ಬೆಂಗಳೂರು: ದೇಶದ ಪ್ರತಿಷ್ಠಿತ ಇಸ್ರೋದ ಹಿರಿಯ ವಿಜ್ಞಾನಿಯೊಬ್ಬರು 2017ರಲ್ಲಿ ತನಗೆ ವಿಷವುಣಿಸಿ ಹತ್ಯೆಗೆ ಯತ್ನಿಸಲಾಗಿತ್ತು ಎಂಬ ಸ್ಫೋಟಕ ಹೇಳಿಕೆಯನ್ನು ನೀಡಿದ್ದು, ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿರುವುದಾಗಿ ವರದಿ ತಿಳಿಸಿದೆ.
ವಿಜ್ಞಾನಿ ತಪನ್ ಮಿಶ್ರಾ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ, 2017ರ ಮೇ 23ರಂದು ಇಸ್ರೋ ಕೇಂದ್ರ ಕಚೇರಿಯಲ್ಲಿ ನಡೆದ ಪ್ರಮೋಷನ್ ಸಂದರ್ಶನ ಸಂದರ್ಭದಲ್ಲಿ ತನಗೆ ಮಾರಣಾಂತಿಕ ಅರ್ಸೆನಿಕ್ ಟ್ರೈಯೋಕ್ಸೈಡ್ ನೀಡಿ ಹತ್ಯೆಗೆ ಯತ್ನಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ವಿಷವನ್ನು ಬಹುಶಃ ಊಟದ ನಂತರ ಸ್ನ್ಯಾಕ್ಸ್ ವೇಳೆ ದೋಸೆ ಜತೆ ನೀಡುವ ಚಟ್ನಿಗೆ ಬೆರೆಸಿರಬಹುದು ಎಂದು ದೂರಿದ್ದಾರೆ. ಮಿಶ್ರಾ ಅವರು ಇಸ್ರೋದ ಹಿರಿಯ ಸಲಹೆಗಾರರಗಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಮೊದಲು ಅವರು ಅಹಮದಾಬಾದ್ ಮೂಲದ ಇಸ್ರೋ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಪ್ಲಿಕೇಶನ್ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
“ಲಾಂಗ್ ಕೆಪ್ಟ್ ಸೀಕ್ರೆಟ್” ತಲೆಬರಹದಡಿ ಫೇಸ್ ಬುಕ್ ಪುಟದಲ್ಲಿ ಮಿಶ್ರಾ ಅವರು ಈ ರಹಸ್ಯವನ್ನು ಬಯಲುಗೊಳಿಸಿದ್ದಾರೆ. 2017ರ ಜುಲೈನಲ್ಲಿ ಗೃಹಸಚಿವಾಲಯದ ಭದ್ರತಾ ಸಿಬ್ಬಂದಿಗಳು ತನ್ನನ್ನು ಭೇಟಿಯಾಗಿದ್ದ ವೇಳೆ ಈ ವಿಷಯದ ಬಗ್ಗೆ ತಿಳಿಸಿರುವುದಾಗಿ ಮಿಶ್ರಾ ಹೇಳಿದ್ದಾರೆ.
ಆ ನಂತರ ತಾನು ವೈದ್ಯರನ್ನು ಸಂಪರ್ಕಿಸಿ ವಿಷದ ಅಂಶ ಹೊರ ಹಾಕುವ ಪರಿಹಾರದ ಬಗ್ಗೆ ಸಲಹೆಯೊಂದಿಗೆ ಚಿಕಿತ್ಸೆ ಪಡೆದುಕೊಂಡಿರುವುದಾಗಿ ಮಿಶ್ರಾ ಮಾಹಿತಿ ನೀಡಿದ್ದಾರೆ. ಆಹಾರದಲ್ಲಿ ವಿಷ ಬೆರೆಸಿ ನೀಡಿದ್ದರಿಂದ ಉಸಿರಾಟದ ಸಮಸ್ಯೆ, ಚರ್ಮ ಕಿತ್ತುಹೋಗುವುದು ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು ಎಂದು ತಿಳಿಸಿದ್ದಾರೆ.
ಇದೊಂದು ತನ್ನ ಮೇಲೆ ನಡೆದ ಬೇಹುಗಾರಿಕಾ ದಾಳಿಯಾಗಿರಬಹುದು ಎಂದು ಮಿಶ್ರಾ ಶಂಕಿಸಿದ್ದು, ಈ ಬಗ್ಗೆ ಸರ್ಕಾರ ತನಿಖೆ ನಡೆಸಲಿ ಎಂದು ಹೇಳಿದ್ದು, ಮಿಶ್ರಾ ಆರೋಪದ ಬಗ್ಗೆ ಇಸ್ರೋ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಹೇಳಿದೆ.