ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಲಾಢ್ಯ ತಂಡಳಾದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಜನ್ಮದಿನದ ಸಂಭ್ರಮದಲ್ಲಿ ಅಮೋಘ ಶತಕ ಸಿಡಿಸಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಸರಿಗಟ್ಟಿದ್ದಾರೆ.
ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿ ಭರ್ಜರಿ ಮೊತ್ತವನ್ನು ದಕ್ಷಿಣ ಆಫ್ರಿಕಾ ತಂಡದ ಎದುರಿಗಿಟ್ಟಿದೆ. ನಾಯಕ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ 62 ರನ್ ಜತೆಯಾಟವಾಡಿ ವೇಗದ ಆರಂಭ ಒದಗಿಸಿಕೊಟ್ಟರು. ಶರ್ಮ 24 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರು. ಗಿಲ್ 23 ರನ್ ಗಳಿಸಿದ್ದ ವೇಳೆ ನಿರ್ಗಮಿಸಿದರು.
ಆ ಬಳಿಕ ತಾಳ್ಮೆಯ ಆಟವಾಡಿದ ಕೊಹ್ಲಿ119 ಎಸೆತಗಳಲ್ಲಿ 100 ರನ್ ಗಳಿಸಿ ಸಂಭ್ರಮಿಸಿದರು. ಕೊಹ್ಲಿ ಅವರಿಗೆ ಉತ್ತಮ ಜತೆಯಾಟದ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 87 ಎಸೆತಗಳಲ್ಲಿ 77 ರನ್ ಗಳಿಸಿ ಔಟಾದರು. ಕೆಎಲ್ ರಾಹುಲ್ 8 ರನ್, ಸೂರ್ಯಕುಮಾರ್ ಯಾದವ್ 22 ಗಳಿಸಿದ್ದ ವೇಳೆ ಔಟಾದರು.
ಕೊಹ್ಲಿ121 ಎಸೆತಗಳಲ್ಲಿ 101 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊಹ್ಲಿ ಆಕರ್ಷಕ 10 ಬೌಂಡರಿಗಳನ್ನು ಬಾರಿಸಿದ್ದರು. ರವೀಂದ್ರ ಜಡೇಜಾ 15 ಎಸೆತಗಳಲ್ಲಿ 29 ರನ್ ಗಳಿಸಿ ಔಟಾಗದೆ ಉಳಿದರು.
ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್ ಗಳಲ್ಲಿ 49 ಶತಕ ಬಾರಿಸಿದ್ದು,ವಿರಾಟ್ ಕೊಹ್ಲಿ ಅವರು 277 ಇನ್ನಿಂಗ್ಸ್ ಗಳಲ್ಲಿ 49 ನೇ ಶತಕ ದಾಖಲಿಸಿ ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದ್ದಾರೆ.