Advertisement

World Cup; ರೋಹಿತ್ ಬಳಗ ಅಜೇಯ ಯಾತ್ರೆ: ಬಿಗು ದಾಳಿಗೆ ಶರಣಾದ ಇಂಗ್ಲೆಂಡ್

09:38 PM Oct 29, 2023 | Team Udayavani |

ಲಕ್ನೋ: ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಭಾರತ ಅಮೋಘ 100 ರನ್ ಗಳ ಗೆಲುವು ಸಾಧಿಸಿ, ವಿಜಯ ಯಾತ್ರೆ ಮುಂದುವರಿಸಿ ನಾಕೌಟ್‌ ಸ್ಥಾನ ಪಕ್ಕಾ ಮಾಡಿಕೊಂಡಿದೆ.

Advertisement

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ ಆರಂಭದಲ್ಲಿ ಆಘಾತಕ್ಕೆ ಸಿಲುಕಿತಾದರೂ ನಾಯಕ ರೋಹಿತ್ ಶರ್ಮ ಅವರ ಸಮಯೋಚಿತ ಆಟದ ನೆರವಿನಿಂದ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಪ್ರಯತ್ನದಿಂದ ಇಂಗ್ಲೆಂಡ್ ಗೆ ಗೆಲ್ಲಲು 230 ರನ್ ಗಳ ಗುರಿ ನೀಡಿತು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಭಾರತದ ಬಿಗಿ ಬೌಲಿಂಗ್ ದಾಳಿಗೆ ನಲುಗಿ ಹೋಯಿತು. ವಿಶ್ವಕಪ್ ನ ನಿರೀಕ್ಷೆ ಕಳೆದುಕೊಂಡು ಮಂಕಾಯಿತು. 34.5 ಓವರ್ ಗಳಲ್ಲಿ 129 ರನ್ ಗಳಿಗೆ ವೈ ಆಲೌಟಾಗಿ ಇನ್ನೊಂದು ಸೋಲಿನ ಕಹಿ ಉಂಡಿತು.ಕ್ರಿಕೆಟ್‌ ಜನಕರು ಈ ಬಾರಿ ಭಾರಿ ನಿರಾಶೆಯಿಂದ ಮನೆಗೆ ಮರಳಬೇಕಾಗಿದೆ.

ಡೇವಿಡ್ ಮಲಾನ್ 16, ಜೋ ರೂಟ್ 14, ಬೆನ್ ಸ್ಟೋಕ್ಸ್ ಮತ್ತು ಜಾನಿ ಬೈರ್‌ಸ್ಟೋ ಶೂನ್ಯಕ್ಕೆ ಔಟಾದರು. ನಾಯಕ ಜೋಸ್ ಬಟ್ಲರ್ 10 ,ಮೊಯಿನ್ ಅಲಿ 15, ಕ್ರಿಸ್ ವೋಕ್ಸ್ 10 , ಲಿಯಾಮ್ ಲಿವಿಂಗ್‌ಸ್ಟೋನ್ 27 ,ಆದಿಲ್ ರಶೀದ್ 13 ರನ್ ಗಳಿಗೆ ಔಟಾದರು.ಡೇವಿಡ್ ವಿಲ್ಲಿ ಔಟಾಗದೆ 16 ರನ್ ಗಳಿಸಿದರು.

ಮತ್ತೆ ಶಮಿ ಮಿಂಚು
ವಿಶ್ವಕಪ್ ನಲ್ಲಿ ಮತ್ತೊಮ್ಮೆ ಬಿಗಿ ದಾಳಿ ನಡೆಸಿದ ವೇಗಿ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತರು. ಜಸ್ಪ್ರೀತ್ ಬುಮ್ರಾ 3 ವಿಕೆಟ್ ಕಿತ್ತು ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು. ಕುಲದೀಪ್ ಯಾದವ್ 2 ವಿಕೆಟ್ , ಜಡೇಜಾ ಒಂದು ವಿಕೆಟ್ ಪಡೆದರು.

Advertisement

6ರಲ್ಲಿ6 ಪಂದ್ಯ ಗೆದ್ದು 12 ಅಂಕಗಳೊಂದಿಗೆ +1.405 ರನ್ ರೇಟ್ ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಹೊಂದಿ ಸೆಮಿ ಫೈನಲ್ ಪ್ರವೇಶ ಖಚಿತ ಪಡಿಸಿಕೊಂಡಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ 6 ಪಂದ್ಯಗಳಲ್ಲಿ 5 ನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದುಕೊಂಡಿದೆ.

ಭಾರತಕ್ಕೆ ಆರಂಭಿಕ ಆಘಾತ

ಭಾರತ 40 ರನ್ ಆಗುವಷ್ಟರಲ್ಲಿ 3 ಪ್ರಮುಖ ವಿಕೆಟ್ ಗಳನ್ನು ಕಳೆದು ಕೊಂಡಿತು. ಶುಭಮನ್ ಗಿಲ್ 9, ಶ್ರೇಯಸ್ ಅಯ್ಯರ್ 4 ರನ್ ಗಳಿಸಿ ಔಟಾದರೆ ಕೊಹ್ಲಿ ಶೂನ್ಯಕ್ಕೆ ಔಟಾಗಿ ನಿರಾಶರಾದರು.ಭಾರತ ತಂಡದ ನಾಯಕನಾಗಿ ನೂರನೇ ಪಂದ್ಯವಾಡಿದ ರೋಹಿತ್ ಜವಾಬ್ದಾರಿಯುತ ಆಟವಾಡಿದರು. 87 ರನ್ ಗಳಿಸಿ ಔಟಾದರು. 101 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ಗಳನ್ನು ಬಾರಿಸಿದರು.

ಕೆ.ಎಲ್. ರಾಹುಲ್ 39 ರನ್ ಗಳಿಸಿ ಔಟಾದರು. ಸೂರ್ಯಕುಮಾರ್ ಯಾದವ್ ಅವರು 49 ರನ್ ಗಳಿಸಿದ್ದ ವೇಳೆ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚಿತ್ತು ನಿರ್ಗಮಿಸುವ ಮೂಲಕ ಅರ್ಧ ಶತಕ ವಂಚಿತರಾದರು. ಜಡೇಜಾ 8 ರನ್ , ಶಮಿ 1 ರನ್ ಗೆ ಔಟಾದರು. ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ 16, ಕುಲದೀಪ್ ಯಾದವ್ 9 ರನ್ ಗಳಿಸಿದರು. 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಲು ಶಕ್ತವಾಯಿತು.

ಇಂಗ್ಲೆಂಡ್ ಪರ ಬೌಲಿಂಗ್ ನಲ್ಲಿ ಡೇವಿಡ್ ವಿಲ್ಲಿ 3 ವಿಕೆಟ್ ಕಿತ್ತು ಮಿಂಚಿದರು. ಕ್ರಿಸ್ ವೋಕ್ಸ್, ಆದಿಲ್ ರಶೀದ್ ತಲಾ 2 ವಿಕೆಟ್ ಪಡೆದರೆ, ಮಾರ್ಕ್ ವುಡ್ 1 ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next