Advertisement

ನನ್ನ ನೆರಳಿಲ್ಲದ ಕೃತಿಯೊಂದು ಬರೆವ ಆಸೆಯಾಯ್ತು

11:48 PM Feb 05, 2020 | Lakshmi GovindaRaj |

* ಇತಿಹಾಸಕ್ಕೆ ಮುಖಾಮುಖೀಯಾಗುತ್ತಾ, ತೇಜೋ ತುಂಗಭದ್ರಾ ಬರೆಯಲು ಪ್ರೇರಣೆಯೇನು?
ಮೋಹನಸ್ವಾಮಿ ಬರೆದ ನಂತರ ನನ್ನ ನೆರಳಿಲ್ಲದ ಕೃತಿಯೊಂದು ಬರೆಯುವ ಆಸೆಯಾಯ್ತು. ಅದಕ್ಕಾಗಿಯೇ 500 ವರ್ಷದ ಹಿಂದಿನ ಇತಿಹಾಸದ ಚೌಕಟ್ಟಿನಲ್ಲಿ ಕತೆ ಕಟ್ಟಲು ಯೋಚಿಸಿದೆ. ಹೇಗೂ ಹಂಪಿ ನನ್ನೂರು. ಆ ಪ್ರೀತಿಯಂತೂ ಧಾರಾಳವಾಗಿ ಕೈ ಹಿಡಿದು ನಡೆಸಿತು.

Advertisement

* ಪ್ರತಿಯೊಂದು ಕೃತಿ ಬರೆದು ಮುಗಿಸಿದ ನಂತರ, ಯಾವುದೋ ಒಂದು ಪಾತ್ರವನ್ನು ಇನ್ನೂ ಚೆನ್ನಾಗಿ ಚಿತ್ರಿಸಬೇಕಿತ್ತು ಎಂಬ ಅತೃಪ್ತ ಭಾವ ಕೃತಿಕಾರನನ್ನು ಕಾಡುವುದುಂಟು. ತೇಜೋ ತುಂಗಭದ್ರಾ ಬರೆದ ನಂತರ ನಿಮಗೂ ಹಾಗೆ ಅನಿಸಿದೆಯಾ?
ಅದು ಕತೆ- ಕಾದಂಬರಿ ಬರೆದ ನಂತರ ಮೂಡುವ ಭಾವ. ಲೈಫ್ಬಾಯ್‌ ಸೋಪಿನ ಜಾಹೀರಾತಿನಲ್ಲಿ ಸೋಪು ಬಳಸಿದ ನಂತರವೂ ಕೀಟಾಣುವೊಂದು ಉಳಿದದ್ದು ತೋರಿಸುತ್ತಾರಲ್ಲಾ, ಆ ತರಹದ್ದು. ಆ ಭಾವ ಲೇಖಕನ ವಿನಯದ ಭಾವ.

* ಐತಿಹಾಸಿಕ ಸಂದರ್ಭದ ಕಾದಂಬರಿ ರಚನೆಗೆ ತೊಡಗಿದಾಗ ನಿಮಗಿದ್ದ ಸವಾಲುಗಳು ಮತ್ತು ಮಿತಿಗಳು ಏನೇನು?
ಕನ್ನಡದಲ್ಲಿ ಇತಿಹಾಸದ ಒಳ್ಳೆಯ ಪುಸ್ತಕಗಳು ಸಿಗುವುದಿಲ್ಲ. ಬಹುತೇಕ ಎಲ್ಲವಕ್ಕೂ ಪೂರ್ವಗ್ರಹವಿರುತ್ತದೆ. ಆದರೆ, ಇಂಗ್ಲಿಷಿನಲ್ಲಿ ಯಥೇತ್ಛವಾಗಿ ಸಿಗುತ್ತವೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಯಾದ ನನ್ನ ಇಂಗ್ಲಿಷ್‌ ಓದಿನ ವೇಗ ಆಮೆಯ ನಡಿಗೆ. ಈಗ ನನ್ನ ಇಂಗ್ಲಿಷ್‌ ಓದು ಸುಧಾರಿಸಿದೆ!

* ಕಲಬುರಗಿ ಎಂದರೆ, ನಿಮ್ಮೆದುರು ಮೂಡುವ ಚಿತ್ರಗಳೇನು?
1347ರಲ್ಲಿ ಹಸನ್‌ ಗಂಗೂ ಬಹಮನಿಯು, ಈ ದೇಶದಲ್ಲಿ ಸಾಮ್ರಾಜ್ಯ ಕಟ್ಟಲು ಕಲಬುರಗಿ ಅತ್ಯುತ್ತಮ ರಾಜಧಾನಿ ಎಂದು ನಿರ್ಧರಿಸಿದ ಕ್ಷಣ.

* ಸಮ್ಮೇಳನ ಎಂದಾಕ್ಷಣ ಲಕ್ಷಾಂತರ ಕನ್ನಡಿಗರು ಅಲ್ಲಿ ನೆರೆಯುತ್ತಾರೆ. ಈ ಪ್ರೀತಿ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ವಿಚಾರದಲ್ಲಿ ಇರುವುದಿಲ್ಲ. ಈ ವೈರುಧ್ಯವನ್ನು ಸರಿ ಮಾಡುವುದು ಹೇಗೆ?
ಇದು ನಮ್ಮ ಕಾಲದ ವೈರುಧ್ಯ! ಸರಕಾರಿ ಶಾಲೆಗಳ ಪತನದ ಸೂಚಕ. ಖಾಸಗಿ ಶಾಲೆಗಳು ಕಳೆಯಂತೆ ಬೆಳೆಸಿದ ರಾಜಕೀಯ ನಾಯಕರ ಭ್ರಷ್ಟತೆಯ ದ್ಯೋತಕ. ನಾವು ಕನ್ನಡ ಭಾಷೆಯೊಂದನ್ನಾದರೂ ಸೊಗಸಾಗಿ ಎಲ್ಲಾ ಮಾಧ್ಯಮದ ಶಾಲೆಗಳಲ್ಲೂ ಕಲಿಸುವ ನಿರ್ಧಾರ ಮಾಡಬೇಕಾಗಿದೆ.

Advertisement

* ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next