Advertisement

ಬಿಜೆಪಿಯನ್ನು ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿಸುವೆ

11:21 PM Aug 27, 2019 | Lakshmi GovindaRaj |

ಬೆಂಗಳೂರು: ಇಂದು ಬಿಜೆಪಿ ಸ್ವರ್ಣಯುಗದ ಕಾಲದಲ್ಲಿದೆ. ಇಂತಹ ಕಾಲದಲ್ಲಿ ಎಚ್ಚರಿಕೆಯಿಂದಲೇ ರಾಜ್ಯಾಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ಹಿರಿಯರ ಮಾರ್ಗದರ್ಶನ, ಕಾರ್ಯಕರ್ತರ ಪ್ರೇರಣೆಯಿಂದ ಬಿಜೆಪಿಯನ್ನು ಸರ್ವವ್ಯಾಪಿ, ಸರ್ವಸ್ಪರ್ಶಿ ಮಾಡುವ ವಿಶ್ವಾಸವಿದೆ ಎಂದು ರಾಜ್ಯ ಬಿಜೆಪಿ ನೂತನ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

Advertisement

ರಾಜ್ಯ ಬಿಜೆಪಿ ಕಚೇರಿ ಎದುರು ಮಂಗಳವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ನಿಕಟಪೂರ್ವ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ, ಪಕ್ಷದ ಧ್ವಜವನ್ನು ನೂತನ ಅಧ್ಯಕ್ಷ ಕಟೀಲ್‌ ಅವರಿಗೆ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ನಂತರ, ಯಡಿಯೂರಪ್ಪ, ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಸನ್ಮಾನಿಸಲಾಯಿತು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್‌, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಸಚಿವರಾದ ಬಸವರಾಜ ಬೊಮ್ಮಾಯಿ, ಕೆ.ಎಸ್‌.ಈಶ್ವರಪ್ಪ, ಜಗದೀಶ ಶೆಟ್ಟರ್‌, ವಿ.ಸೋಮಣ್ಣ, ಸಿ.ಟಿ.ರವಿ, ಸಿ.ಸಿ.ಪಾಟೀಲ್‌, ಕೋಟಾ ಶ್ರೀನಿವಾಸ ಪೂಜಾರಿ, ಎಸ್‌.ಸುರೇಶ್‌ ಕುಮಾರ್‌, ಪ್ರಭು ಚೌಹಾಣ್‌, ಸಂಸದರಾದ ಶೋಭಾ ಕರಂದ್ಲಾಜೆ ಇತರರು ಉಪಸ್ಥಿತರಿದ್ದರು.

ಏನು ಧನ್ಯನೋ ನಾನು ಎಂಥ ಮಾನ್ಯನೋ…: “ಏನು ಧನ್ಯಳ್ಳೋ ಲಕುಮಿ ಎಂಥ ಮಾನ್ಯಳ್ಳೋ..’ ಎಂದು ದಾಸರು ಹೇಳಿದ್ದಾರೆ. ಅದನ್ನು “ಏನು ಧನ್ಯನೋ ನಾನು ಎಂಥ ಮಾನ್ಯನೋ’ ಎಂದು ತಿರುಗಿಸುತ್ತೇನೆ. ಹಿಂದು ಸಾಮ್ರಾಜ್ಯವನ್ನು ನಿರ್ಮಿ ಸಿದ ಶಿವಾಜಿ ಮಹಾರಾಜರು, ಭಾರತೀಯ ಪರಂ ಪರೆಯನ್ನು ಜಗತ್ತಿಗೆ ತೋರಿಸಿದ ವೀರ ಸನ್ಯಾಸಿ ವಿವೇಕಾನಂದರು ನಡೆದಾಡಿರುವ ಈ ಪುಣ್ಯ ಭೂಮಿಯಲ್ಲಿ ಜಗನ್ನಾಥರಾವ್‌ ಜೋಷಿ ಅವರ ಹೆಸರಿನಲ್ಲಿರುವ ಸಭಾಭವನದ ಕೆಳಗೆ, ರೈತ ನಾಯಕ ರಾಗಿರುವ ಮುಖ್ಯಮಂತ್ರಿಗಳ ಕೈಯಿಂದ ಪದ ಗ್ರಹಣ ಸ್ವೀಕರಿಸುವ ಸಂದರ್ಭವಿದೆಯೆಲ್ಲಾ ಅದ ಕ್ಕಿಂತ ಶ್ರೇಷ್ಠ ಭಾಗ್ಯ ನನಗೆ ಬೇರೊಂದಿಲ್ಲ ಎಂದರು.

ಜೈಕಾರ, ದೇವಿ- ಪುಣ್ಯ ಪುರುಷರ ಸ್ಮರಣೆ: ಪದಗ್ರಹಣದ ಬಳಿಕ ಮಾಡಿದ ಭಾಷಣದಲ್ಲಿ ಅವರು ಭಾರತ ಮಾತೆ, ಬಿಜೆಪಿ, ಶ್ರೀರಾಮಚಂದ್ರ ಮಹಾರಾಜ್‌, ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ.ನಡ್ಡಾ, ಯಡಿಯೂರಪ್ಪ ಅವರಿಗೆ ಜೈ ಎಂದು ಜೈಕಾರ ಹಾಕುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದರು. ಭಾಷಣ ಆರಂಭಿಸುತ್ತಿದ್ದಂತೆ, ನನ್ನ ಆರಾಧ್ಯ ದೇವತೆ ಕಟೀಲಿನ ದುರ್ಗಾ ಪರಮೇಶ್ವರಿಯ ಪಾದಕಮಲಗಳಿಗೆ ಪ್ರಣಾಮಗಳನ್ನು ಅರ್ಪಿಸುತ್ತೇನೆ. ಈ ಕ್ಷೇತ್ರದ ಪುರಾಣ ಪ್ರಸಿದ್ಧ ಕಾಡು ಮಲ್ಲೇಶ್ವರನ ಪಾದಕಮಲಗಳಿಗೂ ಪ್ರಣಾಮಗಳನ್ನು ಅರ್ಪಿಸುತ್ತೇನೆ.

Advertisement

ಪ್ರಜಾಪ್ರಭುತ್ವ ದ ಪರಿಕಲ್ಪನೆಯನ್ನು ಪರಿಚಯಿಸಿ “ಕಾಯಕವೇ ಕಲ್ಯಾಣ’ ಎಂದು ಪ್ರತಿಪಾದಿಸಿದ ಬಸವಣ್ಣನನ್ನು ಸ್ಮರಿಸುತ್ತಾ, ಬೆಂಗಳೂರು ನಗರವನ್ನು ಅಭಿವೃದ್ಧಿಪಡಿಸಿದ ಕೆಂಪೇಗೌಡರನ್ನು ಸ್ಮರಿಸುತ್ತೇನೆ ಎಂದರು. ಸಭೆಯಲ್ಲಿ ನೆರೆದಿರುವ ಗಣ್ಯರ ಜತೆಗೆ “ಸಾವಿರದ’ ಕಾರ್ಯಕರ್ತ ದೇವರಿಗೆ ಪ್ರಣಾಮ ಅರ್ಪಿಸುತ್ತೇನೆ. ಎಚ್ಚರಿಕೆಯಿಂದಲೇ “ಸಾವಿರದ’ ಎಂಬ ಶಬ್ದದ ಉಲ್ಲೇಖ ಮಾಡಿದ್ದೇನೆ. ಸಾವಿರದ ಸಂಖ್ಯೆಗಿಂತ ಮೇಲೇರುವ ಜನ ಎಂಬ ಅರ್ಥದಲ್ಲಿ ಹೇಳಿದ್ದೇನೆ. ನಮ್ಮ ವಿಚಾರಧಾರೆಗೆ ಯಾವತ್ತೂ ಸಾವಿಲ್ಲವೋ, ಆ ಸಾವಿಲ್ಲದ ವಿಚಾರವನ್ನು ಹಿಡಿದಿರುವ ಕಾರ್ಯಕರ್ತರೇ ಎಂದು ಉಲ್ಲೇಖ ಮಾಡಿದ್ದೇನೆ ಎಂದರು.

ನಾನು ಒಬ್ಬ ಸ್ವಯಂಸೇವಕ…: ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಬ್ಬ ಸ್ವಯಂಸೇವಕ. ನಾನು ಶ್ರೇಷ್ಠ ಜ್ಞಾನಿಯಲ್ಲ. ವಿದ್ವಾಂಸ, ಸಾಧಕನೂ ಅಲ್ಲ. ಸಂಘದ ಶಾಖೆಯಲ್ಲಿ ಬೆಳೆದಿದ್ದೇನೆ. “ನುಡಿಯಲಾರದೆ ತೊದಲುತ್ತಿದ್ದೆನು, ನುಡಿಯ ಕಲಿಸಿತು ಸಂಘವು. ನಡೆಯಲಾರದೆ ತೆವಳುತ್ತಿದ್ದೆನು, ನಡಿಗೆ ಕಲಿಸಿತು ಸಂಘವು…’ ಎಂಬ ಹಾಡು ಸಂಘದಲ್ಲಿದೆ. ಅದರಂತೆ ನಾನು ಈ ಎತ್ತರಕ್ಕೇರಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಯೇ ಕಾರಣ. ಅದಕ್ಕಾಗಿ ಸಂಘಕ್ಕೆ ಪ್ರಥಮ ಪ್ರಣಾಮ ಸಲ್ಲಿಸುತ್ತೇನೆ ಎಂದು ಕಟೀಲ್‌ ಹೇಳಿದರು.

ಕಟೀಲ್‌ ಮಾತಿನ ಲಹರಿ
* ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನು ಮೂರು ಬಾರಿ ಸಂಸದನಾಗಿ, ಈ ಎತ್ತರಕ್ಕೆ ಏರಿದ್ದೇನೆ. ಇದಕ್ಕೆ ಕಾರಣ ಶ್ಯಾಮಪ್ರಸಾದ್‌ ಮುಖರ್ಜಿ, ದೀನ ದಯಾಳ್‌ ಉಪಾಧ್ಯಾಯ ಅವರ ಪರಿಶ್ರಮದ ಸಂಘಟನೆ. ಪಕ್ಷದ ಧುರೀಣರಾದ ಎಲ್‌.ಕೆ.ಅಡ್ವಾಣಿ, ಅಟಲ್‌ ಬಿಹಾರಿ ವಾಜಪೇಯಿ ಅವರು ರಾಷ್ಟ್ರಾದ್ಯಂತ ಪ್ರವಾಸ ನಡೆಸಿದ ಫ‌ಲ. ಇಂದು ಜಗತ್ತಿಗೇ ಭಾರತದ ಮಹತ್ವ ಸಾರುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್‌ ಶಾ ಅವರ ಕಾರ್ಯಶೈಲಿ.

* ಬಿ.ಎಸ್‌.ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ, ಅನಂತ ಕುಮಾರ್‌ ಅವರಂತಹ ಶ್ರೇಷ್ಠ ಸಾಧಕರ ಹೋರಾಟದ ಪರಿಣಾಮವಾಗಿ ರಾಜ್ಯದಲ್ಲಿ ಪಕ್ಷ ಅಧಿಕಾರ ಸ್ಥಾನದಲ್ಲಿದೆ.

* ನಾನು ಒಬ್ಬಂಟಿಯಲ್ಲ. ಯಡಿಯೂರಪ್ಪ ಅವರಂತಹ ಶ್ರೇಷ್ಠ ನಾಯಕರ ಮಾರ್ಗದರ್ಶನ, ಸಾವಿರಾರು ಕಾರ್ಯಕರ್ತರ ಪ್ರೇರಣೆಯಿದೆ. ಹಿರಿಯರ ನಿರೀಕ್ಷೆ, ಅಪೇಕ್ಷೆಗೆ ಚ್ಯುತಿ ಬಾರದ ರೀತಿಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತೇನೆ.

* ರಾಜ್ಯದಲ್ಲಿ ಬರ, ನೆರೆ ಕಾಣಿಸಿಕೊಂಡಾಗ ದಿನದ 24 ಗಂಟೆ ಕಾಲಿಗೆ ಚಕ್ರ ಕಟ್ಟಿಕೊಂಡು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಕಣ್ಣೊರೆಸುವ ಮುಖ್ಯಮಂತ್ರಿ ಎಂದರೆ ಅದು ಯಡಿಯೂರಪ್ಪ. ನೆರೆಪೀಡಿತ ಗ್ರಾಮಗಳಿಗೆ ಭೇಟಿ ನೀಡಿರುವ ಯಡಿಯೂರಪ್ಪ, ಸಂತ್ರಸ್ತರ ಕಣ್ಣೀರು ಒರೆಸಿದ್ದಾರೆ.

* ಒಬ್ಬ ಸಾಮಾನ್ಯ ಕಾರ್ಯಕರ್ತನೂ ರಾಜ್ಯದ ಅಧ್ಯಕ್ಷನಾಗಬಹುದು. ಹಳ್ಳಿ, ಹಳ್ಳಿಗಳಲ್ಲಿ, ಮನೆ ಮನೆಗಳಲ್ಲಿ ಮತಯಾಚಿಸುವ ಕಾರ್ಯಕರ್ತನು ರಾಜ್ಯಾಧ್ಯಕ್ಷನಾಗಬಹುದು ಎಂದರೆ ಅದು ಬಿಜೆಪಿ ಯಲ್ಲಿ ಮಾತ್ರ ಸಾಧ್ಯ ಎಂಬುದಕ್ಕೆ ಇದು ಸಾಕ್ಷಿ.

* ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಬ್ಟಾಗಿಲಿನಂತಿರುವ ಕರ್ನಾಟಕದಲ್ಲಿ ಹಳ್ಳಿ ಹಳ್ಳಿ ತಿರುಗಿ, ರೈತಪರ ಹೋರಾಟಗಾರರಾಗಿ ಅಧಿಕಾರ ಸಿಕ್ಕಾಗ ದೇಶದಲ್ಲೇ ಪ್ರಥಮ ಬಾರಿಗೆ ಕೃಷಿ ಬಜೆಟ್‌ ಮಂಡಿಸಿ, ಸಾವಯವ ಕೃಷಿ ಆಯೋಗ ರಚಿಸುವ ಮೂಲಕ ರೈತರ ಬೆಳಕಾಗಿರುವ ನಮ್ಮೆಲ್ಲರ ಹಿರಿಯ ನಾಯಕರು ಯಡಿಯೂರಪ್ಪ.

ಅಲ್ಪಸಂಖ್ಯಾತರ ಬಗ್ಗೆಯೂ ನಮಗೆ ಕಳಕಳಿ ಇದೆ. ಹಿಂದೂ, ಮುಸ್ಲಿಂ, ಕ್ರೈಸ್ತರು ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎಂಬುದು ಪ್ರಧಾನಿ ಮೋದಿಯವರ ಅಪೇಕ್ಷೆ. ಹಾಗಾಗಿ ಒಡಕಿನ ಮಾತಿಗೆ ಅವಕಾಶ ನೀಡದೆ ಎಲ್ಲ ವರ್ಗದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮೂಲಕ ಪಕ್ಷವನ್ನು ಬಲಪಡಿಸೋಣ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next