ಬೆಂಗಳೂರು : ಬಿಜೆಪಿ ಲೋಕಸಭಾ ಚುನಾವಣಾ ಉಸ್ತುವಾರಿ ಆರ್. ಅಶೋಕ್ ನೇತೃತ್ವದ ನಿಯೋಗ ಸೋಮವಾರ ಸದಾಶಿವ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಚುನಾವಣಾ ಪ್ರಚಾರಕ್ಕೆ ಬರುವಂತೆ ಮನವಿ ಸಲ್ಲಿಸಿದರು.
ತಮ್ಮ ನಿವಾಸದಲ್ಲಿ ಬಿಜೆಪಿ ನಿಯೋಗದ ಸದಸ್ಯರೊಂದಿಗೆ ಕೆಲಕಾಲ ಚರ್ಚೆ ನಡೆಸಿ, ಪ್ರಚಾರಕ್ಕೆ ಬರುವ ಸಂಬಂಧ ನಿರ್ಧಾರ ತೆಗೆದುಕೊಂಡಿರುವ ಬಗ್ಗೆ ವಿವರ ನೀಡಿದರು.
ನಂತರ ಮಾತನಾಡಿದ ಎಸ್.ಎಂ.ಕೃಷ್ಣ ಅವರು, ನರೇಂದ್ರ ಮೋದಿಯವರು ಮತ್ತೂಮ್ಮೆ ಈ ದೇಶದ ಪ್ರಧಾನಿಯಾಗಬೇಕು ಎಂದು ಬಯಸುತ್ತೇನೆ. ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಹೀಗಾಗಿ ರಾಜ್ಯಾದ್ಯಂತ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳಲು ಬಯಸಿದ್ದೇನೆ ಎಂದರು.
ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಪ್ರಬಲವಾದ ನೆಲೆ ಇದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸೇರಿದಂತೆ ಯಾರೇ ಸ್ಪರ್ಧಿಸಿದರೂ ಇಲ್ಲಿ ವ್ಯಕ್ತಿ ಮುಖ್ಯವಾಗುವುದಿಲ್ಲ. ಸಿದ್ಧಾಂತದ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ. ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕುಟುಂಬ ರಾಜಕಾರಣ ಮಾಡಬಹುದು :
25 ವರ್ಷ ವಯಸ್ಸಾಗಿರುವವರು ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಸ್ಪರ್ಧೆ ಮಾಡೋದಕ್ಕೆ ಯಾವುದೇ ವಿರೋಧವಿಲ್ಲ. ಸ್ಪರ್ಧಿಸಿದಾಗ ಜನ ಅಭ್ಯರ್ಥಿಗಳನ್ನು ತುಲನೆ ಮಾಡುತ್ತಾರೆ ಮತ್ತು ಅವರಿಗೆ ಬೇಕಾದವರನ್ನು ಅವರೇ ನಿರ್ಧರಿಸುತ್ತಾರೆ. ಜತೆಗೆ ಕುಟುಂಬ ರಾಜಕಾರಣ ಮಾಡಬಾರದು ಎಂದು ರಾಜ್ಯಾಂಗದಲ್ಲಿ ನಿರ್ಬಂಧ ಏನೂ ಇಲ್ಲ. ದೇವೇಗೌಡರ ಕುಟುಂಬದವರು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದರು.