ಉತ್ತರಪ್ರದೇಶ: ಭಾರತೀಯ ವಾಯುದಳದ ಜಾಗ್ವಾರ್ ಯುದ್ಧ ವಿಮಾನ ದುರಂತಕ್ಕೀಡಾದ ಘಟನೆ ಸೋಮವಾರ ಕುಶಿನಗರದಲ್ಲಿ ನಡೆದಿದ್ದು, ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವರದಿ ತಿಳಿಸಿದೆ.
ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, ಲಕ್ನೋದಿಂದ ಸುಮಾರು 300 ಕಿಲೋ ಮೀಟರ್ ದೂರದಲ್ಲಿರುವ ಕುಶಿನಗರದ ಪ್ರದೇಶದಲ್ಲಿ ಅಪಘಾತಕ್ಕೀಡಾದ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು. ಪೈಲಟ್ ಗೆ ಯಾವುದೇ ಅಪಾಯವಾಗದೆ, ಸುರಕ್ಷಿತವಾಗಿ ಹೊರಬರಲು ಸಾಧ್ಯವಾಗಿದೆ ಎಂದು ವರದಿ ವಿವರಿಸಿದೆ.
ಘಟನೆ ನಡೆದ ವಿಷಯ ತಿಳಿದ ಕೂಡಲೇ ಭಾರತೀಯ ವಾಯುದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ಸುಟ್ಟು ಹೋದ ವಿಮಾನದ ಬಳಿ ಗ್ರಾಮಸ್ಥರು ಬರದಂತೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಏತನ್ಮಧ್ಯೆ ವಿಮಾನ ದುರಂತಕ್ಕೀಡಾದ ಘಟನೆ ನಡೆಯುತ್ತಿದ್ದಂತೆಯೇ ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದು, ಬಹುತೇಕರು ಅಪಘಾತಕ್ಕೀಡಾದ ವಿಮಾನ ಸಮೀಪದಿಂದ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದಿರುವುದಾಗಿ ವರದಿ ಹೇಳಿದೆ.
ಜೆಟ್ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಕೋರ್ಟ್ ತನಿಖೆಗೆ ಆದೇಶ ನೀಡಲಾಗಿದೆ ಎಂದು ಐಎಎಫ್ ಪ್ರಕಟಣೆಯಲ್ಲಿ ತಿಳಿಸಿದೆ.