Advertisement
ಸುಮಾರು 9 ವರ್ಷಗಳ ಬಳಿಕ ಇಬ್ಬರು ಬೌಲರ್ ಅಗ್ರಸ್ಥಾನವನ್ನು ಹಂಚಿಕೊಂಡಿರುವುದು ಇದೇ ಮೊದಲ ಸಲವಾಗಿದೆ. ಈ ಹಿಂದೆ 2008ರ ಎಪ್ರಿಲ್‌ನಲ್ಲಿ ಡೇಲ್ ಸ್ಟೇನ್ ಮತ್ತು ಮುತ್ತಯ್ಯ ಮುರಳೀಧರನ್ ಜಂಟಿಯಾಗಿ ಅಗ್ರಸ್ಥಾನ ಪಡೆದಿದ್ದರು. ಬೆಂಗಳೂರು ಟೆಸ್ಟ್‌ನಲ್ಲಿ ಭಾರತವು ಆಸ್ಟ್ರೇಲಿಯವನ್ನು 75 ರನ್ನುಗಳಿಂದ ಸೋಲಿಸುವಲ್ಲಿ ಜಡೇಜ ಕೊಡುಗೆ ಅಪಾರವಾಗಿತ್ತು. ಇದರಿಂದಾಗಿ ಜಡೇಜ ಅಗ್ರಸ್ಥಾನಕ್ಕೇರುವಂತಾಯಿತು.
Related Articles
Advertisement
ಬೆಂಗಳೂರು ಟೆಸ್ಟ್‌ನಲ್ಲಿ 17 ಮತ್ತು 92 ರನ್ ಗಳಿಸಿದ್ದ ಚೇತೇಶ್ವರ ಪೂಜಾರ ಅವರು ಐದು ಸ್ಥಾನ ಮೇಲಕ್ಕೇರಿ ಆರನೇ ರ್‍ಯಾಂಕ್ ಪಡೆದಿದ್ದಾರೆ. ಅಜಿಂಕ್ಯ ರಹಾನೆ ಎರಡು ಸ್ಥಾನ ಮೇಲಕ್ಕೇರಿ 15ನೇ ಸ್ಥಾನ ಪಡೆದಿದ್ದಾರೆ. ಅವರು ಬೆಂಗಳೂರು ಟೆಸ್ಟ್‌ನಲ್ಲಿ 17 ಮತ್ತು 52 ರನ್ ಹೊಡೆದಿದ್ದರು. ಬೆಂಗಳೂರು ಟೆಸ್ಟ್‌ನ ಪಂದ್ಯಶ್ರೇಷ್ಠ ಪುರಸ್ಕೃತ ಕೆಎಲ್ ರಾಹುಲ್ 23 ಸ್ಥಾನ ಮೇಲಕ್ಕೇರಿ 23ನೇ ಸ್ಥಾನ ಪಡೆದಿದ್ದಾರೆ. ಅವರು 90 ಮತ್ತು 51 ರನ್ ಗಳಿಸಿ ಭಾರತದ ಮುನ್ನಡೆಗೆ ನೆರವಾಗಿದ್ದರು.
ಆಸ್ಟ್ರೇಲಿಯದ ಸ್ಪಿನ್ನರ್ ನಥನ್ ಲಿಯೋನ್ ಎರಡು ಸ್ಥಾನ ಮೇಲಕ್ಕೇರಿ 16ನೇ ರ್‍ಯಾಂಕ್ ಪಡೆದಿದ್ದಾರೆ. ಎಡಗೈ ಸ್ಪಿನ್ನರ್ ಸ್ಟೀವ್ ಓ’ಕೀಫ್ ಮತ್ತು ಭಾರತದ ಉಮೇಶ್ ಯಾದವ್ ತಲಾ ಒಂದು ಸ್ಥಾನ ಮೇಲಕ್ಕೇರಿ ಅನುಕ್ರಮವಾಗಿ 28ನೇ ಮತ್ತು 29ನೇ ಸ್ಥಾನದಲ್ಲಿದ್ದಾರೆ.
ಟೆಸ್ಟ್ ರ್‍ಯಾಂಕಿಂಗ್‌ನ ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ ಆಸ್ಟ್ರೇಲಿಯ ನಾಯಕ ಸ್ಟೀವನ್ ಸ್ಮಿತ್ ನಂಬರ್ ವನ್ ಸ್ಥಾನದಲ್ಲಿ ಮುಂದುವರಿದಿದ್ದಾರೆ. 77 ಟೆಸ್ಟ್‌ಗಳಲ್ಲಿ ಅವರು ಅಗ್ರಸ್ಥಾನವನ್ನು ಕಾಯ್ದುಕೊಂಡು ಬಂದು ರಿಕಿ ಪಾಂಟಿಂಗ್ ಅವರ ಸಾಧನೆಯನ್ನು ಹಿಂದಿಕ್ಕಿದ್ದಾರೆ. ಪಾಂಟಿಂಗ್ 76 ಟೆಸ್ಟ್‌ಗಳಲ್ಲಿ ಅಗ್ರಸ್ಥಾನ ಹೊಂದಿದ್ದರು. ಇದೀಗ ಸ್ಮಿತ್ ಅವರು ಸ್ಟೀವ್ ವೋ (94) ಮತ್ತು ಡಾನ್ ಬ್ರಾಡ್‌ಮನ್ (93) ಬಳಿಕದ ಗರಿಷ್ಠ ಟೆಸ್ಟ್ ಪಂದ್ಯಗಳಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಬಂದ ಆಟಗಾರ ಎಂದೆನಿಸಿಕೊಂಡಿದ್ದಾರೆ.
ಸ್ಮಿತ್ ಅವರ ತಂಡ ಸದಸ್ಯ ಮ್ಯಾಥ್ಯೂ ರೆನ್‌ಶಾ ಆರು ಸ್ಥಾನ ಮೇಲಕ್ಕೇರಿ ತನ್ನ ಜೀವನಶ್ರೇಷ್ಠ 28ನೇ ಸ್ಥಾನ ಪಡೆದಿದ್ದರೆ ಶಾನ್ ಮಾರ್ಷ್ 37ನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್ ರ್‍ಯಾಂಕಿಂಗ್‌ನಲ್ಲಿ ಬಾಂಗ್ಲಾದೇಶದ ಶಕಿಬ್ ಅಲ್ ಹಸನ್ ಅವರು ಅಶ್ವಿನ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಅಶ್ವಿನ್ ಕೇವಲ 20 ರನ್ ಗಳಿಸಿದ್ದರು. ಅಶ್ವಿನ್ 2015ರ ಡಿಸೆಂಬರ್‌ನಲ್ಲಿ ಶಕಿಬ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿದ್ದರು.