ಉಡುಪಿ: ಪೆಟ್ರೋಲಿಯಂ ವರ್ತಕರಿಗೆಇರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರಕಾರದ ಮೊರೆ ಹೋಗಬೇಕಾಗಿದೆ. ಈ ನೆಲೆಯಲ್ಲಿ ರಾಜ್ಯ ಪೆಟ್ರೋಲಿಯಂ ವರ್ತಕರ ಮಹಾಮಂಡಳವು ರಾಜ್ಯದ ಎಲ್ಲ ಸಂಸದರಿಗೆ ಸಮಸ್ಯೆ,ತೊಡಕುಗಳನ್ನು ವಿವರಿಸಿ ಅವರು ಒಕ್ಕೊರಲಿನಿಂದ ಸಮಸ್ಯೆಯನ್ನು ಲೋಕಸಭೆಯಲ್ಲಿ ಎತ್ತಿ ಹಿಡಿದು ಚರ್ಚಿಸಿದಾಗ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಆದುದರಿಂದ ಸಂಘಟನೆಯು ಸಂಸದರನ್ನು ಭೇಟಿಯಾಗಿ ಸಮಸ್ಯೆಗೆ ಸ್ಪಂದಿಸಬೇಕೆಂದು ಕೇಳಿಕೊಳ್ಳಬೇಕಾಗಿದೆ. ತೈಲ ವರ್ತಕರ ಸಮಸ್ಯೆಗಳಿಗೆ ಪರಿಹಾರವನ್ನು ಕೇಳಲು ಸಂಘಟನೆಯೊಂದಿಗೆ ನಾನು ಕೈಜೋಡಿಸುತ್ತೇನೆ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಪೆಟ್ರೋಲಿಯಂ ವರ್ತಕರ ಮಹಾಮಂಡಳ ಆಶ್ರಯದಲ್ಲಿ ದ.ಕ., ಉಡುಪಿ ಜಿಲ್ಲಾ ಪೆಟ್ರೋಲಿಯಂ ವರ್ತಕರ ಸಂಘ ಮಂಗಳೂರು ಸಹಭಾಗಿತ್ವದಲ್ಲಿ ಉಡುಪಿ ಹೊಟೇಲ್ ಲಿಗಾಡೊದಲ್ಲಿ ರವಿವಾರ ನಡೆದ ತೈಲ ಸಮಾಗಮ-2020 ಸಮಾರೋಪ ಸಮಾರಂಭದಲ್ಲಿ ನೂತನ ವೆಬ್‌ಸೈಟ್ ಅನ್ನು ಅವರು ಅನಾವರಣಗೊಳಿಸಿ ಮಾತನಾಡಿದರು.
ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಇದುವರೆಗೆ ಉಡುಪಿಯಲ್ಲಿ ನಡೆದ ಯಾವುದೇ ಸಮಾವೇಶದಲ್ಲಿ ಉದ್ಘೋಷಗೊಂಡ ವಿಚಾರಧಾರೆಯು ಬಹುತೇಕ ಈಡೇರಿದ ಇತಿಹಾಸವಿದೆ. ತೈಲ ವರ್ತಕರ ಸಮಸ್ಯೆಗೂ ಸೂಕ್ತ ಪರಿಹಾರ ಖಂಡಿತವಾಗಿ ದೊರಕಲಿದೆ ಎನ್ನುವ ವಿಶ್ವಾಸವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪೆಟ್ರೋಲಿಯಂ ವರ್ತಕರ ಮಹಾಮಂಡಳ ಅಧ್ಯಕ್ಷ ಎಚ್.ಎಸ್. ಮಂಜಪ್ಪ ಮಾತನಾಡಿ, ರಾಜ್ಯದ ಎಲ್ಲ ಪೆಟ್ರೋಲಿಯಂ ವರ್ತಕ
ಬಂಧುಗಳನ್ನು ಒಂದೆಡೆ ಸೇರಿಸಿ ಉದ್ಯಮಕ್ಕೆ ಸಂಬಂಧಪಟ್ಟ ವಿಚಾರಗಳ ವಿನಿಮಯ, ಪರಸ್ಪರ ಪರಿಚಯ ಮತ್ತು ಸಂಘದ ಬಲವರ್ಧನೆಗಾಗಿ ತೈಲ ಸಮಾಗಮ -2020 ವನ್ನು ಆಯೋಜಿಸಲಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಆನಂದ್ ಕಾರ್ನಾಡ್, ಉಪಾಧ್ಯಕ್ಷರಾದ ರಾಜದೀಪ್ ಕೌಜಲಗಿ, ಕೆ.ವಿ. ಶೆಣೈ, ಅನೀಸ್ ಸನವುಲ್ಲಾ, ಮುಖ್ಯ ಸಂಯೋಜಕ ಸತೀಶ್ ಎನ್. ಕಾಮತ್, ಖಜಾಂಚಿ ವಿಶ್ವನಾಥ ಪಾಟೀಲ್, ದ.ಕ., ಉಡುಪಿ ಜಿಲ್ಲಾ ಪೆಟ್ರೋಲಿಯಂ ವರ್ತಕರ ಸಂಘದ ಕಾರ್ಯದರ್ಶಿ ರಾಜೇಂದ್ರ ಕಟ್ಟೆ, ಉಪಾಧ್ಯಕ್ಷರಾದ ಆನಂದ ಎಂ., ಪ್ರಸಾದ್ ಹತ್ವಾರ್, ಮುರಳೀಧರ ಪ್ರಭು ಮತ್ತು ಉಭಯ ಸಂಘಟನೆಗಳ ಸರ್ವ ಸದಸ್ಯರು ಉಪಸ್ಥಿತರಿದ್ದರು.
ರಾಜ್ಯ ಪೆಟ್ರೋಲಿಯಂ ವರ್ತಕರ ಮಹಾಮಂಡಳದ ಉಪಾಧ್ಯಕ್ಷ, ಸಮ್ಮೇಳನ ಸಮಿತಿ ಅಧ್ಯಕ್ಷ ಎಚ್.ಆರ್. ತಿವಾರಿ ಸ್ವಾಗತಿಸಿದರು. ದೈ.ಶಿ.ಶಿಕ್ಷಕ ಸತೀಶ್ಚಂದ್ರ
ಶೆಟ್ಟಿ ನಿರೂಪಿಸಿದರು. ಪೆಟ್ರೋಲಿಯಂ ವರ್ತಕರ ಸಂಘದ ಅಧ್ಯಕ್ಷ ವಾಮನ್ ಪೈ ವಂದಿಸಿದರು.