Advertisement

ನಾನು ರಾಜೀನಾಮೆ ನೀಡಿ ಚಿರತೆ ಸೆರೆ ಹಿಡಿಯುವುದಾದರೆ ಈಗಲೇ ರಾಜೀನಾಮೆ ನೀಡುತ್ತೇನೆ:ಸಚಿವ ಕತ್ತಿ

10:03 AM Aug 29, 2022 | Shwetha M |

ವಿಜಯಪುರ: ಬೆಳಗಾವಿ ಪಟ್ಟಣದಲ್ಲಿ ಪತ್ತೆಯಾಗಿರುವ ಚಿರತೆಯನ್ನು ಸೆರೆ ಹಿಡಿಯಲಾಗದ ಕಾರಣಕ್ಕೆ ವಿರೋಧಿಗಳು ನನ್ನ ರಾಜೀನಾಮೆ ಕೇಳುತ್ತಾರೆ. ನಾನು ರಾಜೀನಾಮೆ ನೀಡಿದರೆ ಚಿರತೆ ಸೆರೆ ಆಗುತ್ತದೆ ಎಂದಾದರೆ ಈಗಲೇ ರಾಜಿನಾಮೆ ನೀಡುತ್ತೇನೆ ಎಂದು ಅರಣ್ಯ ಸಚಿವ ಉಮೇಶ ಕತ್ತಿ ಪ್ರತಿಕ್ರಿಯಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿರತೆ ಸೆರೆ ಹಿಡಿಯಲು‌ ಉತ್ತರ ಕರ್ನಾಟಕ ‌ಭಾಗದ ಸಿಬ್ಬಂದಿಯನ್ನು ಹಾಕಿದ್ದೇವೆ. ಪಳಗಿದ ಆನೆಗಳನ್ನು‌ ತಂದಿದ್ದೇವೆ, ಆದರೂ ಚಿರತೆ ಸೆರೆ ಸಾಧ್ಯವಾಗಿಲ್ಲ. ಎರಡು ದಿನಗಳಿಂದ ಚಿರತೆ ಬೆಳಗಾವಿ ಪಟ್ಟಣದಲ್ಲಿ ಎಲ್ಲೂ ಕಂಡು ಬಂದಿಲ್ಲ. ಬೆಟ್ಟಕ್ಕೆ ಹೋಗಿರುವ ಸಾಧ್ಯತೆ ಇದೆ. ಸುದೈವಶಾತ್ ಈ ವರೆಗೆ ಯಾರಿಗೂ ಅಪಾಯ ಮಾಡಿಲ್ಲ ಎಂಬುದೇ ಸಮಾಧಾನದ ಸಂಗತಿ ಎಂದರು.

ಚಿರತೆ ಗೋಲ್ಫ್ ಕೋರ್ಟ್ ಸುತ್ತಮುತ್ತ ತಿರುಗಾಡುತ್ತಿದೆ ಎನ್ನಲಾಗಿದೆ. ಆದರೆ ಮೂರು ದಿನಗಳಿಂದ ಚಿರತೆ ಕಂಡು ಬಂದಿಲ್ಲ. ನಿಮಗೆ ಕಂಡರೆ ನಿಮ್ಮನ್ನೂ ಚಿರತೆ ಹಿಡಿಯಲು ಹಚ್ಚೋಣ ಎಂದು ಪತ್ರಕರ್ತರನ್ನು ಕಿಚಾಯಿಸಿದರು.

ಮುರುಘಾ ಶ್ರೀಗಳ ವಿರುದ್ಧ ಆರೋಪ ಮಠದೊಳಗಿನ ಸಂಘರ್ಷದಿಂದ ಆದದ್ದು

ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಚಿತ್ರದುರ್ಗ ಮುರುಘಾ ಶ್ರೀಗಳ ಲೈಂಗಿಕ ಕಿರುಕುಳ ಆರೋಪ ಪ್ರಕರಣದ ಕುರಿತು ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ನನಗೆ ನಿಖರ ಮಾಹಿತಿ ಇಲ್ಲ. ಆದರೆ ಶ್ರೀಗಳು ಹಾಗೂ ಮಾಜಿ ಶಾಸಕ ಬಸವರಾಜ ಮಧ್ಯದ ಆಂತರಿಕ ಸಂಘರ್ಷದ ಪ್ರತಿಷ್ಠೆ, ದ್ವೇಷ ಇಲ್ಲಿಗೆ ಬಂದು ತಲುಪಿದೆ ಎಂದರು.

Advertisement

ಇದನ್ನೂ ಓದಿ:ಮುರುಘಾ ಶರಣರ ವಿರುದ್ಧದ ದೂರಿನ ವಿಚಾರಣೆ ಆರಂಭ

ಸಂತ್ರಸ್ಥರೆನ್ನಲಾದ ಅಪ್ರಾಪ್ತ ವಿದ್ಯಾರ್ಥಿನಿಯರು ಬಾಲಕಿಯರು ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಲಿದ್ದಾರೆ. ನ್ಯಾಯಾಲಯ ಏನು ತೀರ್ಮಾನ ಮಾಡುತ್ತದೆ ಎಂದು ನೋಡೋಣ. ಈ ಬಗ್ಗೆ ನನ್ನಲ್ಲಿ ಹೆಚ್ಚಿನ ಮಾಹಿತಿ ಇಲ್ಲ ಎಂದರು.

ಸ್ವಾಮೀಜಿ ವಿರುದ್ಧ ಆರೋಪ ಮಾಡಿದ್ದು ತಪ್ಪು, ರಾಜ್ಯದಲ್ಲಿ ನೈತಿಕ‌ ಮೌಲ್ಯಗಳೊಂದಿಗೆ ಸಮಾಜ ತಿದ್ದಲು ಒಂದಿಬ್ಬರು ಸ್ವಾಮೀಜಿಗಳು ಉಳಿದುಕೊಂಡಿದ್ದಾರೆ. ಅವರ ಪ್ರಯತ್ನಗಳಿಗೆ ಇಂತಹ ಸಲ್ಲದ ಆರೋಪ ಮಾಡಿ ತೊಂದರೆಗೆ ಸಿಲುಕಿಸುವ ಕೆಲಸ ಆಗ ಬಾರದು. ಇದು ಸಮಾಜವನ್ನು ಬೇರೆ ದಿಕ್ಕಿನಲ್ಲಿ ಒಯ್ಯುವ ಕೆಲಸವಷ್ಟೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next