Advertisement

ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ ವಿರಾಟ್‌ ಕೊಹ್ಲಿ ನಂ.1

06:00 AM Aug 06, 2018 | |

ಹೊಸದಿಲ್ಲಿ: ಎಜ್‌ಬಾಸ್ಟನ್‌ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಟೀಮ್‌ ಇಂಡಿಯಾ ಕಪ್ತಾನ ವಿರಾಟ್‌ ಕೊಹ್ಲಿ ಮೊದಲ ಬಾರಿಗೆ ವಿಶ್ವದ ನಂಬರ್‌ ವನ್‌ ಟೆಸ್ಟ್‌ ಬ್ಯಾಟ್ಸ್‌ಮನ್‌ ಆಗಿ ಮೂಡಿಬಂದಿದ್ದಾರೆ. 2011ರಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಈ ಎತ್ತರ ತಲುಪಿದ ಬಳಿಕ ಭಾರತೀಯ ಬ್ಯಾಟ್ಸ್‌ಮನ್‌ ಓರ್ವ ವಿಶ್ವದ ಅಗ್ರಮಾನ್ಯ ಟೆಸ್ಟ್‌ ಬ್ಯಾಟ್ಸ್‌ಮನ್‌ ಎನಿಸಿದ್ದು ಇದೇ ಮೊದಲು. ಕೊಹ್ಲಿ ಈ ರೇಸ್‌ನಲ್ಲಿ ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಅವರನ್ನು ಹಿಂದಿಕ್ಕಿದರು.

Advertisement

ನೂತನ ರ್‍ಯಾಂಕಿಂಗ್‌ ಯಾದಿಯನ್ನು ಐಸಿಸಿ ರವಿವಾರ ಬಿಡುಗಡೆಗೊಳಿಸಿತು. ಇದರಲ್ಲಿ ಕೊಹ್ಲಿ 934 ಅಂಕ ಹೊಂದಿದ್ದರೆ, ಸ್ಮಿತ್‌ 929ರಲ್ಲಿದ್ದಾರೆ. ಕೊಹ್ಲಿ ನಂ.1 ಟೆಸ್ಟ್‌ ಬ್ಯಾಟ್ಸ್‌ಮನ್‌ ಗೌರವ ಒಲಿಸಿಕೊಂಡ ಭಾರತದ 7ನೇ ಕ್ರಿಕೆಟಿಗ. ಉಳಿದವರೆಂದರೆ ಸುನೀಲ್‌ ಗಾವಸ್ಕರ್‌, ದಿಲೀಪ್‌ ವೆಂಗ್‌ಸರ್ಕಾರ್‌, ಸಚಿನ್‌ ತೆಂಡುಲ್ಕರ್‌, ರಾಹುಲ್‌ ದ್ರಾವಿಡ್‌, ವೀರೇಂದ್ರ ಸೆಹವಾಗ್‌ ಮತ್ತು ಗೌತಮ್‌ ಗಂಭೀರ್‌.ಸ್ಟೀವನ್‌ ಸ್ಮಿತ್‌ 2015ರ ಡಿಸೆಂಬರ್‌ ಬಳಿಕ ವಿಶ್ವದ ಟಾಪ್‌ ಟೆಸ್ಟ್‌ ಬ್ಯಾಟ್ಸ್‌ಮನ್‌ ಆಗಿ ಉಳಿದಿದ್ದರು. ಸದ್ಯ ಬಾಲ್‌ ಟ್ಯಾಂಪರಿಂಗ್‌ ಹಗರಣದಲ್ಲಿ ಸಿಲುಕಿಕೊಂಡು ನಿಷೇಧಕ್ಕೊಳಗಾಗಿದ್ದಾರೆ.

ಕೊಹ್ಲಿ ಮುಂದೆ ಇನ್ನಷ್ಟು ಅವಕಾಶ
ಎಜ್‌ಬಾಸ್ಟನ್‌ ಟೆಸ್ಟ್‌ನಲ್ಲಿ ಒಂದು ಶತಕ ಹಾಗೂ ಅರ್ಧ ಶತಕ ಸಹಿತ ಒಟ್ಟು 200 ರನ್‌ ಪೇರಿಸಿದ್ದು ವಿರಾಟ್‌ ಕೊಹ್ಲಿಗೆ ಲಾಭವಾಗಿ ಪರಿಣಮಿಸಿತು. ಈ ಟೆಸ್ಟ್‌ ಪಂದ್ಯಕ್ಕೂ ಮೊದಲು 903 ಅಂಕ ಗಳಿಸಿದ್ದರು. ಅಂದರೆ ಗಾವಸ್ಕರ್‌ಗಿಂತ 13 ಅಂಕ ಹಿಂದಿದ್ದರು. ಈಗ ಗಾವಸ್ಕರ್‌ಗಿಂತ 18 ಅಂಕಗಳ ಮುನ್ನಡೆಯಲ್ಲಿದ್ದಾರೆ.

ಉಳಿದ 4 ಟೆಸ್ಟ್‌ಗಳಲ್ಲಿ ಇದೇ ಫಾರ್ಮ್ ಮುಂದುವರಿಸಿದರೆ ಕೊಹ್ಲಿ ಇನ್ನಷ್ಟು ಮೈಲಿಗಲ್ಲು ನೆಡುವ ಅವಕಾಶ ಹೊಂದಿದ್ದಾರೆ. ಸದ್ಯ ಕೊಹ್ಲಿ 934 ಅಂಕ ಹೊಂದಿದ್ದಾರೆ. ಇದು ಭಾರತೀಯ ಬ್ಯಾಟ್ಸ್‌ಮನ್‌ ಓರ್ವ ಗಳಿಸಿದ ಸರ್ವಾಧಿಕ ಅಂಕವಾದರೆ, ವಿಶ್ವ ಮಟ್ಟದ 14ನೇ ಅತ್ಯುತ್ತಮ ಸಾಧನೆ. ಲಾರ್ಡ್ಸ್‌ನಲ್ಲೂ ಮಿಂಚಿದರೆ ಒಟ್ಟು ಅಂಕ ಗಳಿಕೆಯಲ್ಲಿ ಟಾಪ್‌-10 ಯಾದಿಯನ್ನು ಪ್ರವೇಶಿಸುವ ಉಜ್ವಲ ಅವಕಾಶವೊಂದು ಕೊಹ್ಲಿ ಮುಂದಿದೆ. ಆಗ ಅವರು ಮ್ಯಾಥ್ಯೂ ಹೇಡನ್‌, ಜಾಕ್‌ ಕ್ಯಾಲಿಸ್‌, ಎಬಿ ಡಿ ವಿಲಿಯರ್ ಅವರನ್ನೆಲ್ಲ ಹಿಂದಿಕ್ಕಬಹುದು. ಇವರೆಲ್ಲರೂ ತಮ್ಮ ಟೆಸ್ಟ್‌ ಪಾರಮದ್ಯದ ವೇಳೆ ಗರಿಷ್ಠ 935 ಅಂಕ ಸಂಪಾದಿಸಿದ್ದರು. ಈ ಯಾದಿಯ ಅಗ್ರಸ್ಥಾನದಲ್ಲಿರುವ ಇಬ್ಬರು ಬ್ಯಾಟ್ಸ್‌ಮನ್‌ಗಳೆಂದರೆ ಸರ್‌ ಡೊನಾಲ್ಡ್‌ ಬ್ರಾಡ್‌ಮನ್‌ (961) ಮತ್ತು ಸ್ಟೀವನ್‌ ಸ್ಮಿತ್‌ (947).

ಟಾಪ್‌-10 ಬ್ಯಾಟ್ಸ್‌ಮನ್‌
1. ವಿರಾಟ್‌ ಕೊಹ್ಲಿ    934
2. ಸ್ಟೀವನ್‌ ಸ್ಮಿತ್‌    929
3. ಜೋ ರೂಟ್‌    865
4. ಕೇನ್‌ ವಿಲಿಯಮ್ಸನ್‌    847
5. ಡೇವಿಡ್‌ ವಾರ್ನರ್‌    820
6. ಚೇತೇಶ್ವರ್‌ ಪೂಜಾರ    791
7. ದಿಮುತ್‌ ಕರುಣರತ್ನೆ    754
8. ದಿನೇಶ್‌ ಚಂಡಿಮಾಲ್‌    733
9. ಡೀನ್‌ ಎಲ್ಗರ್‌    724
10. ಐಡನ್‌ ಮಾರ್ಕ್‌ರಮ್‌    703

Advertisement

ಟಾಪ್‌-10 ಬೌಲರ್
1. ಜೇಮ್ಸ್‌ ಆ್ಯಂಡರ್ಸನ್‌    884
2. ಕಾಗಿಸೊ ರಬಾಡ    882
3. ರವೀಂದ್ರ ಜಡೇಜ    857
4. ವೆರ್ನನ್‌ ಫಿಲಾಂಡರ್‌    826
5. ಆರ್‌. ಅಶ್ವಿ‌ನ್‌    825
6. ಪ್ಯಾಟ್‌ ಕಮಿನ್ಸ್‌    800
7. ಟ್ರೆಂಟ್‌ ಬೌಲ್ಟ್    795
8. ರಂಗನ ಹೆರಾತ್‌    791
9. ನೀಲ್‌ ವ್ಯಾಗ್ನರ್‌    765
10. ಜೋಶ್‌ ಹ್ಯಾಝಲ್‌ವುಡ್‌    759

Advertisement

Udayavani is now on Telegram. Click here to join our channel and stay updated with the latest news.

Next