ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲಘಟಗಿ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದರೇ ಅವರಿಗೆ ಕ್ಷೇತ್ರ ಬಿಟ್ಟು ಕೊಡುವೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜ್ಯದ ಹಲವೆಡೆಗಳಲ್ಲಿ ಅನೇಕರು ಆಹ್ವಾನಿಸುತ್ತಿದ್ದಾರೆ. ಈ ದಿಸೆಯಲ್ಲಿ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅದು ಅವರಿಗೆ ಬಿಟ್ಟ ವಿಷಯ. ಒಂದು ವೇಳೆ ಕಲಘಟಗಿಯಿಂದಲೂ ಸ್ಪರ್ಧಿಸಲು ಇಚ್ಛಿಸಿದರೆ ಆ ಕ್ಷೇತ್ರ ಬಿಟ್ಟುಕೊಡುವೆ ಎಂದರು.
ರಾಜಕೀಯ ಉದ್ದೇಶಕ್ಕಾಗಿ ಅಲ್ಲ: ರಾಜಕೀಯ ಉದ್ದೇಶಕ್ಕಾಗಿ ನಾನು ಸಾಮೂಹಿಕ ವಿವಾಹ ಮಾಡುತ್ತಿಲ್ಲ. ನಾನು ಸಾಮೂಹಿಕ ವಿವಾಹ ಮಾಡಿಸುವುದು ಹೊಸದಲ್ಲ. ಲಾಕ್ ಡೌನ್ ಕಾರಣಕ್ಕೆ ಮಾತ್ರ ಈ ಕಾರ್ಯ ಮಾಡಿರಲಿಲ್ಲ. ಇದೀಗ ಮತ್ತೆ ಸಾಮೂಹಿಕ ವಿವಾಹ ಮಾಡಿಸುವ ಕಾರ್ಯ ಮಾಡುತ್ತಿದ್ದೇವೆ. ಇದು ಯಾವುದೇ ರಾಜಕೀಯ ಉದ್ದೇಶದಿಂದ ಮಾಡುತ್ತಿಲ್ಲ. ಈ ಬಾರಿ 4000 ಸಾಮೂಹಿಕ ವಿವಾಹ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಇದು ವರ್ಲ್ಡ್ ರೆಕಾರ್ಡ್ ಕೂಡ ಆಗಬಹುದು. ಈಗಾಗಲೇ 1200 ವಿವಾಹ ಮಾಡಿದ್ದೇನೆ. ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಫೋನ್ ಗಳು ಬರುತ್ತಿವೆ ಎಂದರು.
ಬಿಜೆಪಿಗರಿಗೆ ಅಭಿವೃದ್ಧಿ ಬೇಕಿಲ್ಲ: ಬಿಜೆಪಿಯವರು ಕೇವಲ ವಿವಾದ ವಿಷಯವಾಗಿ ಮಾತನಾಡುತ್ತಾರೆ ವಿನಹ ಅವರಿಗೆ ಅಭಿವೃದ್ಧಿ ವಿಷಯ ಬೇಕಾಗಿಲ್ಲ. ವಿರೋಧ ಪಕ್ಷವಾಗಿ ಆಡಳಿತವನ್ನು ಟೀಕೆ ಮಾಡಿದರೇ ಅದಕ್ಕೆ ಪ್ರತಿ ಹೇಳಿಕೆ ಕೊಡುತ್ತಿದ್ದಾರೆ. ಜನ ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದರು.
ಭೂಮಿ ಬಗ್ಗೆ ಗೌರವ ಬೇಕು: ನಾನು ಮರಾಠಾ ಸಮುದಾಯದ ನಾಯಕ. ಆದರೆ ನಾವು ಕರ್ನಾಟಕದಲ್ಲಿದ್ದಾಗ ನಮ್ಮ ಭೂಮಿ, ನಮ್ಮ ಭಾಷೆ ಬಗ್ಗೆ ಗೌರವ ಇಟ್ಟುಕೊಳ್ಳಬೇಕು. ಇನ್ನು ಗಡಿ ವಿವಾದ ಕಳೆದ ಹಲವಾರು ದಿನಗಳಿಂದ ನಡೆಯುತ್ತಿದೆ. ಗಡಿ ವಿವಾದ ಕೋರ್ಟ್ ನಲ್ಲಿದೆ. ಈ ಬಗ್ಗೆ ಹೆಚ್ಚು ಮಾತನಾಡುವುದು ಸರಿಯಲ್ಲ. ರಾಜ್ಯದ ನಾಯಕರು ಸಹ ಈ ಬಗ್ಗೆ ಧ್ವನಿ ಎತ್ತಬೇಕು. ಸರಕಾರಕ್ಕೆ ನಾವು ಸಹ ಒತ್ತಾಯ ಮಾಡುತ್ತೇವೆ ಎಂದರು.