ನವದೆಹಲಿ: ಬಿಜೆಪಿ ಕಚೇರಿಯಲ್ಲಿ ಅಗ್ನಿವೀರರನ್ನು ಭದ್ರತೆಗಾಗಿ ನೇಮಿಸಿಕೊಳ್ಳಲು ನಾನು ಆದ್ಯತೆ ನೀಡುತ್ತೇನೆ, ನೀವು ಕೂಡ ಮಾಡಬಹುದು, ಸೇನಾ ಯೋಧರ ಮೇಲೆ ಜನರಿಗೆ ನಂಬಿಕೆಯಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ವಿವಾದಾತ್ಮಕ ಹೇಳಿಕೆ ನೀಡಿ ತೀವ್ರವಾಗಿ ಟೀಕೆಗಳಿಗೆ ಗುರಿಯಾಗಿದ್ದಾರೆ.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೊಸತೊಂದು ವಿವಾದದಲ್ಲಿ ಸಿಲುಕಿದ್ದಾರೆ.
ಮಹಾನ್ ಸೇನೆ, ಅವರ ಶೌರ್ಯವು ಇಡೀ ಜಗತ್ತಿನಲ್ಲಿ ಅನುರಣಿಸುತ್ತದೆ, ರಾಜಕೀಯ ಕಚೇರಿಯ ‘ಚೌಕಿದಾರಿ’ ಮಾಡಲು ಭಾರತೀಯ ಸೈನಿಕನಿಗೆ ಆಹ್ವಾನ, ಅದನ್ನು ನೀಡಿದ ವ್ಯಕ್ತಿಗೆ ಅಭಿನಂದನೆಗಳು. ಭಾರತೀಯ ಸೇನೆಯು ತಾಯಿ ಭಾರತಿಯ ಸೇವೆಯ ಮಾಧ್ಯಮವಾಗಿದೆ, ಕೇವಲ ಉದ್ಯೋಗವಲ್ಲ. ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಸಹಿತ ವಿವಿಧ ಪಕ್ಷಗಳು ತೀವ್ರ ವಿರೋಧ ವ್ಯಕ್ತ ಪಡಿಸಿ, ಆಕ್ರೋಶ ಹೊರ ಹಾಕಿವೆ.
ಅಗ್ನಿಪಥ್ ಯೋಜನೆಯಿಂದ ಹೊರಬಂದ ಅಗ್ನಿವೀರರು ಖಂಡಿತವಾಗಿಯೂ ತರಬೇತಿ ಮತ್ತು ಕರ್ತವ್ಯಕ್ಕೆ ಬದ್ಧರಾಗುತ್ತಾರೆ, ಸೈನ್ಯದಲ್ಲಿ ಸೇವೆಯನ್ನು ಪೂರ್ಣಗೊಳಿಸಿದ ನಂತರ ಅವರು ಯಾವ ಕ್ಷೇತ್ರಕ್ಕೆ ಹೋಗುತ್ತಾರೆಯೋ ಅವರ ಶ್ರೇಷ್ಠತೆಯನ್ನು ಬಳಸಿಕೊಳ್ಳಲಾಗುತ್ತದೆ. ಅದು ಸ್ಪಷ್ಟವಾಗಿ ನಾನು ಅರ್ಥಮಾಡಿಕೊಂಡಿದ್ದೇನೆ. ಟೂಲ್‌ಕಿಟ್‌ಗೆ ಸಂಬಂಧಿಸಿದವರು ನನ್ನ ಹೇಳಿಕೆಯನ್ನು ತಿರುಚುವ ಮೂಲಕ ವೀರ ಯೋಧರನ್ನು ಅವಮಾನಿಸಲು ಪ್ರಯತ್ನಿಸುತ್ತಿದ್ದಾರೆ.ಇದು ದೇಶದ ಸೈನಿಕರಿಗೆ ಅವಮಾನ ಮಾಡಿದಂತಾಗುತ್ತದೆ. ವೀರ ಯೋಧರ ವಿರುದ್ಧದ ಈ ಟೂಲ್‌ಕಿಟ್ ಗ್ಯಾಂಗ್‌ನ ಷಡ್ಯಂತ್ರಗಳ ಬಗ್ಗೆ ರಾಷ್ಟ್ರಕ್ಕೆ ಚೆನ್ನಾಗಿ ತಿಳಿದಿದೆ ಎಂದು ಟೀಕೆಗಳ ಕುರಿತಾಗಿ ಕೈಲಾಶ್ ವಿಜಯವರ್ಗಿಯಾ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಅಗ್ನಿವೀರ್ ನೋಂದಣಿ ಜೂನ್ 24 ರಿಂದ; ಬೆಂಕಿ ಹಚ್ಚುವವರಿಗೆ ಜಾಗವಿಲ್ಲ