ಹೊಸದಿಲ್ಲಿ : ಭಾರತೀಯ ವಾಯು ಪಡೆ ಪಂಜಾಬ್ ಮತ್ತು ಜಮ್ಮು ಗಡಿಯಲ್ಲಿ ನಿನ್ನೆ ಗುರುವಾರ ರಾತ್ರಿ ಮಹತ್ತರ ಸನ್ನದ್ಧತೆ ಕವಾಯತು ನಡೆಸಿದ್ದು ಇದರಲ್ಲಿ ದೊಡ್ಡ ಸಂಖ್ಯೆಯ ಯುದ್ಧ ವಿಮಾನಗಳು ಪಾಲ್ಗೊಂಡಿವೆ.
ಈ ಕವಾಯತಿನಲ್ಲಿ ಮುಂಚೂಣಿಯ ಯುದ್ಧ ವಿಮಾನಗಳು ಸೇರಿದಂತೆ ಭಾರತೀಯ ವಾಯು ಪಡೆಯ ಜೆಟ್ ವಿಮಾನಗಳು ಸೂಪರ್ ಸಾನಿಕ್ ವೇಗದಲ್ಲಿ ಪಂಜಾಬ್ ನ ಅಮೃತಸರ ಸೇರಿದಂತೆ ಗಡಿ ಜಿಲ್ಲೆಗಳ ಆಗಸದಲ್ಲಿ ಹಾರಾಟ ನಡೆಸಿದವು.
ಪಾಕ್ ವಾಯು ಪಡೆಯ ಫೈಟರ್ ಜೆಟ್‌ಗಳು ಭಾರತದ ವಾಯು ಗಡಿ ಉಲ್ಲಂಘನೆಗೈದು ಒಳನುಗ್ಗಿ ಬರುವ ಯಾವುದೇ ರೀತಿಯ ಅಪಾಯಗಳನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ಈ ಸನ್ನದ್ಧತೆ ಕವಾಯತನ್ನು ನಡಸಲಾಗಿದೆ ಎಂದು ವಾಯು ಪಡೆ ಮೂಲಗಳು ಹೇಳಿವೆ.
ಪಾಕಿಸ್ಥಾನದ ಖೈಬರ್ ಫಖ್‌ತೂನ್‌ಖ್ವಾ ಪ್ರಾಂತ್ಯದ ಬಾಲಾಕೋಟ್ ನಲ್ಲಿನ ಜೈಶ್ ಎ ಮೊಹಮ್ಮದ್ ಉಗ್ರ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ಅತ್ಯಂತ ವಿನಾಶಕಾರಿ ಬಾಂಬ್ ದಾಳಿಯನ್ನು ಕಳೆದ ಫೆ.26ರಂದು ನಡೆಸಿತ್ತು. ಅಂದಿನಿಂದ ಈ ವರೆಗೂ ಪಾಕ್ ಗಡಿಯ ಉದ್ದಕ್ಕೂ ಭಾರತೀಯ ವಾಯು ಪಡೆ ಕಟ್ಟೆಚ್ಚರ ವಹಿಸಿದೆ. ಈ ನಡುವೆ ಪಾಕ್ ಕಡೆಯಿಂದ ಹಾರಿ ಬಂದ ಎರಡು ಡ್ರೋನ್‌ಗಳನ್ನು ಕೂಡ ಹೊಡೆದುರುಳಿಸಲಾಗಿದೆ.
ಎರಡು ದಿನಗಳ ಹಿಂದಷ್ಟೇ ಪಾಕ್ ವಾಯು ಪಡೆಯ ಜೆಟ್ ಗಳು ಸೂಪರ್ ಸಾನಿಕ್ ವೇಗದಲ್ಲಿ ಪೂಂಚ್ ವಲಯದ ಗಡಿ ನಿಯಂತ್ರಣ ರೇಖೆಯಿಂದ ಕೇವಲ 10 ಕಿ.ಮೀ. ಆಚೆ ಪಿಓಕೆ ಗಡಿ ಭಾಗದಲ್ಲಿ ಭಯಾನಕ ಹಾರಾಟ ನಡೆಸಿದ್ದವು.
ಈ ಹಿನ್ನೆಲೆಯಲ್ಲಿ ಭಾರತೀಯ ವಾಯು ಪಡೆ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸುತ್ತಾ ಪಾಕ್ ವಾಯು ಪಡೆಯ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿರಿಸಿದೆ.