ಬೆಂಗಳೂರು: ಸಾರ್ವಜನಿಕರ ಹಿತದೃಷ್ಟಿಯಿಂದ ಉಳ್ಳಾಲ ಗ್ರಾಮಾಂತರ ಪೊಲೀಸ್ ಠಾಣೆ
ಯನ್ನು ಕುತ್ತಾರು ಬಳಿ ಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಯು.ಟಿ. ಖಾದರ್ ಪ್ರಸ್ತಾವಕ್ಕೆ ಉತ್ತರಿಸಿದ ಅವರು, ರಾಷ್ಟ್ರೀಯ ಪೊಲೀಸ್ ಆಯೋಗದ ಪ್ರಕಾರ ಹೊಸ ಪೊಲೀಸ್ ಠಾಣೆ ಆರಂಭಿಸಬೇಕಿದ್ದರೆ ಅದಕ್ಕೆ 150 ಚದರ ಕಿಲೋ ಮೀಟರ್ ಕಾರ್ಯ ವ್ಯಾಪ್ತಿ ಇರಬೇಕು. ಜತೆಗೆ ವರ್ಷಕ್ಕೆ ಕನಿಷ್ಠ 300 ಪ್ರಕರಣ ದಾಖಲಾಗಬೇಕು. ಆದರೆ, ಉಳ್ಳಾಲ ಠಾಣೆಯಲ್ಲಿ ಗರಿಷ್ಠ 243 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಹೆಚ್ಚುವರಿ ಪೊಲೀಸ್ ಠಾಣೆ ಒದಗಿಸುವುದು ಕಷ್ಟ ಎಂದು ಹೇಳಿದರು.
ಈ ವೇಳೆ ಮಧ್ಯೆಪ್ರವೇಶಿಸಿದ ಸದಸ್ಯ ಯು.ಟಿ. ಖಾದರ್, ಉಳ್ಳಾಲದಲ್ಲಿ ಸಮುದ್ರ ಪ್ರವಾಸೋದ್ಯಮ, ಧಾರ್ಮಿಕ ಕೇಂದ್ರಗಳು, ವಿಶ್ವವಿದ್ಯಾಲಯ ಸೇರಿದಂತೆ ಹಲವು ಉನ್ನತ ಶಿಕ್ಷಣ ಸಂಸ್ಥೆಗಳಿವೆ. ಮೇಲಾಗಿ ಇದು ರಾಜ್ಯದ ಗಡಿ ಪ್ರದೇಶವೂ ಆಗಿರುವುದರಿಂದ ವಿಶೇಷಾಧಿಕಾರ ಬಳಸಿ ಪೊಲೀಸ್ ಠಾಣೆ ಮಂಜೂರು ಮಾಡಬೇಕು. ಈ ಹಿಂದೆ ಬಿಜೆಪಿ ಸರಕಾರದಲ್ಲಿ ಡಾ| ವಿ.ಎಸ್.ಆಚಾರ್ಯ ಅವರು ಅಧಿಕಾರಿಗಳ ಆಕ್ಷೇಪ ಇದ್ದರೂ ಮಂಗಳೂರಿನಲ್ಲಿ ಪೊಲೀಸ್ ಆಯುಕ್ತಾಲಯ ಸ್ಥಾಪಿಸಿದ್ದು, ಅವರನ್ನು ಕ್ಷೇತ್ರದ ಜನ ಸ್ಮರಿಸುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಈ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.