ಹೊಸದಿಲ್ಲಿ : ಪಾಕಿಸ್ಥಾನದ ಬಾಲಾಕೋಟ್ ನಲ್ಲಿನ ಜೈಶ್ ಎ ಮೊಹಮ್ಮದ್ ಉಗ್ರ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ನಡೆಸಿದ್ದ ಬಾಂಬ್ ದಾಳಿಯಲ್ಲಿ ಯಾವುದೇ ಜೀವ ಹಾನಿ ಆಗಿದೆ ಎಂಬುದನ್ನು ಪಾಕಿಸ್ಥಾನ ಈಗಲೂ ಅಲ್ಲಗಳೆಯುತ್ತಿದೆ; ಹಾಗಿದ್ದರೂ ಇದೀಗ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಭಾರತೀಯ ವಾಯು ದಾಳಿಯಲ್ಲಿ 200ಕ್ಕೂ ಹೆಚ್ಚು ಮಂದಿ ಹತರಾಗಿರುವುದನ್ನು ಪಾಕ್ ಸೈನಿಕನೊಬ್ಬ ಒಪ್ಪಿಕೊಂಡಿದ್ದಾನೆ.
ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯು ಪಡೆಯು ಪಾಕಿಸ್ಥಾನದ ಬಾಲಾಕೋಟ್ ನಲ್ಲಿನ ಜೈಶ್ ಉಗ್ರರ ತರಬೇತಿ ಶಿಬಿರಗಳ ಮೇಲೆ ಕಳೆದ ಫೆ.26ರಂದು ಬಾಂಬ್ ದಾಳಿ ನಡೆಸಿತ್ತು.
ಐಎಎಫ್ ವಾಯು ದಾಳಿಯಲ್ಲಿ 200 ಉಗ್ರರು ಹತರಾಗಿದ್ದಾರೆ ಎಂದು ಪಾಕ್ ಸೈನಿಕ ಹೇಳಿರುವ ಈ ವೈರಲ್ ವಿಡಿಯೋವನ್ನು ಅಮೆರಿಕದಲ್ಲಿ ನೆಲೆಗೊಂಡಿರುವ ಗಿಲ್‌ಗಿಟ್ ಕಾರ್ಯಕರ್ತ ಸೆಂಗೇ ಹಸ್‌ನನ್ ಸೆರಿಂಗ್ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಕಂಡು ಬರುವಂತೆ ಸೇನಾ ಸಮವಸ್ತ್ರದಲ್ಲಿರುವ ಪಾಕ್ ಸೈನಿಕನು ಗ್ರಾಮಸ್ಥರ ಸಮೂಹವೊಂದಕ್ಕೆ ಮತ್ತು ಮಕ್ಕಳಿಗೆ ಸಾಂತ್ವನ ಹೇಳುತ್ತಿದ್ದಾನೆ; ಆಡಳಿತೆಯನ್ನು ಬೆಂಬಲಿಸಿ ನಿಲ್ಲುವವರು ಜಿಹಾದಿಗಳು; ನಿನ್ನೆ ನಮ್ಮ 200 ಮಂದಿ ಅವರ ವಿಧಿಯಲ್ಲಿ ಹುತಾತ್ಮರಾಗುವುದು ಬರೆದಿತ್ತು; ಅಲ್ಲಾಹುವಿನ ಕೆಲವೇ ಕೆಲವು ಸಂದೇಶವಾಹಕರಿಗೆ ಮಾತ್ರವೇ ಈ ರೀತಿಯ ಹುತಾತ್ಮ ಪದಪ್ರಾಪ್ತಿಯಾಗುತ್ತದೆ ಎಂದು ಸೈನಿಕನು ಸಮಾಧಾನ ಹೇಳುತ್ತಿರುವುದು ಕಂಡು ಬರುತ್ತದೆ.
ಭಾರತೀಯ ವಾಯು ಪಡೆ ನಡೆಸಿರುವ ಬಾಲಾಕೋಟ್ ನ ಬಾಂಬ್ ದಾಳಿಯ ತಾಣಕ್ಕೆ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮದವರು ಹೋಗುವುದನ್ನು, ಅಲ್ಲಿನ ನಾಶ ನಷ್ಟವನ್ನು ಅಂದಾಜಿಸುವುದನ್ನು ತಡೆಯಲಾಗಿದೆ.