Advertisement
2021ರ ಚಾಂಪಿಯನ್ಸ್ ಟ್ರೋಫಿ ಭಾರತದಲ್ಲೇ ನಡೆಯಲಿದೆ. ಹೆಚ್ಚಿನ ಆದಾಯದ ದೃಷ್ಟಿಯಿಂದ ಈ ಕೂಟವನ್ನು ಟಿ20 ಮಾದರಿಗೆ ಬದಲಿಸಲು ಕೆಲ ರಾಷ್ಟ್ರಗಳು ಒಲವು ತೋರಿವೆ. ಇದಕ್ಕೆ ಸರಿಯಾಗಿ ಐಸಿಸಿ ಕೂಡ ಟಿ20 ಮಾದರಿ ಬಯಸುತ್ತಿದೆ. ಈ ವರ್ಷ ಸಹರಾಷ್ಟ್ರಗಳಿಗೆ ಆದಾಯ ಹಂಚಿಕೆ ಮಾಡಬೇಕಾದ ಸಂದರ್ಭದಲ್ಲಿ ಐಸಿಸಿಗೆ ಒಂದಷ್ಟು ನಷ್ಟವಾಗುತ್ತದೆ. ಇದನ್ನು ತುಂಬಿಕೊಳ್ಳಲು ಐಸಿಸಿ ಈ ದಾರಿಗೆ ಮೊರೆ ಹೊಕ್ಕಿದೆ. ಈ ಕೂಟವನ್ನು ಭಾರತದಲ್ಲಿ ನಡೆಸುವುದಕ್ಕೇ ಐಸಿಸಿಗೆ ಮನಸ್ಸಿರಲಿಲ್ಲ. ಕಾರಣ ಭಾರತದಲ್ಲಿ ಐಸಿಸಿ ಕೂಟಗಳಿಗೆ ಕೇಂದ್ರ ಸರಕಾರದ ತೆರಿಗೆ ವಿನಾಯಿತಿ ಇಲ್ಲ. ಇದು ಆದಾಯದ ಪ್ರಮಾಣವನ್ನು ತಗ್ಗಿಸುತ್ತದೆ. ಆದ್ದರಿಂದ ಇದೇ ರೀತಿಯ ಸಮಯವನ್ನು ಹೊಂದಿರುವ ಇತರೆ ರಾಷ್ಟ್ರಗಳಿಗೆ ಕೂಟವನ್ನು ಸ್ಥಳಾಂತರಿಸಲು ಐಸಿಸಿ ಯತ್ನಿಸಿತ್ತು. ಅದೂ ಕೂಡ ಬಿಸಿಸಿಐನ ವಿರೋಧದಿಂದ ನಿಂತುಹೋಗಿತ್ತು.
2017ರಲ್ಲಿ ಬಿಸಿಸಿಐ ಮತ್ತು ಐಸಿಸಿ ನಡುವೆ ಭಾರೀ ಪ್ರಮಾಣದಲ್ಲಿ ಕದನ ನಡೆದಿತ್ತು. ಮಾಮೂಲಿಯಾಗಿ ಐಸಿಸಿಯನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದ ಬಿಸಿಸಿಐ 2017ರ ಎಪ್ರಿಲ್‌ನಲ್ಲಿ ಅವಮಾನ ಅನುಭವಿಸಿತು. ಐಸಿಸಿಯ ಆಡಳಿತಾತ್ಮಕ ಸ್ವರೂಪ ಬದಲಾವಣೆ, ಬಿಗ್ ಥ್ರಿà ಆದಾಯ ನೀತಿ ಹಂಚಿಕೆ ರದ್ದತಿ, 2 ಹಂತದ ಟೆಸ್ಟ್ ಸರಣಿ ಆರಂಭಕ್ಕೆ ಬಿಸಿಸಿಐ ವಿರೋಧಿಸಿತ್ತು. ಆದರೆ ಶ್ರೀಲಂಕಾ ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರಗಳು ಬಿಸಿಸಿಐ ವಿರುದ್ಧ ನಿಂತವು. ಅನಿವಾರ್ಯವಾಗಿ ಐಸಿಸಿ ತೀರ್ಮಾನವನ್ನು ಬಿಸಿಸಿಐ ಒಪ್ಪಿಕೊಳ್ಳಲೇಬೇಕಾಯಿತು. ಅಚ್ಚರಿಯ ಸಂಗತಿಯೆಂದರೆ ತನ್ನ ಪರ ನಿಲ್ಲುತ್ತವೆಂದು ಬಿಸಿಸಿಐ ಭಾವಿಸಿದ್ದ ಬಾಂಗ್ಲಾದೇಶ, ಜಿಂಬಾಬ್ವೆಗಳು ರಾಷ್ಟ್ರಗಳೂ ಕೈಕೊಟ್ಟವು. ಅಲ್ಲಿಯವರೆಗೆ ವರ್ಷಕ್ಕೆ 3 ಸಾವಿರ ಕೋಟಿ ರೂ. ಇದ್ದ ಬಿಸಿಸಿಐ ಆದಾಯ ಏಕಾಏಕಿ 1920 ಕೋಟಿ ರೂ.ಗೆ ಇಳಿಯಿತು. ಕಡೆಗೆ ಮಾತುಕತೆಯ ಮೂಲಕ ಈ ಮೊತ್ತ 2,500 ಕೋಟಿ ರೂ.ಗೇರಿಸಲು ಐಸಿಸಿ ಒಪ್ಪಿದ್ದರಿಂದ ಜಗಳ ನಿಂತು ಹೋಯಿತು.