Advertisement

ಐಎಎಸ್‌ಗೂ ಇದೆ, ಸ್ಮಾರ್ಟ್‌ ಮೆಟ್ಟಿಲು!

03:45 AM Jun 06, 2017 | Harsha Rao |

ಐಎಎಸ್‌ ಓದುವಿಕೆಯೆಂದರೆ, ದಿನಗಟ್ಟಲೆ ಲೈಬ್ರರಿಯಲ್ಲಿ ಕೂರುವ ಕಾಲ ಸರಿದಿದೆ. ಈಗ ಐಎಎಸ್‌ ಕಲಿಕಾ ಹಾದಿಯೂ ಸ್ಮಾರ್ಟ್‌. ವಾಟ್ಸಾéಪ್‌, ಟೆಲಿಗ್ರಾಮ್‌, ಫೇಸ್‌ಬುಕ್‌, ಯೂಟ್ಯೂಬ್‌ಗಳನ್ನು ಇಂದು ಬಹುತೇಕ ಯುವಕರು, ಕಾಲಹರಣಕ್ಕೆ ವಸ್ತು ಮಾಡಿಕೊಂಡು ಹಾಳಾಗುತ್ತಿದ್ದಾರೆ ಎಂಬ ದೂರು ದಟ್ಟವಾಗಿರುವಾಗ, ಐಎಎಸ್‌ ಸಾಧಕರು ಅದೇ ಸೋಷಿಯಲ್‌ ಮೀಡಿಯಾವನ್ನೇ ತಮ್ಮ ಯಶಸ್ಸಿಗೆ ಮೆಟ್ಟಿಲು ಮಾಡಿಕೊಂಡಿದ್ದಾರೆ. ಕಳೆದವಾರ ರ್‍ಯಾಂಕ್‌ ಪಡೆದ ಐಎಎಸ್‌ ಸಾಧಕರು, ತಾವು ಅನುಸರಿಸಿದ ಡಿಜಿಟಲ್‌ ಹಾದಿಯನ್ನು ಇಲ್ಲಿ ಹೇಳಿಕೊಂಡಿದ್ದಾರೆ…

Advertisement

ಬೆಳಗ್ಗೆ ಬೇಗನೆ ಲೈಬ್ರರಿಯ ಬಾಗಿಲು ತೆರೆಯುವಾಗ, ರಾತ್ರಿ ಬಾಗಿಲನ್ನು ಮುಚ್ಚುವಾಗ ಗ್ರಂಥಪಾಲಕರ ಜೊತೆ ಯಾರೂ ಇರುವುದಿಲ್ಲ. ಗ್ರಂಥಪಾಲಕರಿಗೆ ಈ ಒಬ್ಬಂಟಿತನ ಕಾಡದಿರಲಿಯೆಂದು ಭಗವಂತ ಐಎಎಸ್‌ ಪರೀಕ್ಷೆಯನ್ನು ಸೃಷ್ಟಿಸಿದ…!- ದಶಕದ ಕೆಳಗೆ “ಐಎಎಸ್‌ ಟಾಪರ್ಸ್‌ ಮೀಟ್‌’ನಲ್ಲಿ ವಿದ್ಯಾರ್ಥಿಗಳ ಶ್ರಮ ಮೆಚ್ಚಿ, ಅಂದಿನ ರಾಷ್ಟ್ರಪತಿ ಅಬ್ದುಲ್‌ ಕಲಾಂ ಹೀಗೆ ಹೇಳಿದಾಗ ಅಲ್ಲೊಂದು ತಮಾಷೆ ಕಂಡಿತ್ತು. ಐಎಎಸ್‌ ಎನ್ನುವುದು ಬದುಕಿನ ಮೌಂಟ್‌ ಎವರೆಸ್ಟ್‌ನ ಆರೋಹಣ. ಅಲ್ಲಿ ಸುಲಭದ ಹಾದಿಯಿಲ್ಲ. ಉತ್ತರ ತಪ್ಪು ಬರೆದು, ಕಾಲು ಜಾರಿದರೆ, ಮೇಲೇಳಲು ಮತ್ತೆ ಬೆಟ್ಟ ಏರಬೇಕು. ದಿನವಿಡೀ ಲೈಬ್ರರಿಯಲ್ಲಿ ರಾಶಿ ರಾಶಿ ಪುಸ್ತಕಗಳೆದುರು ಕೂರಬೇಕು. ಗಡ್ಡ ಬಿಟ್ಟರೂ ಯಾರೂ ಪ್ರಶ್ನಿಸುವ ಹಾಗಿಲ್ಲ. ಇವೆಲ್ಲ ಐಎಎಸ್‌ ಹಾದಿಯಲ್ಲಿನ ವಾಸ್ತವಗಳು.

ಆದರೆ, ಕಲಾಂ ಅವರಿಗೆ ಗೊತ್ತಿಲ್ಲದಂತೆ ಈಗ ಐಎಎಸ್‌ ಆಕಾಂಕ್ಷಿಗಳು “ಸ್ಮಾರ್ಟ್‌’ ಆಗುತ್ತಿದ್ದಾರೆ. ದೇಶದ ಅತಿ ಕಠಿಣ ಪರೀಕ್ಷೆಯನ್ನು ಗೆಲ್ಲಲೂ ಒಂದು ಸ್ಮಾರ್ಟ್‌ ಹಾದಿ ರೂಪುಗೊಂಡಿದೆ. ಬೆಳಗ್ಗೆ ಏಳೆಂಟು ಗಂಟೆಗೆ ಬಂದು ಪೇಪರ್‌ ಹಾಕುವ ಹುಡುಗನನ್ನು ಐಎಎಸ್‌ ತಯಾರಿಯಲ್ಲಿರುವ ಬಹುತೇಕರು ಕಾಯುತ್ತಿಲ್ಲ. ಅಷ್ಟರಲ್ಲಾಗಲೇ ಅವರ ಮೊಬೈಲ್‌ ಆ್ಯಪ್‌ನಲ್ಲಿ ಸುದ್ದಿಸಂಸ್ಥೆಗಳು ಸಾವಿರಾರು ಸುದ್ದಿಗಳನ್ನು ಸುರಿದಿರುತ್ತವೆ. ಒಳ್ಳೆಯ ಕೋಚಿಂಗ್‌ ಪಡೆಯಲು ರೈಲನ್ನೇರಿ ಅವರು ದಿಲ್ಲಿಗೆ ಹೋಗುವುದಿಲ್ಲ. ಯೂಟ್ಯೂಬ್‌ ಇಲ್ಲವೇ ವೆಬ್‌ಸೈಟ್‌ನಲ್ಲಿ ಅವರಿಗೆ ಲೈವ್‌ ಕೋಚಿಂಗ್‌ ಸಿಗುತ್ತದೆ. ಇ- ಲೈಬ್ರರಿ ಬಂದಮೇಲೆ, ಲೈಬ್ರರಿಗೆ ಹೋಗಿ ಹಾಜರಿ ಹಾಕಿದ್ದೂ ಕಡಿಮೆಯೇ. ಮರದ ಕೆಳಗೆ ಕುಳಿತು, ನಾಲ್ಕಾರು ಮಂದಿ ಗ್ರೂಪ್‌ ಸ್ಟಡಿ ಮಾಡುವ ಕಾಲ ಸರಿದು, ವಾಟ್ಸಾéಪಿನಲ್ಲೇ ಗ್ರೂಪ್‌ ಮಾಡಿಕೊಂಡು, ನಿತ್ಯ ಸಾವಿರಾರು ಐಎಎಸ್‌ ಸ್ಪರ್ಧಿಗಳು ಅಲ್ಲಿ ಸಂಧಿಸುವಂತಾಗಿದೆ.

ದೇಶಕ್ಕೆ ಮೊದಲು ಬಂದ ಕನ್ನಡತಿ, ಕೋಲಾರದ ಕೆ.ಆರ್‌. ನಂದಿನಿಯಿಂದ ಹಿಡಿದು ಈ ಬಾರಿ ಬಹುತೇಕ ಐಎಎಸ್‌ ಸಾಧಕರು ತುಳಿದಿದ್ದು ಸ್ಮಾರ್ಟ್‌ ಹಾದಿ. ವಾಟ್ಸಾéಪ್‌, ಟೆಲಿಗ್ರಾಮ್‌, ಫೇಸ್‌ಬುಕ್‌, ಯೂಟ್ಯೂಬ್‌ಗಳನ್ನು ಇಂದು ಬಹುತೇಕ ಯುವಕರು, ಕಾಲಹರಣಕ್ಕೆ ವಸ್ತು ಮಾಡಿಕೊಂಡು ಹಾಳಾಗುತ್ತಿದ್ದಾರೆ ಎಂಬ ದೂರುಗಳು ದಟ್ಟವಾಗಿರುವಾಗ, ಐಎಎಸ್‌ ಸಾಧಕರು ಅದೇ ಸೋಷಿಯಲ್‌ ಮೀಡಿಯಾವನ್ನೇ ತಮ್ಮ ಯಶಸ್ಸಿಗೆ ಮೆಟ್ಟಿಲು ಮಾಡಿಕೊಂಡಿದ್ದಾರೆ. ಮೊದಲು ಯೋಜನೆ, ನಂತರ ಓದುವಿಕೆ, ನಂತರ ಸ್ಮಾರ್ಟ್‌ ದಾರಿ… ಈ 3 ಅಂಶಗಳು ಇವರ ಯಶಸ್ಸಿನ ಗುಟ್ಟುಗಳು. ಇಲ್ಲಿ ಕೆಲವು ಸಾಧಕರು ತಮ್ಮ ಸ್ಮಾರ್ಟ್‌ ಮೆಟ್ಟಿಲಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ…

1. ನವೀನ್‌ ಭಟ್‌,

ರಾಂಕ್: 37 
ಸ್ಮಾರ್ಟ್‌ ಹಾದಿಯಲ್ಲಿ ಸಿಕ್ಕ ಸಕ್ಸಸ್‌: ಶೇ.45- 50
ಏನೇನು ಬಳಸಿದ್ರು?: ವಾಟ್ಸಾéಪ್‌, ಟೆಲಿಗ್ರಾಮ್‌, ಫೇಸ್‌ಬುಕ್‌, ಕೋಚಿಂಗ್‌ ಸಂಸ್ಥೆಯ ಆ್ಯಪ್‌ಗ್ಳು
ಅನುಸರಿಸಿದ ವೆಬ್‌ಸೈಟ್ಸ್‌: www.gktoday.in, www.mrunal.org, www.insightsonindia.com, //iasbaba.com, www.ias4sure.com ಎಂಬಿಬಿಎಸ್‌ನ ಕೊನೆಯ ವರ್ಷದಲ್ಲಿರುವಾಗ ನಾನು ಐಎಎಸ್‌ಗೆ ತಯಾರಿ ಆರಂಭಿಸಿದೆ. ನಮ್ಮ ಬ್ಯಾಚ್‌ನಲ್ಲಿದ್ದ ಐಎಎಸ್‌ ಆಸಕ್ತ 10 ಮಂದಿ ಸೇರಿ, ವಾಟ್ಸಾéಪ್‌ ಗ್ರೂಪ್‌ ರಚಿಸಿಕೊಂಡೆವು. ಸುದ್ದಿ- ಮಾಹಿತಿಗಳನ್ನು ಅದರಲ್ಲಿಯೇ ಹಂಚಿಕೊಳ್ಳುತ್ತಿದ್ದೆವು. ಪರಸ್ಪರ “ಟೆಸ್ಟ್‌’ ಆಯೋಜಿಸುತ್ತಿದ್ದೆವು. ನಂತರ “ಟಾರ್ಗೆಟ್‌ ಐಎಎಸ್‌’ ಗ್ರೂಪ್‌ ಸೇರಿದಂತೆ ಹಿಸ್ಟರಿ, ಜಿಯಾಗ್ರಫಿ, ಇಂಟರ್‌ನ್ಯಾಶನಲ್‌ ಅಂತ ಒಟ್ಟು 15 ಗ್ರೂಪ್‌ಗ್ಳನ್ನು ಮಾಡಿಕೊಂಡೆವು. ಹಾಗಾಗಿ, ಯಾವ ವಿಭಾಗದ ಮಾಹಿತಿಗಳೂ ನಮಗೆ ಮಿಸ್‌ ಆಗುತ್ತಿರಲಿಲ್ಲ.

Advertisement

ಇನ್ನು ಟೆಲಿಗ್ರಾಮ್‌ ಆ್ಯಪ್‌ನ ಉಪಕಾರವನ್ನು ನಾನು ಮರೆಯುವುದಿಲ್ಲ. ಚೆನ್ನೈನ ಶಂಕರ್‌ ಐಎಎಸ್‌ ಅಕಾಡೆಮಿಗೆ ಕೋಚಿಂಗ್‌ಗೆ ಹೋಗಿದ್ದೆ. ಅಲ್ಲಿನ ಟೀಚರುಗಳು ಬಹುತೇಕ ಸಂಗತಿಗಳನ್ನು ಪೋಸ್ಟ್‌ ಮಾಡುತ್ತಿದ್ದದ್ದು ಟೆಲಿಗ್ರಾಮ್‌ನಲ್ಲಿ. ನಮಗೆ ಸಂಶಯಗಳಿದ್ದರೆ, ಕ್ಲಾಸಿನಲ್ಲಿ ಮಾತ್ರವಲ್ಲದೆ, ಟೆಲಿಗ್ರಾಮ್‌ ಗ್ರೂಪ್‌ನಲ್ಲಿಯೂ ಕೇಳಬಹುದಿತ್ತು. ಮೃಣಾಲ್‌, ಇನ್‌ಸೈಟ್ಸ್‌ ಆನ್‌ ಇಂಡಿಯಾ, ಐಎಎಸ್‌ ಬಾಬಾ, ಐಎಎಸ್‌ ಫಾರ್‌ ಶ್ಯೂರ್‌ನಂಥ ವೆಬ್‌ಸೈಟುಗಳು ಅಪಾರ ಜ್ಞಾನಸಂಪಾದನೆಗೆ ಕಾರಣವಾದವು.

ಓದಿ ಓದಿ ಬೋರ್‌ ಆದಾಗ ಫೇಸ್‌ಬುಕ್ಕಿಗೆ ಭೇಟಿ ನೀಡುತ್ತಿದ್ದೆ. ಎಕ್ಸಾಮ್‌ ಹಿಂದಿನ ದಿನದ ತನಕವೂ ಫೇಸ್‌ಬುಕ್‌ನಲ್ಲಿ ನಾನು ಸಕ್ರಿಯನಾಗಿದ್ದೆ. ಐಎಎಸ್‌ ಆಫೀಸರ್‌ಗಳ ಪ್ರೊಫೈಲ್‌ಗೆ ಭೇಟಿ ಕೊಟ್ಟಾಗ, ಅವರ ಕೆಲಸ, ಚಿಂತನೆಗಳು ಸ್ಫೂರ್ತಿ ತುಂಬುತ್ತಿದ್ದವು. ಅವರ ಬಗೆಗಿನ ಸ್ಟೋರಿಗಳು, ನನ್ನನ್ನು ಹುರಿದುಂಬಿಸಿದವು. 
—-
2. ಜಿ. ಪ್ರಿಯಾಂಕಾ 
ರಾಂಕ್: 84
ಸ್ಮಾರ್ಟ್‌ ಹಾದಿಯಲ್ಲಿ ಸಿಕ್ಕ ಸಕ್ಸಸ್‌: ಶೇ.25- 30
ಏನೇನು ಬಳಸಿದ್ರು?: ವಾಟ್ಸಾéಪ್‌, ಯೂಟ್ಯೂಬ್‌, ಫೇಸ್‌ಬುಕ್‌, ಕೋಚಿಂಗ್‌ ಸಂಸ್ಥೆಯ ಆ್ಯಪ್‌ಗ್ಳು
ಅನುಸರಿಸಿದ ವೆಬ್‌ಸೈಟ್ಸ್‌:  www.gktoday.in, www.insightsonindia.com, www.l2a.in
ಐಎಎಸ್‌ನ ಪ್ರಾಥಮಿಕ ಹಂತಕ್ಕೆ ತಯಾರಾಗುವಾಗ ನಾವು ನಾಲ್ವರು ಸ್ನೇಹಿತರು ಫೇಸ್‌ಬುಕ್‌ನಲ್ಲಿ ಕ್ಲೋಸ್ಡ್ ಗ್ರೂಪ್‌ ಮಾಡಿಕೊಂಡಿದ್ದೆವು. ಪ್ರಶ್ನೆಗಳಿಗೆ ಉತ್ತರ ಬರೆದು, ಅಲ್ಲಿ ಪೋಸ್ಟ್‌ ಮಾಡುತ್ತಿದ್ದೆವು. ಮಿಕ್ಕ ಮೂವರು ಇದಕ್ಕೆ ಪ್ರತಿಕ್ರಿಯೆ ಕೊಡುತ್ತಿದ್ದರು. ನಂತರ ವಾಟ್ಸಾéಪ್‌ನಲ್ಲಿ “ಯುಪಿಎಸ್ಸಿ- 2016′ ಅಂತ ಗ್ರೂಪ್‌ ಮಾಡಿಕೊಂಡು, ಉತ್ತರಗಳ ಫೋಟೋ ಹೊಡೆದು, ಅಪ್‌ಲೋಡ್‌ ಮಾಡುತ್ತಿದ್ದೆವು. ದಿನಪತ್ರಿಕೆಗಳಲ್ಲಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳಿದ್ದರೆ, ಅಮೂಲ್ಯ ಮಾಹಿತಿಯ ಸುದ್ದಿಗಳಿದ್ದರೆ, ಅದರ ಫೋಟೋ ಹೊಡೆದು, ಅಪ್‌ಲೋಡ್‌ ಮಾಡುತ್ತಿದ್ದೆವು. 

“ಕಾನ್ಸ್‌ಟಿಟ್ಯೂಶನ್‌ ಆಫ್ ಇಂಡಿಯಾ’ ಎಂಬ ಆ್ಯಪ್‌ನಿಂದ ಬಹಳ ಪ್ರಯೋಜನವಾಯಿತು. ಕಾನೂನನ್ನು ಸ್ವಲ್ಪ ಓರೆಗಣ್ಣಿನಿಂದ ನೋಡುತ್ತಿದ್ದ ನನಗೆ ಸಂವಿಧಾನವನ್ನು ಸಂಪೂರ್ಣವಾಗಿ ಅರ್ಥ ಮಾಡಿಸಿದ್ದು ಈ ಆ್ಯಪ್‌. ಈಗ ಯಾವುದೇ ಕಲಂ ಬಗ್ಗೆ ನಾನು ಹೇಳಬಲ್ಲೆ. ಇದರೊಂದಿಗೆ, “ದಿ ಹಿಂದೂ’, “ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌’ ಆ್ಯಪ್‌ಗ್ಳು ನನಗೆ ತಾಜಾ ಸುದ್ದಿಗಳನ್ನು ಒದಗಿಸುತ್ತಿದ್ದವು.

ನಾನು ತುಮಕೂರಿನಿಂದ ದೆಹಲಿಗೆ ಹೋಗುವುದು ಕಷ್ಟ. ಅಷ್ಟು ಸಮಯವೂ ಇರುತ್ತಿರಲಿಲ್ಲ. ದೆಹಲಿಯ “ಎಲ್‌2ಎ’ ಸಂಸ್ಥೆಯವರು ಆನ್‌ಲೈನ್‌ ಮೂಲಕವೇ ಟೆಸ್ಟ್‌ ಕೊಡುತ್ತಿದ್ದರು. ನಾನು ಉತ್ತರ ಬರೆದು ಕಳುಹಿಸಿದರೆ, ಕೆಲ ದಿನಗಳಲ್ಲಿ ಫ‌ಲಿತಾಂಶ ನೀಡುತ್ತಿದ್ದರು. ಜಿಕೆ ಟುಡೇ, ಇನ್‌ಸೈಟ್ಸ್‌ ಆಫ್ ಇಂಡಿಯಾ ವೆಬ್‌ಸೈಟ್‌ಗಳು ನನ್ನ ಯಶಸ್ಸಿಗೆ ಮೆಟ್ಟಿಲಾದವು. ಇನ್ನು ಕೆಲವು ಕಾನ್ಸೆಪ್ಟ್ಗಳು ಅರ್ಥವಾಗದೆ ಇದ್ದಾಗ, ಯೂಟ್ಯೂಬ್‌ನಲ್ಲಿ 3-4 ನಿಮಿಷ ವಿಶುವಲ್ಸ್‌ ನೋಡುತ್ತಿದ್ದೆ. ಟೀಚರ್‌ ಇಲ್ಲದೆ ಕಲಿಯುವವರಿಗೆ ವಿಡಿಯೋದಲ್ಲಿ ನೋಡಿದ ಸಂಗತಿಗಳು ಬಹಳ ಕಾಲ ನೆನಪಿನಲ್ಲಿ ಉಳಿಯುತ್ತವೆ.
—-

3. ಜಬೀನ್‌ ಫಾತಿಮಾ
ರಾಂಕ್: 525
ಸ್ಮಾರ್ಟ್‌ ಹಾದಿಯಲ್ಲಿ ಸಿಕ್ಕ ಸಕ್ಸಸ್‌: ಶೇ.35- 40
ಏನೇನು ಬಳಸಿದ್ರು?: ಟೆಲಿಗ್ರಾಮ್‌, ವಾಟ್ಸಾéಪ್‌
ಅನುಸರಿಸಿದ ವೆಬ್‌ಸೈಟ್ಸ್‌: www.insightsonindia.com, www.visionias.in
ಐಎಎಸ್‌ ಅಧಿಕಾರಿ ಮಣಿವಣ್ಣನ್‌ ಸರ್‌, ಟೆಲಿಗ್ರಾಮ್‌ನಲ್ಲಿ ಒಂದು ಗ್ರೂಪ್‌ ರಚಿಸಿದ್ದರು. ಇಲ್ಲಿ ಐಎಎಸ್‌, ಐಎಫ್ಎಸ್‌ ಅಧಿಕಾರಿಗಳು ಮೆಂಟರ್‌ ರೀತಿ, ಟೀಚರ್‌ ರೀತಿ ನಮಗೆ ಪಾಠ ಮಾಡಿದ್ದರು. ಆಸಕ್ತ ಅಭ್ಯರ್ಥಿಗಳನ್ನೇ ಆರಿಸಿ, ಈ ಗ್ರೂಪ್‌ಗೆ ಸೇರಿಸುತ್ತಿದ್ದರು. ವೀಕ್ಲಿ ಸೆಶನ್‌ ಇರುತ್ತಿತ್ತು. ಪ್ರಶ್ನೆಪತ್ರಿಕೆ, ಮಾಹಿತಿ ಕಡತಗಳು ಇಲ್ಲಿ ಹೇರಳವಾಗಿ ಸಿಗುವಂತೆ ಮಾಡಿದ್ದರು. ವಾಟ್ಸಾéಪ್‌ಗಿಂತ ಇದು ತುಂಬಾ ಅನುಕೂಲಕಾರಿ. ದೇಶದ ಬೇರೆ ಬೇರೆ ಭಾಗಗಳೂ ಸೇರಿದಂತೆ 1200 ಮಂದಿ ಇಲ್ಲಿದ್ದೆವು. 

ನನ್ನ ಅನೇಕ ಗೆಳತಿಯರು ದಿನಪತ್ರಿಕೆ ಬರುವ ತನಕ ಕಾಯುತ್ತಿರಲಿಲ್ಲ. ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡು, ಬೇಕಾದ ಮಾಹಿತಿಯನ್ನು ಪಡೆಯುತ್ತಿದ್ದರು. ಆದರೆ, ನಾನು ಮಾತ್ರ ದಿನಪತ್ರಿಕೆಯ ಮೂಲ ಪ್ರತಿಯನ್ನೇ ಓದುತ್ತಿದ್ದೆ. ಇನ್‌ಸೈಟ್ಸ್‌ ಆನ್‌ ಇಂಡಿಯಾ ಜಾಲತಾಣವನ್ನು ನಿರಂತರ ಅನುಸರಿಸುತ್ತಿದ್ದೆ. ಮೊದಲು ದೆಹಲಿಯಲ್ಲಿ ಮಾತ್ರವೇ ಇದ್ದ “ವಿಶನ್‌ ಐಎಎಸ್‌’ ಸಂಸ್ಥೆ ಈಗ ಬೆಂಗಳೂರಿಗೆ ಬಂದಿದೆ. ಅವರ ಆನ್‌ಲೈನ್‌ ಕ್ಲಾಸ್‌ ನನಗೆ ಹೆಚುr ಪ್ರಯೋಜನಕ್ಕೆ ಬಂದಿತ್ತು. ಫೇಸ್‌ಬುಕ್‌- ಟ್ವಿಟ್ಟರಿನಲ್ಲಿ ಅನಗತ್ಯ ಸಂಗತಿಗಳೇ ಹೆಚ್ಚಿರುತ್ತಿದ್ದರಿಂದ ನಾನು ಅವುಗಳಿಂದ ಆದಷ್ಟು ದೂರವಿದ್ದೆ. 

4. ಶ್ರೀನಿಧಿ ಬಿ.ಟಿ.
ರಾಂಕ್: 703
ಸ್ಮಾರ್ಟ್‌ ಹಾದಿಯಲ್ಲಿ ಸಿಕ್ಕ ಸಕ್ಸಸ್‌: ಶೇ.30- 35
ಏನೇನು ಬಳಸಿದ್ರು?: ಟೆಲಿಗ್ರಾಮ್‌, ವಾಟ್ಸಾéಪ್‌, ಯೂಟ್ಯೂಬ್‌, ಟ್ವಿಟ್ಟರ್‌
ಅನುಸರಿಸಿದ ವೆಬ್‌ಸೈಟ್ಸ್‌: www.insightsonindia.com, //www.prsindia.org
ನನಗೆ ಮಣಿವಣ್ಣನ್‌ ಅವರ ಟೆಲಿಗ್ರಾಮ್‌ ಗ್ರೂಪ್‌, ಐಪಿಎಸ್‌ ಗೌರವ್‌ ಹಾಗೂ ಪ್ರಸಿಡೆಂಟ್‌ ಅವರ ಆಫೀಸಿನಲ್ಲಿರುವ ಶ್ರೀನಿವಾಸ್‌ ರಚಿಸಿದ್ದ ಟೆಲಿಗ್ರಾಮ್‌ ಗ್ರೂಪ್‌ ಹೆಚ್ಚು ಪ್ರಯೋಜನ ತಂದುಕೊಟ್ಟವು. ದೈನಂದಿನ ವಿದ್ಯಮಾನಗಳನ್ನು ಅಲ್ಲಿ ಎಲ್ಲರೂ ಹಂಚಿಕೊಳ್ಳುತ್ತಿದ್ದೆವು. ಸಂದರ್ಶನ ಎದುರಿಸಿದವರ ಅನುಭವಗಳು ಅಲ್ಲಿ ಸಿಗುತ್ತಿದ್ದವು. 

ಇನ್‌ಸೈಟ್ಸ್‌ ಆನ್‌ ಇಂಡಿಯಾ, ಪಿಆರ್‌ಎಸ್‌ ಜಾಲತಾಣಗಳಲ್ಲಿ ನಾನು ಕಲಿತಿದ್ದು ಹೆಚ್ಚು. ರಾಜ್ಯಸಭಾ ಟಿವಿಯ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಯಾವಾಗಲೂ ನೋಡುತ್ತಿದ್ದೆ. ಟ್ವಿಟ್ಟರ್‌ನಲ್ಲಿ ನ್ಯೂಸ್‌ ಏಜೆನ್ಸಿ, ನ್ಯೂಸ್‌ ಚಾನೆಲ್‌, ದಿನಪತ್ರಿಕೆಗಳನ್ನು ಫಾಲೋ ಮಾಡುತ್ತಿದ್ದೆ. ನ್ಯೂಸ್‌ ಟ್ರೆಂಡಿಂಗ್‌ ಇದ್ದಾಗ, ಅದನ್ನು ಕುತೂಹಲದಿಂದ ನೋಡುತ್ತಿದ್ದೆ. 
ವಾಟ್ಸಾéಪ್‌ನಲ್ಲಿ ಸಮಾನ ಮನಸ್ಕರು ಸೇರಿ ಯುಪಿಎಸ್ಸಿ ಕರ್ನಾಟಕ, ನೊರೇಕಲ್‌, ಡ್ರಾಕ್ಸ್‌ ಮುಂತಾದ ಗ್ರೂಪ್‌ಗ್ಳನ್ನು ರಚಿಸಿಕೊಂಡಿದ್ದೆವು. ಗೋಪಾಲ್‌ ಹೊಸೂರ್‌ ಇಲ್ಲಿ ನಮ್ಮನ್ನು ಇಂಟರ್‌ವ್ಯೂ ಮಾಡುತ್ತಿದ್ದರು. ನಾವು ಎಲ್ಲಾದರೂ ತಪ್ಪು ಮಾಡಿದ್ದರೆ, ಅದನ್ನು ಅವರು ತಿದ್ದಿಕೊಳ್ಳಲು ಹೇಳುತ್ತಿದ್ದರು. 

– ಕೀರ್ತಿ ಕೋಲ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next