ಆ್ಯಂಟಿಗಾ: ಗೆಲ್ಲಲೇಬೇಕಾದ ಪಂದ್ಯವನ್ನು ಭರ್ಜರಿಯಾಗಿ ಗೆದ್ದ ಇಂಗ್ಲೆಂಡ್ ತಂಡವು ಸೂಪರ್ 8 ಹಂತಕ್ಕೆ ಒಂದು ಕಾಲಿಟ್ಟು ಕುಳಿತಿದೆ. ಆಸ್ಟ್ರೇಲಿಯಾ – ಸ್ಕಾಟ್ಲೆಂಡ್ ನಡುವಿನ ಪಂದ್ಯದ ಫಲಿತಾಂಶದ ಮೇಲೆ ಆಂಗ್ಲರ ಮುಂದಿನ ಪಯಣ ನಿರ್ಧಾರವಾಗಲಿದೆ.
ಆ್ಯಂಟಿಗಾದಲ್ಲಿ ನಡೆದ ನಿರ್ಣಾಯಕ ಮಳೆ ಪೀಡಿತ ಕದನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 10 ಓವರ್ ಗಳಲ್ಲಿ 122 ರನ್ ಗಳಿಸಿದರೆ, ನಮೀಬಿಯಾ ತಂಡವು 84 ರನ್ ಮಾತ್ರ ಗಳಿಸಿತು. ಇದರಿಂದ ಬಟ್ಲರ್ ಪಡೆ 41 ರನ್ ಅಂತರದ ಗೆಲುವು ಸಾಧಿಸಿತು.
ಮಳೆಯಿಂದ 10 ಓವರ್ ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಭರ್ಜರಿಯಾಗಿ ಬ್ಯಾಟ್ ಬೀಸಿತು. ಬೇರಿಸ್ಟೋ 18 ಎಸೆತಗಳಲ್ಲಿ 31 ರನ್ ಮಾಡಿದರೆ, ಬ್ರೂಕ್ 20 ಎಸೆತಗಳಲ್ಲಿ 47 ರನ್ ಬಾರಿಸಿದರು. ಲಿವಿಂಗ್ ಸ್ಟೋನ್ ನಾಲ್ಕು ಎಸೆತಗಳಲ್ಲಿ 13 ರನ್ ಬಾರಿಸಿದರು.
ಗುರಿ ಬೆನ್ನತ್ತಿದ್ದ ನಮೀಬಿಯಾ ವೇಗವಾಗಿ ರನ್ ಗಳಿಸಲು ವಿಫಲವಾಯಿತು. ಮಿಚೆಲ್ ವ್ಯಾನ್ ಲಿಂಗೆನ್ 33 ರನ್ ಮಾಡದರೆ, ವೀಸೆ 27 ರನ್ ಗಳಿಸಿದರು.
ಸೂಪರ್ 8 ಹಂತಕ್ಕೆ ಪ್ರವೇಶ ಪಡೆಯಲು ಇಂಗ್ಲೆಂಡ್ ಗೆ ಈ ಗೆಲುವು ಅತ್ಯಂತ ನಿರ್ಣಾಯಕವಾಗಿತ್ತು. ಸದ್ಯ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ತಲಾ ಐದು ಅಂಕ ಹೊಂದಿದೆ. ಆಸೀಸ್ ವಿರುದ್ದ ಸ್ಕಾಟ್ಲೆಂಡ್ ಗೆದ್ದರೆ ಅಥವಾ ಪಂದ್ಯ ರದ್ದಾದರೆ ಆಂಗ್ಲರ ಸೂಪರ್ 8 ಆಸೆಗೆ ತಣ್ಣೀರು ಬೀಳಲಿದೆ.