ದುಬೈ: ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ವೆಸ್ಟ್ ಇಂಡೀಸ್‌ನ ಮಾಜಿ ಬ್ಯಾಟರ್ ಮರ್ಲಾನ್ ಸ್ಯಾಮುಯೆಲ್ಸ್ ಅವರನ್ನು ಆರು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿಷೇಧಿಸಿದೆ.
ಸ್ಯಾಮ್ಯುಯೆಲ್ಸ್ ವಿರುದ್ಧ ಸೆಪ್ಟೆಂಬರ್ 2021 ರಲ್ಲಿ ಒಟ್ಟು ನಾಲ್ಕು ಆರೋಪಗಳನ್ನು ಹೊರಿಸಲಾಗಿತ್ತು. ನಂತರ ಈ ವರ್ಷದ ಆಗಸ್ಟ್ ನಲ್ಲಿ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ.
ಆರು ವರ್ಷಗಳ ನಿಷೇಧವನ್ನು ಗುರುವಾರ ಐಸಿಸಿ ದೃಢಪಡಿಸಿದೆ. ನವೆಂಬರ್ 11, 2023 ರಂದು ಇದು ಪ್ರಾರಂಭವಾಗುತ್ತದೆ. ಐಸಿಸಿ ಎಚ್ಆರ್ ಮತ್ತು ಸಮಗ್ರತೆಯ ಘಟಕದ ಮುಖ್ಯಸ್ಥರಾಗಿರುವ ಅಲೆಕ್ಸ್ ಮಾರ್ಷಲ್ ಅವರು ಗುರುವಾರ ನಿಷೇಧವನ್ನು ಘೋಷಿಸಿದರು. “ಸ್ಯಾಮ್ಯುಯೆಲ್ಸ್ ಸುಮಾರು ಎರಡು ದಶಕಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದರು, ಆ ಸಮಯದಲ್ಲಿ ಅವರು ಹಲವಾರು ಭ್ರಷ್ಟಾಚಾರ-ವಿರೋಧಿ ಸೆಷನ್ ಗಳಲ್ಲಿ ಭಾಗವಹಿಸಿದ್ದರು, ಮತ್ತು ಭ್ರಷ್ಟಾಚಾರ-ವಿರೋಧಿ ಕೋಡ್ ಗಳ ಅಡಿಯಲ್ಲಿ ಅವರ ಜವಾಬ್ದಾರಿಗಳು ಏನೆಂದು ನಿಖರವಾಗಿ ತಿಳಿದಿದ್ದರು” ಎಂದು ಮಾರ್ಷಲ್ ಹೇಳಿದರು.
“ಅವರು ಈಗ ನಿವೃತ್ತರಾಗಿದ್ದರೂ, ಅಪರಾಧಗಳು ನಡೆದಾಗ ಸ್ಯಾಮ್ಯುಯೆಲ್ಸ್ ಆಡುತ್ತಿದ್ದರು. ಆರು ವರ್ಷಗಳ ನಿಷೇಧ ನಿರ್ಧಾರವು ನಿಯಮಗಳನ್ನು ಮುರಿಯಲು ಉದ್ದೇಶಿಸಿರುವ ಯಾರಿಗಾದರೂ ಬಲವಾದ ಸಂದೇಶ ನೀಡುತ್ತದೆ” ಎಂದು ಮಾರ್ಷಲ್ ಹೇಳಿದರು.
ಸ್ಯಾಮ್ಯುಯೆಲ್ಸ್ 18 ವರ್ಷಗಳ ಅವಧಿಯಲ್ಲಿ ವೆಸ್ಟ್ ಇಂಡೀಸ್ ಪರವಾಗಿ 300 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದರು, ಒಟ್ಟು 17 ಶತಕಗಳನ್ನು ಗಳಿಸಿದರು. ಏಕದಿನ ಕ್ರಿಕೆಟ್ ನಲ್ಲಿ ಕೆರಿಬಿಯನ್ ತಂಡದ ನಾಯಕತ್ವವನ್ನು ಸಹ ವಹಿಸಿದ್ದರು. ಐಸಿಸಿ ಪುರುಷರ ಟಿ20 ವಿಶ್ವಕಪ್‌ನ 2012 ಮತ್ತು 2016 ಆವೃತ್ತಿಗಳ ಫೈನಲ್ ನಲ್ಲಿ ಅಗ್ರ ಸ್ಕೋರ್ ಮಾಡಿದ್ದರು.