ಜಪಾನ್: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿರುವ ವೇಟ್ ಲಿಫ್ಟರ್ ಮೀರಾ ಬಾಯಿ ಚಾನು, ತನ್ನ ಈ ಸಾಧನೆಯನ್ನು ದೇಶಕ್ಕೆ ಸಮರ್ಪಿಸಿದ್ದಾರೆ.
ಬೆಳ್ಳಿ ಪದಕ ಗೆದ್ದ ಖುಷಿಯನ್ನು ಟ್ವಿಟರಿನಲ್ಲಿ ಹಮಚಿಕೊಂಡಿರುವ ಚಾನು, ನನ್ನ ಕನಸು ನನಸಾಯಿತು. ಈ ಬೆಳ್ಳಿ ಪದಕವನ್ನು ನನ್ನ ದೇಶಕ್ಕೆ ಅರ್ಪಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ.
ತನ್ನ ಈ ಸಾಧನೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿರುವ ಚಾನು, ನನ್ನ ಈ ಪಯಣದಲ್ಲಿ ಜೊತೆಯಾಗಿ ನಿಂತ, ನನ್ನ ಗೆಲುವು ಪ್ರಾರ್ಥಿಸಿದ ಭಾರತೀಯರಿಗೆ, ನನಗಾಗಿ ಸಾಕಷ್ಟು ತ್ಯಾಗ ಮಾಡಿ ನನ್ನಲ್ಲಿ ನಂಬಿಕೆ ಇರಿಸಿಕೊಂಡಿರುವ ನನ್ನ ತಾಯಿಗೆ ಧನ್ಯವಾದಗಳು ಎಂದಿದ್ದಾರೆ.
Related Articles
ಇನ್ನು ಜಪಾನ್ ನಲ್ಲಿ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್ ನ ಮೊದಲ ದಿನವೇ ಭಾರತ ಪದಕ ಬಾಚಿಗೊಂಡಿತು. 49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಮಿರಾಬಾಯ್ ಚಾನು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
ಚೀನಾದ ಜೀಹೂಹು ಮೊದಲ ಸ್ಥಾನ ಪಡೆದರು. 84 ಕೆಜಿ ಮತ್ತು 87 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದ ಮಿರಾಬಾಯ್ ಚಾನು 89 ಕೆಜಿ ಭಾರ ಎತ್ತುವಲ್ಲಿ ವಿಫಲರಾದರು. ಆದರೆ ಚೀನಾದ ಸ್ಪರ್ಧಿ 94 ಕೆಜಿ ಭಾರ ಎತ್ತಿ ಒಲಿಂಪಿಕ್ ದಾಖಲೆ ಬರೆದರು.
ಇದು ಒಲಿಂಪಿಕ್ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿದೆ. ಈ ಹಿಂದೆ ಸಿಡ್ನಿ ಒಲಿಂಪಿಕ್ ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದರು. ಅವರು 69 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದರು.