Advertisement

ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವೆ

01:20 PM Jun 17, 2017 | Team Udayavani |

ಹುಣಸೂರು: ಕ್ಷೇತ್ರದ ಶಾಸಕ ಎಚ್‌.ಪಿ.ಮಂಜುನಾಥ್‌ರ 50ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು, ಸ್ನೇಹ ಜೀವಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಆರೋಗ್ಯ ಉಚಿತ  ಶಸ್ತ್ರ ಚಿಕಿತ್ಸೆ, ತಪಾಸಣೆ ಶಿಬಿರ, ರಕ್ತದಾನ, ಉದ್ಯೋಗ ಮೇಳ, ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶೇಷವಾಗಿ ಆಚರಿಸಿದರು.

Advertisement

ನಗರದ ಮುನೇಶ್ವರ ಕಾವಲ್‌ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಅಭಿಮಾನಿಗಳು 50 ಕೆ.ಜಿ. ಸೇರಿದಂತೆ ಬಗೆ ಬಗೆಯ ಕೇಕ್‌ ಕಟ್‌ ಮಾಡಿ ಸಂಭ್ರಮಿಸಿದರೆ, ಅವರ ಅಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳವರು, ಸರಕಾರಿ ಅಧಿಕಾರಿಗಳು, ಟಿಬೇಟಿಯನ್ನರು ಸೇರಿದಂತೆ ವಿವಿಧ ಗಣ್ಯರು ಅಭಿನಂದನೆ ಸಲ್ಲಿಸಿದರು.

490 ಮಂದಿ ಶಸ್ತ್ರ ಚಿಕಿತ್ಸೆಗೆ ಆಯ್ಕೆ: ನಗರದ ಅಂಬೇಡ್ಕರ್‌ ಭವನದಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ ಬೆಂಗಳೂರಿನ ಈಸ್ಟ್‌ ಪಾಂಯಿಂಟ್‌ ಆಸ್ಪತ್ರೆ, ಜೆಎಸ್‌ ಎಸ್‌ ಡೆಂಟಲ್‌ ಕಾಲೇಜ್‌, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಜೀವಧಾರ ರಕ್ತನಿಧಿ ಕೇಂದ್ರ ಸೇರಿದಂತೆ ಇನ್ನಿತರೆ ಆಸ್ಪತ್ರೆಗಳ ನುರಿತ ತಜ್ಞರು ಭಾಗವಹಿಸಿದ್ದ ಇಲ್ಲಿ  2850 ಮಂದಿ ತಪಾಸಣೆ ನಡೆಸಿ, 12 ಮಂದಿ ಹೃದಯ ಕಾಯಿಲೆಯವರು ಸೇರಿದಂತೆ 490 ಮಂದಿ ವಿವಿಧ ಶಸ್ತ್ರ ಚಿಕಿತ್ಸೆಗೆ ಹಾಗೂ 112 ಮಂದಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು. 80 ಮಂದಿ ಇಸಿಜಿ ಹಾಗೂ 88 ಮಂದಿ ಎಕೋ ಪರೀಕ್ಷೆ ನಡೆಯಿತು, 249 ಮಂದಿಗೆ ಉಚಿತ ಕನ್ನಡಕ  ಮತ್ತು 1850 ಮಂದಿಗೆ ಉಚಿತ ಔಷಧ ವಿತರಿಸಲಾಯಿತು.

54 ಮಂದಿ ರಕ್ತದಾನ: ಶಾಸಕ ಮಂಜುನಾಥ್‌ ಅಭಿಮಾನಿಗಳು, ಯುವಕ-ಯುವತಿಯರು ಸೇರಿದಂತೆ 54 ಮಂದಿ ರಕ್ತದಾನ ಮಾಡಿದರು. 

491 ಮಂದಿಗೆ ಸ್ಥಳದಲ್ಲೇ ಉದ್ಯೋಗ: ಅಂಬೇಡ್ಕರ್‌ ಭವನದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಸೀಸ್‌, ಎಲ್‌ಅಂಡ್‌ಟಿ, ಎಚ್‌ಸಿಎಲ್‌, ಎಚ್‌ಜಿಎಸ್‌ ಸೇರಿದಂತೆ 43 ವಿವಿಧ ಕಂಪನಿಗಳು ನಡೆಸಿದ ಉದ್ಯೋಗ ಮೇಳದಲ್ಲಿ ನೋಂದಾಯಿಸಿಕೊಂಡಿದ್ದ 1890 ಮಂದಿ ಪೈಕಿ 491 ಮಂದಿಗೆ ಸ್ಥಳದಲ್ಲೇ ವಿವಿಧ ಕಂಪನಿಗಳ ಉದ್ಯೋಗ ಲಭಿಸಿತು.

Advertisement

50 ಕೆ.ಜಿ ಕೇಕ್‌ ಕಟ್‌: ಕಾರ್ಯಕ್ರಮದಲ್ಲಿ ನಗರದ ಸರಸ್ವತಿಪುರಂನ ಶಾಸಕರ ಅಭಿಮಾನಿ ಬಳಗದಿಂದ ಪುರಸಭಾ ಸದಸ್ಯೆ ಸೌರಭಾ ಸಿದ್ದರಾಜು ನೇತೃತ್ವದಲ್ಲಿ, 50 ಕೆ.ಜಿ ತೂಕದ ಕೇಕ್‌ನ್ನು ಶಾಸಕ ಎಚ್‌.ಪಿ.ಮಂಜುನಾಥ್‌ ಕತ್ತರಿಸಿ ಅಭಿಮಾನಿಗಳಿಗೆ ತಿನ್ನಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡರು.

ಇದೇ ಮೊದಲ ಬಾರಿಗೆ ಅವರ ಅಭಿಮಾನಿ ಮುದಗನೂರು ಗಣೇಶ್‌ ವಿಶಿಷ್ಟ ಮಾದರಿಯ ವಿವಿಧ ಬಣ್ಣದ 50 ಬೆಲೂನ್‌ ಹಾರಿ ಬಿಡುವ ಮೂಲಕ ನೆರೆದಿದ್ದವರನ್ನು ಮಂತ್ರ ಮುಗ್ಧರಾಗಿಸಿದರು. ಶಾಸಕರ ಕುಟುಂಬ ವರ್ಗ ಹಾಗೂ ಅಭಿಮಾನಿ ಬಳಗ ಹಾಜರಿದ್ದರು. ಶಿಬಿರದ ಯಶಸ್ವಿಗೆ ರಾಜ್ಯ ಮರಾಠ ವೆಲ್‌ ಫೇರ್‌ ಅಸೋಷಿಯೇಷನ್‌ ಮನೋಜ್‌, ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆನಂದ್‌ ಸೇರಿದಂತೆ ಅನೇಕರು ಸಹಕರಿಸಿದರು.

ವಿವಿಧೆಡೆ ಆಚರಣೆ: ನಗರದ ಟ್ಯಾಲೆಂಟ್‌ ಶಾಲೆ, ನಗರಸಭೆ, ತಾಪಂನಲ್ಲಿ ನೌಕರರ ಸಂಘ ಸೇರಿದಂತೆ ವಿವಿಧೆಡೆ ಕೇಕ್‌ ಕತ್ತಿರಿಸಿ  ಹುಟ್ಟುಹಬ್ಬ ಆಚರಿಸಿದರು. ಸಂಸದ ಪ್ರತಾಪಸಿಂಹ, ನೌಕರರ ಸಂಘದ ತಾಲೂಕು ಅಧ್ಯಕ್ಷ ವರದರಾಜು ಹಾಗೂ ಪದಾಧಿಕಾರಿಗಳು, ತಾಪಂ ಇಒ ಕೃಷ್ಣಕುಮಾರ್‌, ವೃತ್ತ ನಿರೀಕ್ಷಕ ಧರ್ಮೇಂದ್ರ ಹಾಜರಿದ್ದು ಶುಭಕೋರಿದರು. 

ಹೆಚ್ಚಿನ ಸೇವೆ ಸಲ್ಲಿಸುವ ವಾಗ್ಧಾನ: ಶಾಸಕ ಮಂಜುನಾಥ್‌ ತಮ್ಮ 9 ವರ್ಷಗಳ ಅವಧಿಯಲ್ಲಿ ತಾಲೂಕಿಗೆ ತಮ್ಮದೇ ಆದ ಕೊಡುಗೆ ನೀಡಿ, ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ, ನಂಬಿಕೆಗೆ ದ್ರೋಹ ಮಾಡಿಲ್ಲ, ಹಲವು ಬಾರಿ ತಮ್ಮ ಸ್ನೇಹಿತರ ಸಹಕಾರದಿಂದ ಆರೋಗ್ಯ ಶಿಬಿರ, ಉದ್ಯೋಗ ಮೇಳ ನಡೆಸಿ ನೆರವಾಗಿದ್ದೇನೆಂಬ ಆತ್ಮ ತಪ್ತಿ ಇದೆ. ಮುಂದೆಯೂ ದೊಡ್ಡ ಮಟ್ಟದಲ್ಲಿ ಜನರ ಸೇವೆ ಮುಂದುವರೆಸುತ್ತೇನೆಂದು ವಾಗ್ಧಾನ ಮಾಡಿದ ಅವರು ಪ್ರತಿವರ್ಷ ಅರ್ಥ ಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next