ಪುಣೆ :ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಗುರುವಾರ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ದ ವಿರುದ್ಧ ಭಾರತ 7 ವಿಕೆಟ್ ಗಳ ಅಮೋಘ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ ಅವರ ಅಮೋಘ ಶತಕ ಪಂದ್ಯದ ಆಕರ್ಷಣೆಯಾಗಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ ಗೆಲ್ಲಲು 257 ರನ್ ಗಳ ಗುರಿ ಭಾರತಕ್ಕೆ ನೀಡಿತ್ತು. ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ ಉತ್ತಮ ಆರಂಭ ಒದಗಿಸಿಕೊಟ್ಟರು. 48 ರನ್ ಗಳಿಸಿದ್ದ ಶರ್ಮ ಹಸನ್ ಮಹಮೂದ್ ಎಸೆದ ಚೆಂಡನ್ನು ದೊಡ್ಡ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ ನಲ್ಲಿ ಹೃದೋಯ್ ಕ್ಯಾಚಿತ್ತು ನಿರ್ಗಮಿಸಿದರು. ಅರ್ಧ ಶತಕದಿಂದ ವಂಚಿತರಾದರು. ಗಿಲ್ 53 ರನ್ ಗಳಿಸಿ ಔಟಾದರು. ಶ್ರೇಯಸ್ ಅಯ್ಯರ್ 19 ರನ್ ಗಳಿಸಿ ಔಟಾದರು.
ಅಮೋಘ ಆಟವಾಡಿದ ಕೊಹ್ಲಿ ಭರ್ಜರಿ ಆಟವಾಡಿ ಅಜೇಯ ಶತಕ ಸಿಡಿಸಿದರು. 97 ಎಸೆತಗಳಲ್ಲಿ 103 ರನ್ ಗಳಿಸಿದರು. 6ಬೌಂಡರಿ ಮತ್ತು 4 ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿ ಒಳಗೊಂಡಿತ್ತು. ಕೊಹ್ಲಿ ಅವರಿಗೆ ಶತಕ ಸಂಭ್ರಮಿಸಲು ನೇರವಾದ ರಾಹುಲ್ ಔಟಾಗದೆ 34 ರನ್ ಗಳಿಸಿದರು. 41.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿ ಸತತ ನಾಲ್ಕನೇ ಜಯವನ್ನು ತನ್ನದಾಗಿಸಿಕೊಂಡಿತು.
ಇದು ವಿಶ್ವಕಪ್ ಚೇಸ್‌ನಲ್ಲಿ ಕೊಹ್ಲಿ ಅವರ ಮೊದಲ ಶತಕವಾಗಿದೆ. ಭಾರತದ ಪರ ಅತಿ ಹೆಚ್ಚು ವಿಶ್ವಕಪ್ ಶತಕ ಸಿಡಿಸಿದವರು. ರೋಹಿತ್ ಶರ್ಮಾ(7),ಸಚಿನ್ ತೆಂಡೂಲ್ಕರ್( 6), ಸೌರವ್ ಗಂಗೂಲಿ(4), ಶಿಖರ್ ಧವನ್(3), ವಿರಾಟ್ ಕೊಹ್ಲಿ(3).
ಭಾರತಕ್ಕೆ ಗೆಲ್ಲಲು 26 ರನ್‌ಗಳ ಅಗತ್ಯವಿದ್ದಾಗ ಕೊಹ್ಲಿ 74 ರನ್ ಗಳಿಸಿದ್ದರು. ಆ ವೇಳೆ ಅವರು ಶತಕ ಸಿಡಿಸುತ್ತಾರಾ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಕೊಹ್ಲಿ ಎಲ್ಲಾ ಎಸೆತಗಳನ್ನು ಎದುರಿಸಿದರು. ಆಗ ಬಂದ ರನ್ 6, 1, 4, 0, 0, 6, 0, 1, 0, wd, 2, 0, 2, 0, 1, 0, 0, 6.ಶತಕ ಪೂರ್ಣ ಗೊಳಿಸುವಲ್ಲಿ ರಾಹುಲ್ ಸಂಪೂರ್ಣವಾಗಿ ಸಹಕರಿಸಿದರು. ಕೊನೆಯಲ್ಲಿ ರಾಹುಲ್ ಅವರಿಗೆ ಕೊಹ್ಲಿ ದೊಡ್ಡ ಅಪ್ಪುಗೆ ನೀಡಿದರು.
ಬಾಂಗ್ಲಾ ಉತ್ತಮ ಆರಂಭ ಪಡೆಯಿತು. ತಂಜಿದ್ ಹಸನ್ ಮತ್ತು ಲಿಟ್ಟನ್ ದಾಸ್ ಮೊದಲ ವಿಕೆಟ್ ಗೆ 93 ರನ್ ಗಳ ಜತೆಯಾಟವಾಡಿದರು. ತಂಜಿದ್ ಹಸನ್ 51 ರನ್ ಮತ್ತು ಲಿಟ್ಟನ್ ದಾಸ್ 66 ರನ್ ಗಳಿಸಿ ಔಟಾದರು. ನಜ್ಮುಲ್ ಹೊಸೈನ್ ಶಾಂಟೊ 8, ಮೆಹಿದಿ ಹಸನ್ ಮಿರಾಜ್ 3 ರನ್ ಗಳಿಸಿ ಬೇಗನೆ ನಿರ್ಗಮಿಸಿದರು. ತೌಹಿದ್ ಹೃದಯ್ 16 ,ಮುಶ್ಫಿಕರ್ ರಹೀಮ್ 38, ನಸುಮ್ ಅಹ್ಮದ್ 14, ಮಹಮುದುಲ್ಲಾ 46 ರನ್ ಗಳಿಸಿ ಔಟಾದರು.
ಭಾರತದ ಪರ ಬುಮ್ರಾ, ಸಿರಾಜ್ ಮತ್ತು ಜಡೇಜಾ ತಲಾ 2 ವಿಕೆಟ್ ಪಡೆದರು. ಶಾರ್ದೂಲ್ ಮತ್ತು ಕುಲದೀಪ್ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿ ಯಾದರು.