ಮುಂಬಯಿ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಮುನ್ನ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಭವಿಷ್ಯ ತೂಗುಯ್ನಾಲೆಯಲ್ಲಿತ್ತು. ಈ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರೆ ಶೀಘ್ರದಲ್ಲೇ ಅವರ ಕ್ರಿಕೆಟ್ ಜೀವನ ಮುಗಿಯುವ ಸಾಧ್ಯತೆಯಿತ್ತು. ತಂಡವನ್ನು ಆಯ್ಕೆ ಮಾಡುವಾಗ ಅದನ್ನೇ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ವ್ಯಕ್ತಪಡಿಸಿ ಭಾರೀ ಟೀಕಾಪ್ರಹಾರಕ್ಕೆ ತುತ್ತಾಗಿದ್ದರು. ಇದೀಗ ಧೋನಿ ಅಭಿಮಾನಿಗಳಿಗೆ ಖುಷಿಯಾಗುವ ಮಾತನ್ನು ಪ್ರಸಾದ್ ಆಡುವ ಮೂಲಕ ಮತ್ತೆ ಕೃಪೆಗೆ ಪಾತ್ರರಾಗಿದ್ದಾರೆ!
ಪ್ರಸಾದ್ 2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಪಾಕಿಸ್ಥಾನ ವಿರುದ್ಧದ ಏಶ್ಯಕಪ್ ಪಂದ್ಯವನ್ನು ನೆನಪು ಮಾಡಿಕೊಂಡಿದ್ದಾರೆ:
“ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಧೋನಿ ಅಭ್ಯಾಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅವರ ಸೊಂಟದ ಹಿಂಭಾಗದಲ್ಲಿ ಮಾಂಸಖಂಡಗಳು ಹಿಡಿದುಕೊಂಡಂತಾಯಿತು. ಪರಿಣಾಮ ಅಲ್ಲೇ ಕುಸಿದು ಬಿದ್ದರು. ತತ್‌ಕ್ಷಣ ನಾವು ಅವರನ್ನು ಸ್ಟ್ರೆಚರ್‌ನಲ್ಲಿ ಕೊಠಡಿಗೆ ದಾಖಲಿಸಿದೆವು. ಅದರ ಅನಂತರ ಪಾಕಿಸ್ಥಾನದ ವಿರುದ್ಧ ಪಂದ್ಯವಿತ್ತು. ನೀವೇನು ಹೆದರಬೇಡಿ ನಾನು ಆ ಪಂದ್ಯದಲ್ಲಿ ಆಡುತ್ತೇನೆಂದು ಧೋನಿ ಹೇಳಿದರು. ಆದರೆ ಅಕ್ಷರಶಃ ಅವರು ತೆವಳುತ್ತಿದ್ದರು. ಹೇಗಪ್ಪಾ ಆಡುತ್ತಾರೆ ಎಂಬ ಕಳವಳ ನಮ್ಮದು. ಆದರೂ ಧೋನಿ ಮಾತ್ರ ನಾನು ಆಡುತ್ತೇನೆಂದೇ ಹೇಳುತ್ತಿದ್ದರು. ನಾವು ಯಾವುದಕ್ಕೂ ಇರಲಿ ಎಂದು ಪಾರ್ಥಿವ್ ಪಟೇಲ್‌ರನ್ನು ಕೂಡಲೇ ಕರೆಸಿಕೊಂಡವು. ಮರು ದಿನ ಬೆಳಗ್ಗೆ ಅವರ ಕೊಠಡಿಗೆ ಹೋದರೆ ಅವರು ಅಲ್ಲಿರಲಿಲ್ಲ. ಹುಡುಕಿಕೊಂಡು ಮೇಲಕ್ಕೆ ಹೋಗಿ ನೋಡಿದರೆ ಈಜುಕೊಳದ ಬಳಿ ಧೋನಿ ಅತಿ ನಿಧಾನಕ್ಕೆ ಹೆಜ್ಜೆಯಿಡುತ್ತಾ ನಡಿಗೆ ಅಭ್ಯಾಸ ಮಾಡುತ್ತಿದ್ದರು’.
“ನಿಯಮದಂತೆ ನಾವು ತಂಡದ ಪಟ್ಟಿಯನ್ನು 24 ಗಂಟೆಗಳ ಮುಂಚೆ ಕೊಡಬೇಕಿತ್ತು. ಪಂದ್ಯ ನಡೆಯಲು ಇನ್ನೇನು ಕೆಲವು ಗಂಟೆಗಳಿದೆ ಎನ್ನುವಾಗ ಧೋನಿ ಪ್ಯಾಡ್ ಕಟ್ಟಿಕೊಂಡು ಎಲ್ಲರನ್ನೂ ಅಚ್ಚರಿಗೆ ಕೆಡವಿದ್ದರು. ಆಗ ನನ್ನನ್ನು ಕರೆದ ಅವರು, ಯಾಕೆ ಅಷ್ಟೊಂದು ಚಿಂತಿಸುತ್ತೀರಿ? ಒಂದು ವೇಳೆ ನನ್ನ ಒಂದು ಕಾಲಿಲ್ಲದಿದ್ದರೂ ಪಾಕ್ ವಿರುದ್ಧದ ಪಂದ್ಯವನ್ನು ಮಾತ್ರ ತಪ್ಪಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು ಎನ್ನುತ್ತಾ ಧೋನಿಯ ಬದ್ಧತೆಯನ್ನು ಪ್ರಸಾದ್ ನೆನಪಿಸಿಕೊಂಡರು.