ಮುಂಬೈ: ಹಲವು ವರ್ಷಗಳ ಕಾಲ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ ರವಿ ಶಾಸ್ತ್ರಿ ಅವರು ಇತ್ತೀಚೆಗೆ ಹುದ್ದಯಿಂದ ನಿರ್ಗಮಿಸಿದ್ದಾರೆ. ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಮುಖ್ಯ ಕೋಚ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವ ರವಿ ಶಾಸ್ತ್ರಿ ಅವರು ತನ್ನ ಕಾರ್ಯಾವಧಿಯ ಕೆಲವು ವಿಚಾರಗಳನ್ನು ಬಹಿರಂಗ ಪಡಿಸುತ್ತಿದ್ದಾರೆ.
2019ರ ಏಕದಿನ ವಿಶ್ವಕಪ್ ಕೂಟದ ಕುರಿತಾಗಿ ರವಿ ಶಾಸ್ತ್ರಿ ಮಾತನಾಡಿದ್ದಾರೆ. ಭಾರತದ 2019 ರ ಏಕದಿನ ವಿಶ್ವಕಪ್ ತಂಡದಲ್ಲಿ ಮೂವರು ವಿಕೆಟ್ ಕೀಪರ್‌ಗಳನ್ನು ಆಯ್ಕೆ ಮಾಡಿದ್ದು ಸರಿಯಲ್ಲ. ಅದರ ಬದಲಿಗೆ ಅಂಬಾಟಿ ರಾಯುಡು ಅಥವಾ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಬಹುದಿತ್ತು ಎಂದು ಹೇಳಿದ್ದಾರೆ.
2019 ರ ವಿಶ್ವಕಪ್‌ಗೆ ಕೆಲವು ತಿಂಗಳುಗಳ ಮೊದಲು, ನಾಯಕ ವಿರಾಟ್ ಕೊಹ್ಲಿಯವರು ವಿಶ್ವಕಪ್ ನಲ್ಲಿ ತಂಡದ ನಾಲ್ಕನೇ ಕ್ರಮಾಂಕದಲ್ಲಿ ರಾಯುಡು ಆಡುತ್ತಾರೆ ಎಂದು ಹೇಳಿದ್ದರು. ಆದಾಗ್ಯೂ, ಎಂಎಸ್‌ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯು ತಂಡವನ್ನು ಆಯ್ಕೆ ಮಾಡಿದಾಗ, ರಾಯುಡು ಅವರನ್ನು ಕೈ ಬಿಟ್ಟಿತ್ತು.
ಇದನ್ನೂ ಓದಿ:400 ಟೆಸ್ಟ್ ವಿಕೆಟ್ ಕಿತ್ತು ದಾಖಲೆ ಬರೆದ ನಥನ್ ಲಿಯಾನ್
ಇದೀಗ, ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಶಾಸ್ತ್ರಿ ಅವರು ಮೂವರು ವಿಕೆಟ್ ಕೀಪರ್ ಗಳ (ಎಂ.ಎಸ್.ಧೋನಿ, ರಿಷಭ್ ಪಂತ್, ದಿನೇಶ್ ಕಾರ್ತಿಕ್) ಬದಲಿಗೆ ರಾಯುಡು ಅಥವಾ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಬೇಕಿತ್ತು ಎಂದು ಬಹಿರಂಗಪಡಿಸಿದ್ದಾರೆ.
” ತಂಡದ ಆಯ್ಕೆಯಲ್ಲಿ ನನಗೆ ಯಾವುದೇ ಪಾತ್ರ ಇರಲಿಲ್ಲ. ಆದರೆ ವಿಶ್ವಕಪ್‌ಗೆ ಮೂವರು ವಿಕೆಟ್ ಕೀಪರ್‌ಗಳನ್ನು ಆಯ್ಕೆ ಮಾಡಿರುವುದು ನನಗೆ ಸರಿ ಎನಿಸಿರಲಿಲ್ಲ. ಅಂಬಾಟಿ ರಾಯುಡು ಅಥವಾ ಶ್ರೇಯಸ್ ಇಬ್ಬರೂ ಬರಬಹುದಿತ್ತು. ಎಂಎಸ್ ಧೋನಿ, ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಮೂವರನ್ನು ಆಯ್ಕೆ ಮಾಡಿದ ಹಿಂದೆ ಯಾವುದೇ ಲಾಜಿಕ್ ಇರಲಿಲ್ಲ” ಎಂದು ಶಾಸ್ತ್ರಿ ಅಸಮಾಧಾನ ಹೊರಹಾಕಿದ್ದಾರೆ.