ ಆಗಿಲ್ಲ. ಅದು 7ನೇ ಸ್ಥಾನದಲ್ಲೇ ಉಳಿದಿದೆ.
ರವೀಂದ್ರ ಜಡೇಜ ಮತ್ತೆ ನಂ.2
ಒಂದು ಟೆಸ್ಟ್ ಪಂದ್ಯದ ನಿಷೇಧಕ್ಕೊಳಗಾಗಿದ್ದ ರವೀಂದ್ರ ಜಡೇಜ (430) ತನ್ನ ನಂಬರ್ ವನ್ ಆಲ್‌ರೌಂಡರ್ ಸ್ಥಾನವನ್ನು ಮತ್ತೆ ಬಾಂಗ್ಲಾದೇಶದ ಶಕಿಬ್ ಅಲ್ ಹಸನ್ (431) ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಇವರಿಬ್ಬರ ನಡುವೆ ಕೇವಲ ಒಂದು ಅಂಕದ ಅಂತರವಷ್ಟೇ ಇದೆ.