Advertisement

ನನ್ನನ್ನು ಅಪಹರಿಸಿ ಬಲವಂತವಾಗಿ ನಾಮಪತ್ರ ಹಿಂತೆಗೆಸಿಕೊಳ್ಳಲಾಗಿದೆ: ಅಲ್ತಾಫ್

05:00 PM Apr 24, 2023 | Team Udayavani |

ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿದ್ದ ನನ್ನನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ತಂಡವೊಂದು ಅಪಹರಿಸಿ ಕರೆದೊಯ್ದು ಬಲವಂತವಾಗಿ ನಾಮಪತ್ರ ಹಿಂತೆಗೆಯುವಂತೆ ಮಾಡಿದ್ದಾರೆ ಎಂದು ಮಂಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಲ್ತಾಫ್ ಕುಂಪಲ ಆರೋಪಿಸಿದ್ದಾರೆ.

Advertisement

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಎಲ್ಲೂ ಓಡಿಹೋಗಿಲ್ಲ, ನನ್ನನ್ನು ಅಪಹರಿಸಿ ಬೆದರಿಸಿ ನನ್ನಿಂದ ನಾಮಪತ್ರ ಹಿಂದೆ ಪಡೆಯುವಂತೆ ಮಾಡಲಾಗಿದೆ. ನನಗೆ ಯಾವುದೇ ರೀತಿಯಲ್ಲಿ ಆಮಿಷ ಒಡ್ಡಲಾಗಿಲ್ಲ. ಈ ಕುರಿತು ಪೊಲೀಸ್ ಕಮಿಷನರ್ ಅವರಿಗೆ ಭದ್ರತೆ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ವಕ್ತಾರ‌ ಎಂ.ಬಿ. ಸದಾಶಿವ, ಪಕ್ಷದ ಪ್ರಮುಖರಾದ ನಜೀರ್ ಉಳ್ಳಾಲ್, ವಸಂತ ಪೂಜಾರಿ, ಅಶ್ರಫ್ ಸಾಜೀದ್, ಅಶ್ರಫ್ ಖಾಯಿ, ಯುವ ಜನತಾದಳದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಇದ್ದರು.

ಮಂಗಳೂರು(ಉಳ್ಳಾಲ)ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಎಸ್‌ಎಸ್‌ಎಫ್‌ ಮುಖಂಡ ಅಲ್ತಾಫ್‌ ಕುಂಪಲ ಪಕ್ಷದ ನಾಯಕರಿಗೆ ಮಾಹಿತಿ ನೀಡದೆ ನಾಮಪತ್ರ ಹಿಂಪಡೆದಿದ್ದರು.

ಜೆಡಿಎಸ್ ನಾಯಕರ ಪ್ರಕಾರ, ಅಲ್ತಾಫ್‌ ಅವರು ತಮ್ಮ ಮೊಬೈಲ್ ಫೋನನ್ನು ಸಹ ಸ್ವಿಚ್ ಆಫ್ ಮಾಡಿದ್ದರು, ಅವರ ನಿರ್ಧಾರ ಪಕ್ಷದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷದ ಬಿ ಫಾರಂ ಪಡೆಯಲು ಶಾಸಕ ಬಿ ಎಂ ಫಾರೂಕ್ ಅವರಿಗೆ ಅಲ್ತಾಫ್ ಮನವರಿಕೆ ಮಾಡಿದ್ದರು. ಆದರೆ, ನಾಮಪತ್ರ ಸಲ್ಲಿಸಿದ ಬಳಿಕ ಪಕ್ಷದ ಮುಖಂಡರ ಜತೆ ಪ್ರಚಾರದಲ್ಲಿ ಪಾಲ್ಗೊಂಡಿರಲಿಲ್ಲ.

Advertisement

ಎಪ್ರಿಲ್ 22 ರಂದು ಅವರು ನಾಮಪತ್ರ ಹಿಂತೆಗೆದುಕೊಳ್ಳುವ ಸೂಚನೆಯನ್ನು ಪೋಸ್ಟ್ ಮಾಡಲಾಗಿದ್ದು, ಸ್ಥಳೀಯರು ಈ ವಿಷಯದ ಬಗ್ಗೆ ಜೆಡಿಎಸ್ ಮುಖಂಡರಿಗೆ ತಿಳಿಸಿದ್ದಾರೆ. ಕುಂಪಲ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಅವರ ಫೋನ್ ಎರಡು ದಿನಗಳ ಕಾಲ ಸ್ವಿಚ್ ಆಫ್ ಆಗಿದೆ.ಈ ಹಿಂದೆ ಎಸ್‌ಎಸ್‌ಎಫ್‌ನಲ್ಲಿ ಸಕ್ರಿಯರಾಗಿದ್ದ ಕುಂಪಲ ಅವರು ಜೆಡಿಎಸ್‌ಗೆ ಸೇರಿ ಕಣದಿಂದ ಹಿಂದೆ ಸರಿದಿರುವುದು ಹಲವರನ್ನು ಅಚ್ಚರಿಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next