Advertisement

ಕಾಪುವಿನಿಂದಲೇ ಸ್ಪರ್ಧೆ: ಅನುಪಮಾ ಶೆಣೈ

09:40 AM Apr 14, 2018 | Team Udayavani |

ಉಡುಪಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಪು ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಭಾರತೀಯ ಜನಶಕ್ತಿ ಕಾಂಗ್ರೆಸ್‌ ನ ಮಹಾಕಾರ್ಯದರ್ಶಿ ಅನುಪಮಾ ಶೆಣೈ ಸ್ಪಷ್ಟಪಡಿಸಿದ್ದಾರೆ. ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಪು ನನ್ನ ಸ್ವಕ್ಷೇತ್ರ. ಹಾಗಾಗಿ ಬಳ್ಳಾರಿ ಅಥವಾ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದರು.

Advertisement

ಫೆ. 18ರಂದು ತನ್ನ ಪಕ್ಷ ನೋಂದಣಿಯಾಗಿದ್ದು, ಬೆಂಡೆಕಾಯಿ ಚಿಹ್ನೆಯನ್ನು ಚುನಾವಣಾ ಆಯೋಗವು ನೀಡಿದೆ. ಪಕ್ಷದ ವತಿಯಿಂದ ರಾಜ್ಯದಲ್ಲಿ 80ರಷ್ಟು ಮಂದಿ ಸ್ಪರ್ಧಿಸಲು ಮುಂದೆ ಬಂದಿದ್ದಾರೆ. ಪಟ್ಟಿಯನ್ನು ಪರಿಶೀಲಿಸಲಾಗುತ್ತಿದೆ. 30 ಕ್ಷೇತ್ರಗಳಲ್ಲಿ ಸ್ಪರ್ಧೆ ಖಚಿತ. ಪಕ್ಷವೊಂದು ಬೇಕು ಎಂಬ ಉದ್ದೇಶದಿಂದ ಕಟ್ಟಿರುವುದೇ ವಿನಾ ಈ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಲ್ಲ ಎಂದು ಅನುಪಮಾ ಹೇಳಿದರು.

ಅಭ್ಯರ್ಥಿ ಅವಕಾಶ 
ನಮ್ಮ ಪಕ್ಷ ಸೇರುವವರಿಗೆ ಕ್ರಿಮಿನಲ್‌ ಹಿನ್ನೆಲೆ ಇರಬಾರದು, ಕನ್ನಡ ಓದಲು, ಬರೆಯಲು ಬರಬೇಕು. ಪಕ್ಷದ ಸದಸ್ಯತ್ವಕ್ಕೆ 20 ರೂ. ವಿನಾ ಬೇರೇನನ್ನೂ ತೆಗೆದುಕೊಳ್ಳುವುದಿಲ್ಲ. ಹೋರಾಟದ ಮನೋಭಾವ ಇರುವವರು ಸ್ಪರ್ಧಿಸಲು ಇಚ್ಛಿಸಿದರೆ ಉಡುಪಿ ಕ್ಷೇತ್ರದಲ್ಲಿ ಅವಕಾಶ ನೀಡಲಾಗುವುದು ಎಂದರು.

ಸಾರ್ವಜನಿಕ ಹಿತಾಸಕ್ತಿ ಕೇಸು
ಉಡುಪಿಯ ಸರಕಾರಿ ಹಾಜಿ ಅಬ್ದುಲ್ಲಾ ಮಹಿಳೆಯರು ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡಿರುವುದು, ಜೋಗ ಜಲಪಾತದ ಅಭಿವೃದ್ಧಿಯನ್ನು ಬಿ.ಆರ್‌. ಶೆಟ್ಟಿ ಅವರಿಗೆ ನೀಡಿರುವುದು ಮತ್ತು ಮುಖ್ಯಮಂತ್ರಿ ಹ್ಯೂಬ್ಲೋಟ್‌ ವಾಚ್‌ ಪ್ರಕರಣದ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದೇನೆ ಎಂದು ಅನುಪಮಾ ತಿಳಿಸಿದರು.

ದುಬೈಯಲ್ಲಿ ಭೇಟಿ
ಆರ್‌.ವಿ. ದೇಶಪಾಂಡೆ ಕೂಡ ದುಬೈಗೆ ಹೋಗಿ ಬಿ.ಆರ್‌. ಶೆಟ್ಟಿ ಭೇಟಿಯಾಗಿದ್ದರು. ಇವರೆಲ್ಲರನ್ನು ಆರೋಪಿಗಳನ್ನಾಗಿ ಮಾಡಿ ಸಿಬಿಐ ತನಿಖೆ ಮಾಡಲು ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದೆ. ಇದಕ್ಕೆ ಪ್ರತಿಯಾಗಿ ‘ಇದು ಪರಿಶೀಲಿಸಬಹುದಾದ ಆಪಾದನೆ’ ಎಂಬ ಉತ್ತರ ಬಂದಿದೆ. ಅನಂತರ ಮತ್ತೂಮ್ಮೆ ದಾಖಲೆಗಳ ಸಮೇತ ಪತ್ರ ನೀಡಿ ನೆನಪೋಲೆ ಕೂಡ ಕಳುಹಿಸಿದ್ದೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದೇನೆ ಎಂದರು. 

Advertisement

ಬಿಎಸ್‌ವೈಯಿಂದಲೂ ಲಾಭ 
ಸಿಎಂ ಆಗಿದ್ದಾಗ ಯಡಿಯೂರಪ್ಪ ಅವರು ಶ್ರೀರಾಮಪುರ ಹಳ್ಳಿಯಲ್ಲಿ 11.25 ಎಕ್ರೆ ಸ್ಥಳವನ್ನು ಡಾ| ಬಿ.ಆರ್‌. ಶೆಟ್ಟಿಯವರಿಗೆ ಡಿನೋಟಿಫೈ ಮಾಡಿದ್ದರು. ಅದರಲ್ಲಿ 2.20 ಎಕ್ರೆ ಜಾಗವನ್ನು ಡಾ| ಬಿ.ಆರ್‌. ಶೆಟ್ಟಿ ಅವರು ಯಡಿಯೂರಪ್ಪ ಕುಟುಂಬದವರ ಸಂಸ್ಥೆಯಲ್ಲಿ ಪಾಲುದಾರರಾಗಿರುವ ಇನ್ನೊಂದು ಸಂಸ್ಥೆಯ ಮಾಲಕರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. 2011ರ ಈ ಪ್ರಕರಣದ ಬಗ್ಗೆ ರಾಜ್ಯ ಕಾನೂನು ಇಲಾಖೆಯೇ ಕಳೆದ ವರ್ಷ ಸುಪ್ರೀಂ ಕೋರ್ಟ್‌ಗೆ ಅಪೀಲು ಮಾಡಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next