ಗದಗ: ಗಾನಕೋಗಿಲೆಯಾಗಿ ಲತಾ ಮಂಗೇಶ್ಕರ್ ಸಂಗೀತ ಲೋಕದಲ್ಲೇ ತಮ್ಮ ಬದುಕು ಸವೆಸಿದರು. ತಮ್ಮ ಅಸಾಧಾರಣ ಕಂಠ ಮಾಧುರ್ಯದಿಂದ ಸಂಗೀತ ಪ್ರಿಯರ ಮನ ಗೆದ್ದಿದ್ದರು. ಅವರ ಅಗಲಿಕೆಯಿಂದ ನಾಡಿಗೆ ತುಂಬಲಾಗದ ನಷ್ಟವಾಗಿದೆ ಎಂದು ಲೇಖಕಿ ಕವಿತಾ ದಂಡಿನ ಹೇಳಿದರು.
ಕರ್ನಾಟಕ ಲೇಖಕಿಯರ ಸಂಘದಿಂದ ನಗರದಲ್ಲಿ ಆಯೋಜಿಸಿದ್ದ ಆಧ್ಯಾತ್ಮ ಲೋಕದ ದಿಗ್ಗಜ ಇಬ್ರಾಹಿಂ ಸುತಾರ ಹಾಗೂ ಸಂಗೀತ ಕ್ಷೇತ್ರದ ದೃವತಾರೆ ಲತಾ ಮಂಗೇಶ್ಕರ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿದರು.
36 ಭಾಷೆಗಳಲ್ಲಿ ತಮ್ಮ ಗಾನ ಸುಧೆಯಿಂದ ಕೇಳುಗರನ್ನು ಮಂತ್ರಮುಗ್ಧಗೊಳಿಸಿ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿದ್ದಾರೆ. ಸುಮಾರು ಏಳುವರೆ ದಶಕಗಳ ಕಾಲ ಸಂಗೀತ ಕ್ಷೇತ್ರದ ಅನಭಿಷಕ್ತ ದೊರೆಯಂತೆ ಆಳಿದ ಲತಾ ಮಂಗೇಶ್ಕರ್ ಅವರಿಗೆ ಭಾರತ ಸರಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ಅವಿಸ್ಮರಣೀಯ. ಖ್ಯಾತ ಪ್ರವಚನಕಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಮ್ ಸುತಾರ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಮೋಘ.ಸಮಾಜದಲ್ಲಿ ಏಕತೆಯ ನಾದದ ತಂತಿ ಮೀಟಿದ ಭಾವೈಕ್ಯ ಭಕ್ತಿಯ ಸಂಗಮ ಅವರಾಗಿದ್ದರು.
ಶರಣರ, ಸೂಫಿ ಸಂತರ, ದಾರ್ಶನಿಕರ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಹೆಗ್ಗಳಿಕೆ ಅವರದ್ದಾಗಿತ್ತು. ಇವರಿಬ್ಬರ ಅಗಲುವಿಕೆ ಸಾಹಿತ್ಯ-ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ವಿವಿಧ ಮಹಿಳಾ ಮಂಡಳಗಳ ಪದಾಧಿಕಾರಿಗಳಾದ ಗೀತಾ ಹೆಬಸೂರ, ಶ್ರೀದೇವಿ ಬೆಟದೂರ, ಸುಧಾ ರೊದ್ದಂ, ವೇದಾ ಕಾಲವಾಡ, ಸುಜಾತಾ ಶೆಟ್ಟರ, ಶಕುಂತಲಾ ಬೇಲೇರಿ, ಲತಾ ಮುತ್ತಿನಪೆಂಡಿಮಠ ಮುಂತಾದವರು ಸಾಧಕರ ಬದುಕಿನ ವಿವಿಧ ಹಂತಗಳ ಸಾಧನೆಯ ಮೆಟ್ಟಿಲುಗಳನ್ನು ಮೆಲುಕು ಹಾಕಿದರು.
ನುಡಿನಮನದಲ್ಲಿ ಸುವರ್ಣ ವಸ್ತ್ರದ, ಉಮಾ ಗುರಿಕಾರ, ಅಶ್ವಿನಿ ಹೇರೂರ, ಪೂರ್ಣಿಮಾ ಹಿರೇಗೌಡರ, ರತ್ನಾ ಬೇಲೂರ, ಶಾಂತಾ ದುಂದೂರ, ಮಹೇಶ್ವರಿ ನಿಲೂಗಲ್ಲ, ಗೀತಾ ಕರಿಬಿಷ್ಠಿ, ಅನ್ನಪೂರ್ಣ ಪಲ್ಲೇದ, ಸೌಮ್ಯ ಗೌಡ್ರ, ಶಶಿಕಲಾ ಲಕ್ಕನಗೌಡ್ರ, ಪಲ್ಲವಿ ಕುಂಬಾರ, ರೇಣುಕಾ ತಂಟ್ರಿ, ಶಾರದಾ ಗಡಾದ, ಬಸಮ್ಮ ಆನಂದಿ, ಸಂಗಮ್ಮ ಹಿರೇಮಠ, ಮಹಾನಂದ ಜಗಲಿ, ಲಲಿತಾ ಸಂಗನಾಳ, ಸೃಷ್ಟಿ ಲಕ್ಕನಗೌಡ್ರ, ಅನ್ನಪೂರ್ಣ ಗಡಾದ, ಮಮತಾ ಜಗಳೂರ, ಅನುಶ್ರೀ ಕುಂದಾಪುರ, ನೇಮಿತಾ ವಜ್ರಬಂಡಿ, ಅನುರಾಧಾ ಕುಲಕರ್ಣಿ ಇದ್ದರು. ಸುಮಾ ಪಾಟೀಲ ಸ್ವಾಗತಿಸಿದರು. ಸುಧಾ ಬಂಡಾ ನಿರೂಪಿಸಿದರು. ವಿಜಯಲಕ್ಷ್ಮೀ
ಹೊಳ್ಳಿಯವರ ಪರಿಚಯಿಸಿದರು. ಗೀತಾ ದೇಸಾಯಿ ವಂದಿಸಿದರು.