ಉಡುಪಿ: “ಇಂದು ಅನಿರೀಕ್ಷಿತವಾಗಿ ಬಂದಿದ್ದೇನೆ. ಇನ್ನೊಂದು ಬಾರಿ ಸಮಯ ಮಾಡಿಕೊಂಡು ಸನ್ನಿಧಿಯಲ್ಲಿ ಕೆಲವು ಹೊತ್ತು ಇರುವಂತೆ ಬರುತ್ತೇನೆ’ – ಇದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರ ಮಾತು.
ಶ್ರೀಕೃಷ್ಣಮಠಕ್ಕೆ ಶುಕ್ರವಾರ ಭೇಟಿ ನೀಡಿ ದೇವರ ದರ್ಶನ ಮಾಡಿದ ಬಳಿಕ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಿಂದ ಪ್ರಸಾದ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಇನ್ನೊಮ್ಮೆ ಬರಲು ಒಂದೆರಡು ದಿನಗಳಲ್ಲಿ ಸಮಯವನ್ನು ತಿಳಿಸುತ್ತೇನೆ. ದೇವರ ಆಶೀರ್ವಾದದಿಂದ ರಾಜ್ಯದಲ್ಲಿ ಸುಭಿಕ್ಷೆ ನೆಲೆಗೊಳ್ಳಬೇಕು ಎಂದರು.
ಶ್ರಾವಣ ಮಾಸದ ಕೊನೆಯ ಶುಕ್ರವಾರದ ನಿಮಿತ್ತ ದೇವರಿಗೆ ದೇವಿ ಅಲಂಕಾರ ಮಾಡಲಾಗಿದೆ. ಶ್ರಾವಣ ಮಾಸದ ಶುಕ್ರವಾರದಂದು ಲಕ್ಷ್ಮೀಶೋಬಾನೆ ಪಾರಾಯಣ ಮಹಿಳೆಯರಿಂದ ನಡೆಯುತ್ತಿದೆ. ಶುಭದಿನದಂದು ಕ್ಷೇತ್ರಕ್ಕೆ ಆಗಮಿಸಿದ್ದೀರಿ. ಶ್ರೀಕೃಷ್ಣಮುಖ್ಯಪ್ರಾಣ ದೇವರು ರಾಜ್ಯಕ್ಕೆ ಒಳಿತು ಮಾಡಲಿ ಎಂದು ಶ್ರೀಪಲಿಮಾರು ಮಠಾಧೀಶರು ಹರಸಿದರು.
ಜಿಲ್ಲಾ ಉಸ್ತುವಾರಿ ಸಚಿವೆ ಡಾ|ಜಯಮಾಲಾ, ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಜೆಡಿಎಎಸ್ ಮುಂದಾಳು ವಾಸುದೇವ ರಾವ್, ಎಸ್‌ಪಿ ಲಕ್ಷ್ಮಣ ನಿಂಬರಗಿ ಮತ್ತಿತರರಿದ್ದರು.
ಈ ಕುರಿತು ಪತ್ರಕರ್ತರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದಾಗ ನಮ್ಮ ಕುಟುಂಬ ದೇವರ ಮೇಲೆ ಭಕ್ತಿ ಹೊಂದಿದೆ. ಆದ ಕಾರಣ ಮೊದಲು ಶ್ರೀಕೃಷ್ಣಮಠಕ್ಕೆ ಹೋಗಿ ದೇವರ ದರ್ಶನ ಮಾಡಿ ರಾಜ್ಯಕ್ಕೆ ಸುಭಿಕ್ಷೆ ನೀಡಬೇಕೆಂದು ಪ್ರಾರ್ಥಿಸಿದ್ದೇನೆ ಎಂದರು.