Advertisement

ನೋಟ್‌ಬ್ಯಾನ್‌ ಬಳಿಕ ಹೊಸ ನೋಟುಗಳು ಬಂದಿದ್ದು ವಿಮಾನದಲ್ಲಿ

09:57 AM Jan 06, 2020 | Sriram |

ಮುಂಬೈ: ದೇಶಕ್ಕೆ ದಿಢೀರ್‌ ಶಾಕ್‌ ನೀಡಿದ್ದ ನೋಟು ಅಮಾನ್ಯದ ಬಳಿಕ ನಿಷೇಧಿತ ನೋಟುಗಳ ಬದಲಾವಣೆ, ಹಣ ಪಡೆಯಲು ಪಟ್ಟ ಕಷ್ಟ ಹೇಳತೀರದು. ಈ ವೇಳೆ ಕೇಂದ್ರ ಸರ್ಕಾರ, 2000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿ ಪರಿಸ್ಥಿತಿಯನ್ನು ನಿಭಾಯಿಸಿತ್ತು. ಈ ನೋಟುಗಳು ನಿಮಗೆ ಹೇಗೆ ತಲುಪಿದ್ದು ಗೊತ್ತಾ?.

Advertisement

ಟನ್‌ಗಟ್ಟಲೆ ಹೊಸ ನೋಟುಗಳನ್ನು ವಾಯುಪಡೆ ವಿಮಾನಗಳು ಹೊತ್ತು ತಂದು ನಿಮಗೆ ತಲುಪಿಸಿವೆ. ಹೌದು, ಈ ಬಗ್ಗೆ ವಾಯುಪಡೆ ಮಾಜಿ ಮುಖ್ಯಸ್ಥ ಧನೋವಾ ಅವರೇ ಹೇಳಿಕೊಂಡಿದ್ದಾರೆ.

625 ಟನ್‌ ನೋಟುಗಳು!:
ಬಾಂಬೆ ಐಐಟಿ ಆಯೋಜಿಸಿದ್ದ “ಟೆಕ್‌ಫೆಸ್ಟ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಸ್‌.ಧನೋವಾ, 2016ರ ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ 1000 ರೂ. ಹಾಗೂ 500 ರೂ.ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಸಂದರ್ಭದಲ್ಲಿ, ನಾವು ವಿಮಾನಗಳ ಮೂಲಕ 625 ಟನ್‌ ಹೊಸ ನೋಟುಗಳನ್ನು ದೇಶದ ವಿವಿಧ ಭಾಗಗಳಿಗೆ ಸಾಗಿಸಿದೆವು. ವಾಯುಪಡೆಯ 33 ವಿಮಾನಗಳಲ್ಲಿ ಹಣ ಸಾಗಿಸಲಾಯಿತು. 20 ಕೆ.ಜಿ.ಯ ಬ್ಯಾಗ್‌ನಲ್ಲಿ ಒಂದು ಕೋಟಿ ರೂ.

ಹಣವಿದ್ದಿರಬಹುದು. ಆದರೆ ನಾವು ಸಾಗಿಸಿದ ನೋಟುಗಳ ಒಟ್ಟು ಮೊತ್ತ ಎಷ್ಟು ಎಂದು ನಿಖರವಾಗಿ ತಿಳಿದಿಲ್ಲ ಎಂದು ಹೇಳಿದ್ದಾರೆ.

ರಫೇಲ್‌ ಇದ್ದರೆ ಚಿತ್ರಣ ಬದಲು:
ಕಳೆದ ವರ್ಷ ಬಾಲಕೋಟ್‌ ಸರ್ಜಿಕಲ್‌ ಸ್ಟ್ರೈಕ್‌ ಬಳಿಕ ಪಾಕಿಸ್ತಾನ- ಭಾರತ ಗಡಿಯಲ್ಲಿ ವಿಂಗ್‌ ಕಮಾಂಡರ್‌ ಅಭಿನಂದನ್‌ ಮಿಗ್‌-21 ಯುದ್ಧ ವಿಮಾನ ಬಳಸಿದ್ದರು. ಅಂದು ಮಿಗ್‌-21 ಬದಲು ರಫೇಲ್‌ ಯುದ್ಧ ವಿಮಾನ ಇದ್ದಿದ್ದರೆ ಅಲ್ಲಿನ ಪರಿಸ್ಥಿತಿಯೇ ಬದಲಾಗುತ್ತಿತ್ತು ಎಂದು ಧನೋವಾ ಅಭಿಪ್ರಾಯಪಟ್ಟಿದ್ದಾರೆ. ಅಂದು ಅಭಿನಂದನ್‌ ಗಡಿಯಲ್ಲಿ ಮಿಗ್‌-21 ವಿಮಾನ ಬಳಸಿ ಪಾಕಿಸ್ತಾನದ ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು. ಎಸ್‌-400 ಕ್ಷಿಪಣಿಗಳು ಯುದ್ಧ ರಂಗದಲ್ಲಿನ ಪರಿಸ್ಥಿತಿಯನ್ನೇ ಬದಲಿಸುಷ್ಟು ಸಾಮರ್ಥಯ ಹೊಂದಿವೆ ಎಂದು ಧನೋವಾ ತಿಳಿಸಿದ್ದಾರೆ.

Advertisement

2016ರ ಡಿ.31ರಿಂದ 2019ರ ಸೆ.30ರವರೆಗೆ ಧನೋವಾ ವಾಯುಪಡೆ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next