ದುಬಾೖ: ಭಾರತದ ಆರಂಭಿಕ ಆಟಗಾರ್ತಿ ಸ್ಮತಿ ಮಂದನಾ ಮತ್ತು ಆಫ್ ಸ್ಪಿನ್ ಆಲ್‌ರೌಂಡರ್ ದೀಪ್ತಿ ಶರ್ಮ ಅವರು ನೂತನ ಐಸಿಸಿ ವನಿತೆಯರ ಟಿ20 ರ್‍ಯಾಂಕಿಂಗ್‌ನಲ್ಲಿ ಇನ್ನಷ್ಟು ಎತ್ತರಕ್ಕೇರಿದ್ದು ತಮ್ಮ ಜೀವನಶ್ರೇಷ್ಠ ಸಾಧನೆ ತಲುಪಿದ್ದಾರೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಪಟ್ಟಿಯಲ್ಲಿ ಮಂದನಾ ಮತ್ತು ದೀಪ್ತಿ ಸದ್ಯ ದ್ವಿತೀಯ ಸ್ಥಾನಕ್ಕೇರದ್ದು ಅಗ್ರಸ್ಥಾನಕ್ಕೇರಲು ತೀವ್ರ ಪೈಪೋಟಿ ನೀಡುತ್ತಿದ್ದಾರೆ.
ಏಕದಿನ ಕ್ರಿಕೆಟ್‌ನ ಅಗ್ರ ರ್‍ಯಾಂಕಿನ ಆಟಗಾರ್ತಿಯಾಗಿರುವ ಮಂದನಾ ಏಷ್ಯಾ ಕಪ್‌ನ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಕೇವಲ 25 ಎಸೆತಗಳಲ್ಲಿ 51 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಸದ್ಯ 730 ರೇಟಿಂಗ್ ಅಂಕ ಹೊಂದಿರುವ ಮಂದನಾ ಅಗ್ರ ರ್‍ಯಾಂಕಿನ ಆಸ್ಟ್ರೇಲಿಯದ ಬೆಥ್ ಮೂನಿ ಅವರಿಗಿಂತ 13 ಅಂಕ ಹಿನ್ನಡೆಯಲ್ಲಿದ್ದಾರೆ.
ಏಷ್ಯಾ ಕಪ್‌ನಲ್ಲಿ ಅಮೋಘ ಬೌಲಿಂಗ್ ನಿರ್ವಹಣೆ ನೀಡಿದ್ದ ದೀಪ್ತಿ ತನ್ನ ರ್‍ಯಾಂಕಿಂಗನ್ನು ದ್ವಿತೀಯ ಸ್ಥಾನಕ್ಕೇರಿಸಿಕೊಂಡಿದ್ದಾರೆ.
ಏಷ್ಯಾ ಕಪ್‌ನ ಫೈನಲ್‌ನಲ್ಲಿ ಅವರು 4 ಓವರ್‌ಗಳಲ್ಲಿ ಕೇವಲ 7 ರನ್ ಬಿಟ್ಟುಕೊಟ್ಟಿದ್ದರೆ ಈ ಹಿಂದಿನ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 7 ರನ್ನಿಗೆ 3 ವಿಕೆಟ್ ಹಾರಿಸಿದ್ದರು. ಏಷ್ಯಾ ಕಪ್‌ನಲ್ಲಿ 13 ವಿಕೆಟ್ ಕಿತ್ತು ಜಂಟಿ ಗರಿಷ್ಠ ಸಾಧನೆ ಮಾಡಿದ್ದ ಅವರು 742 ರೇಂಟಿಂಗ್ ಅಂಕ ಹೊಂದಿದ್ದು ಅಗ್ರಸ್ಥಾನಿ ಇಂಗ್ಲೆಂಡಿನ ಸೋಫೀ ಎಕ್ಲೆಸ್ಟೋನ್ ಅವರಿಗಿಂತ 14 ಅಂಕ ಕಡಿಮೆ ಹೊಂದಿದ್ದಾರೆ.
ಆಲ್‌ರೌಂಡರ್ ಪಟ್ಟಿಯಲ್ಲೂ ದೀಪ್ತಿ ಶರ್ಮ ಅಗ್ರ ಹತ್ತರ ಒಳಗಿನ ಸ್ಥಾನ ಪಡೆದಿದ್ದಾರೆ. 370 ರೇಟಿಂಗ್ ಅಂಕ ಹೊಂದಿರುವ ದೀಪ್ತಿ ಮೂರನೇ ಸ್ಥಾನದಲ್ಲಿದ್ದಾರೆ.