Advertisement
ಕನ್ನಡವೇ ನಮ್ಮಮ್ಮ
Related Articles
Advertisement
ಬದಲಾದ ಸನ್ನಿವೇಶದಲ್ಲಿ ಒಬ್ಬನೇ ಸಿನಿಮಾಗೆ ಬಂದ ರಾಜೀವ. ರಾಷ್ಟ್ರಗೀತೆ ಬಂತು, ಎದ್ದು ನಿಂತ. ಅದೇ ಸಮಯಕ್ಕೆ ಕಾಲ… ಬಂತು. ಅವನಿಗೆ ಗೊತ್ತು; ಅದು ಅವಳ ಕಾಲ…, ಮತ್ತೆ ಮತ್ತೆ ಕಾಲ್”ಜಯ ಜಯ ಜಯ ಜಯಹೇ…’ ರಾಷ್ಟ್ರಗೀತೆ ಮುಗಿಯಿತು. ಈಗ ರಾಜೀವ ಕಾಲ್ ಮಾಡುತ್ತಿದ್ದ, ರಂಜನಿ ಕಾಲ್ ಕಟ್ ಮಾಡುತ್ತಿದ್ದಳು.
ಸಿಗ್ನಲ್ ಹುಡುಗಿ
ನವರಂಗ್ ಸಿಗ್ನಲ್ ಬಳಿ ರಾಜಕಾರಣಿಯ ಕಾರು ನಿಂತುಕೊಂಡಿತು. ಕೆಂಪು ದೀಪ ಹೊತ್ತಿದೊಡನೆ ಆ ಹುಡುಗಿ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಕಾರಿನ ಕಿಟಕಿ ಪಕ್ಕ ನಿಂತು “ತಗೊಳ್ಳಿ ಸರ್, ಪ್ಲೀಸ್’ ಎಂದಳು. “ದಿನವೂ ಇದೇ ರಸ್ತೆಯಲ್ಲಿ ಓಡಾಡ್ತೀನಿ. ಮೊನ್ನೆ ಗೊಂಬೆಗಳನ್ನು ಮಾರ್ತಿದ್ದೆ, ಇವತ್ತು ನೋಡುದ್ರೆ ಈ ಫ್ಲ್ಯಾಗ್, ನೀನು ಮಾರದೇ ಇರೋದ್ ಏನಿದೆ ಪುಟ್ಟಿ’ ಎಂದ ರಾಜಕಾರಣಿ.
“ನನ್ನ ದೇಶ’ ಎಂದು ಉತ್ತರಿಸಿದ ಆಕೆ, ಫ್ಲ್ಯಾಗ್ ಬೀಸುತ್ತ ಹೋಗಿಬಿಟ್ಟಳು. ಆಗಲೇ ಗ್ರೀನ್ ಸಿಗ್ನಲ್ ಕಾಣಿಸಿಕೊಂಡಿತು. ಎಸಿ ಕಾರಿನಲ್ಲಿ ಕೂತಿದ್ದ ರಾಜಕಾರಣಿ ಬೆವರುತ್ತಿದ್ದ.
ಅಪ್ಪ ಮತ್ತೆ ಕಾಣಿಸಿಕೊಳ್ಳಲಿಲ್ಲ…
ಲಾಲ್‌ಬಾಗಿನ ಮರೆಯಲ್ಲಿ ನೋಡಿದ್ದು ಚಕ್ಕಂದವನ್ನ. ಮುಖ ಮುಚ್ಚಿದ್ದ ದುಪ್ಪಟ್ಟ ಸರಿದರೆ ಮಗಳ ಮುಖ. ತನ್ನ ಬಗ್ಗೆ ವ್ಯಕ್ತಪಡಿಸಲಾಗದ ಹೇಸಿಗೆಯೊಂದು ಎದೆಗೆ ರಾಚಿತು. ಹಳೆಯ ಗೇಟು ಹಾರಿ ಬಿರುಸಾಗಿ ನಡೆಯುತ್ತಿದ್ದವನು ಕುಸಿದು ಬಿದ್ದು ಸತ್ತ. ಅಪ್ಪ ಮರೆಯಾದ ರಾತ್ರಿ ಮಾಲಕ್ಷ್ಮೀಗೆ ಮೊಬೈಲು ಸಿಕ್ಕಿತು. ಕೊನೆಯ ಕಾಲ್ ಮಾಲಕ್ಷ್ಮಿಗೆ ಹೋಗಿತ್ತು. ಗ್ಯಾಲರಿ ತೆಗೆದಳು. ಅವಳ ಮೈ ಬೆವರತೊಡಗಿತು, ಕೊನೆಯ ವಿಡಿಯೋ ನೋಡಿದಾಗ ಬೆಚ್ಚಿಬಿದ್ದು ಕಿರುಚಿ ಮೊಬೈಲ್ ಬಿಸಾಕಿದಳು. ಅವಳ ಮೈ ನಡುಗುತ್ತಿತ್ತು.
ಟೈಮಾಯಿತು…
ಡಾಕ್ಟರ್ ಪಕ್ಕಕ್ಕೆ ಕರೆದು ಪಿಸುದನಿಯಲ್ಲಿ “ನಿಮ್ಮ ತಾಯಿಗೆ ಕ್ಯಾನ್ಸರ್. ಹೆಚ್ಚೆಂದರೆ 3 ವಾರ ಬದುಕಬಹುದು’ ಎಂದರು. ನಿಂತಲ್ಲೇ ನೆಲ ನಡುಗಿದಂತಾಯ್ತು. ಸಾವು ಬೆನ್ನಹಿಂದೆ ಇದ್ದರೂ ಅಮ್ಮ ನಗುತ್ತ ನೋಡುತ್ತಿದ್ದಳು. “ಎರಡು ತಿಂಗಳಿಂದ ಹಾಲು, ಕೇಬಲ್‌ನವರಿಗೆ ದುಡ್ಡು ಕೊಟ್ಟಿಲ್ಲ’ ಎಂದಳು. ಅಮ್ಮನಿಗೆ “ಹೋಗಿ ಬರುತ್ತೇನೆ’ ಎಂದ್ಹೇಳಿ ಹೊರಟ. ಅಮ್ಮ ಕರೆದಂತಾಯ್ತು. ತಿರುಗಿದ. ಅಮ್ಮ ಬೆರಳು ಮಡಚುತ್ತಾ ಏನನ್ನೋ ಲೆಕ್ಕ ಹಾಕುತ್ತಿದ್ದಳು.
ಕುರುಡು ದಾರಿ
ಇಟ್ಟಿಗೆ ಗಾತ್ರದ ಕಲ್ಲೊಂದು ರೋಡಿನಲ್ಲಿತ್ತು. ಸೈಕಲ್ ಓಡಿಸುತ್ತಿದ್ದವನು ಗಕ್ಕನೆ ಬ್ರೇಕ್ ಹಾಕಿ, ಮತ್ತೆ ತುಳಿಯುತ್ತ ಹೊರಟ. ಬೈಕಿನವನು ಕಲ್ಲನ್ನು ಬಳಸಿಕೊಂಡು ಹೋದ. ಕಾರು, ಲಾರಿ, ಬಸ್ಸಿನವರು ಚಕ್ರಗಳ ಮಧ್ಯೆ ಹೇಗೋ ಸಂಬಾಳಿಸಿ ಬಚಾವಾಗಿ ಹೋದರು. ಪೋರನೊಬ್ಬ ಎಡವಿದ. ಪೋರನ ಅಮ್ಮ ಆ ಕಲ್ಲಿಗೂ, ಅದನ್ನು ಅಲ್ಲಿ ಹಾಕಿದವರಿಗೂ ಹಿಡಿ ಶಾಪ ಹಾಕಿದಳು. ಮುದುಕನೊಬ್ಬ ಅದನ್ನೆತ್ತಿ ಎಸೆಯಲು ಬಾಗಿದ, ಆಫೀಸಿನ ಅವಸರದಲ್ಲಿದ್ದ ಮಗಳು ಕೆಕ್ಕರಿಸಿ ನೋಡಿದಳು.
ಕಡೆಗೆ ಕುರುಡನೊಬ್ಬ ರಸ್ತೆ ದಾಟುವಾಗ ಅವನ ಕುರುಡುಗೋಲಿಗೆ ಕಲ್ಲು ಸಿಕ್ಕಿತು. ಆತ ಬಗ್ಗಿ ಎತ್ತಿಕೊಂಡು ಅದನ್ನು ರೋಡಿನ ಪಕ್ಕಕ್ಕೆ ಇಟ್ಟ.
ಹಪಾಹಪಿ
ಆ ಕವಿಗೆ ಬಹುಮಾನದ ಹುಚ್ಚು ಹತ್ತಿತು. ಬರೆದ, ಬರೆಯುತ್ತಲೇ ಹೋದ, ಎಲ್ಲ ಸ್ಪರ್ಧೆಗಳಿಗೂ ಬರೆದ. ಬರೆದು ಕಳಿಸಿದಷ್ಟೂ ಸೋತ. ಸೋತಷ್ಟೂ ಕುಸಿದ. ಕುಸಿದಷ್ಟೂ ಮೈಕೊಡವಿಕೊಂಡು ಎದ್ದು ನಿಂತು ಮತ್ತಷ್ಟು ಬರೆದು ಕಳಿಸಿದ! ಎಷ್ಟೋ ಸ್ಪರ್ಧೆಗಳಲ್ಲಿ ಕಡೆಯ ಹಂತದಲ್ಲಿ ಮುಗ್ಗರಿಸಿದ. ಬರಬರುತ್ತಾ ಖನ್ನತೆಗೆ ಜಾರಿ, ಬರೆಯುವುದನ್ನೇ ಬಿಟ್ಟ. ಬದುಕಿನಲ್ಲಿ ಆಸಕ್ತಿ ಕಳೆದುಕೊಂಡು ಕಡೆಗೊಮ್ಮೆ ಉಸಿರು ಬಿಟ್ಟ! ಮರುವರ್ಷ, ಅವನ ಸಮಗ್ರ ಕಾವ್ಯಕ್ಕೆ ಮರಣೋತ್ತರ ಪ್ರಶಸ್ತಿ ಒಲಿಯಿತು.
ಅಮ್ಮ ಇದ್ದಾಳೆ…
ಅಲಾರಾಂ ಬಡಿಯುವ ಮುನ್ನ ಎದ್ದಳು. ಕಸ ಗುಡಿಸಿದಳು, ನೆಲ ಸಾರಿಸಿದಳು, ಮಗುವಿಗೆ ಸ್ನಾನ ಮಾಡಿಸಿದಳು, ತಿಂಡಿ ಕಟ್ಟಿದಳು, ಸ್ಕೂಲ್ ಬಸ್ ಹತ್ತಿಸಿ ಟಾಟಾ ಮಾಡಿದಳು.
ಅಷ್ಟರಲ್ಲಿ ಗಂಡ ಎದ್ದಿದ್ದ, ಅವನಿಗೆ ತಿಂಡಿ ಕಟ್ಟಿದಳು, ಅವನು ಆಫೀಸಿಗೆ ಹೊರಟ… ತನ್ನನ್ನು ಕೇಳ್ಳೋರೇ ಇಲ್ಲ ಎಂಬ ನೋವು. ಜೊತೆಯಲ್ಲಿ ಗಂಡ-ಮಗುವಿದ್ದರೂ ಒಂಟಿತನ ಕಾಡಿತು. ಫೋನ್ ರಿಂಗಣಿ ಸಿತು. “ಹಲೋ’ ಅನ್ನುತ್ತಿದ್ದಂತೆಯೇ, ಆ ತುದಿಯಿಂದ- “ನಾಸ್ಟಾ ಆಯ್ತಾ ಪುಟ್ಟಿ?’ ಎಂಬ ದನಿ ಕೇಳಿಸಿತು..”ನನಗೆ ಅಮ್ಮ ಇದ್ದಾಳೆ…’ ಎಂದು ಖುಷಿಯಿಂದ ಎದ್ದಳು.
-ಜಯರಾಮಾಚಾರಿ,ಬೆಂಗಳೂರು
**********************************************************************************************************
ಕಥೆ ಚಿಕ್ಕದು, ಸಂದೇಶ ದೊಡ್ಡದು
ಲೆಕ್ಕ ತಪ್ಪಾಗಿದೆ!
“ಎಷ್ಟು ಸಲ ಹೇಳ್ಬೇಕು ನಿಂಗೆ? ಮತ್ತದೇ ತಪ್ಪನ್ನು ಮಾಡ್ತಾನೇ ಇರ್ತೀಯಾ. ಸರಿಯಾಗಿ ಕಲಿತು ಬಂದು ಬರೆಯೋಕ್ಕಾಗಲ್ವಾ?’ ಗಣಿತ ಶಿಕ್ಷಕರು ಸ್ಮಿತಾಳನ್ನು ಗದರಿದರು. ಕಣ್ಣಂಚಲ್ಲಿ ನೀರು ತುಳುಕಿಸುತ್ತಾ, “ಸಾರಿ ಸರ್. ಇನ್ಮುಂದೆ ಸರಿಯಾಗಿ ಕಲಿತು ಬತೇìನೆ…’ ಎನ್ನುತ್ತಾ ಸ್ಮಿತಾ ತನ್ನ ಟೆಸ್ಟ್ ನೋಟ್ಸನ್ನು ಪಡೆದು ಹೊರಟಳು.
ರಾತ್ರಿ ಮಲಗುವ ಮುನ್ನ ಮೊಬೈಲ್ ಓಪನ್ ಮಾಡಿದರೆ ಸ್ಮಿತಾಳ ಮೆಸೇಜ್ ಕಾಯುತ್ತಿತ್ತು: “ಅಮ್ಮನಿಗೆ ಕ್ಯಾನ್ಸರ್ ಉಲ್ಬಣಿಸಿದೆ. ಐಸಿಯುನಲ್ಲಿ ದಿನಗಳನ್ನು ಎಣಿಸುತ್ತಿ¨ªಾರೆ. ಅಪ್ಪನಿಗೆ ರಜೆಯೇ ಸಿಗುತ್ತಿಲ್ಲ. ರಾತ್ರಿಯೆಲ್ಲ ಆಸ್ಪತ್ರೆಯಲ್ಲಿದ್ದು ಹಗಲಿನಲ್ಲಿ ಶಾಲೆಗೆ ಬರುತ್ತಿರುವೆ. ಓದಲು ಸಮಯ ಸಿಗುತ್ತಿಲ್ಲ, ಮನಸ್ಸೂ ಬರುತ್ತಿಲ್ಲ. ಕ್ಷಮಿಸಿ ಸರ್…’- ಬದುಕಿನ ಲೆಕ್ಕವನ್ನು ಸರಿಪಡಿಸಲಾಗದೇ ಶಿಕ್ಷಕರು ಚಡಪಡಿಸಿದರು.
ಎರಡು ಮುಖ
ಟಿವಿಯಲ್ಲಿ ರಾಧಾಕೃಷ್ಣ ಧಾರಾವಾಹಿ ಬರುತ್ತಿತ್ತು. ವಠಾರದ ಜನ ಭಕ್ತಿಯಿಂದ ವೀಕ್ಷಿಸುತ್ತಿದ್ದರು. ರಾಧೆ ಬೃಂದಾವನದಲ್ಲಿ ಕುಳಿತು ಕಾಯುತ್ತಿದ್ದಳು. ತುಂಟ ಕೃಷ್ಣ ಅವಳನ್ನು ಇನ್ನಿಲ್ಲದಂತೆ ಕಾಡಿ ಮತ್ತೆ ಅವಳೆದುರು ಪ್ರತ್ಯಕ್ಷನಾದ. ನೋಡುತ್ತಿದ್ದವರ ಕಣ್ಣಾಲಿಗಳು ಅವರಿಗರಿವಿಲ್ಲದೇ ತುಂಬಿಕೊಂಡವು. ರಾಧೆ ಕೃಷ್ಣರ ಮಿಲನಕ್ಕೆ ಅವರೆಲ್ಲರೂ ಅದೆಷ್ಟು ಉತ್ಸುಕತೆಯಿಂದ ಕಾಯುತ್ತಿದ್ದರು!
ನಾಲ್ಕು ದಿನಗಳ ನಂತರ ಅದೇ ವಠಾರದ ಹೆಣ್ಣುಮಗಳೊಬ್ಬಳು ಕಾಣೆಯಾಗಿದ್ದಳು. ಕಟುಕನಂತಹ ಗಂಡನ ಕಾಟ ತಡೆಯಲಾರದೇ ಪ್ರಿಯಕರನೊಂದಿಗೆ ಓಡಿಹೋದಳು. ಜನರೆಲ್ಲರೂ ಅವಳಿಗೆ ಹಾದರದ ಪಟ್ಟ ಕಟ್ಟಿದರು.
ಕಾಳಜಿ
ದೂರದ ಹಳ್ಳಿಯಿಂದ ತನ್ನ ಮಗಳನ್ನು ಪೇಟೆಯ ಶಾಲೆಗೆ ಸೇರಿಸಲು ತಂದೆಯೊಬ್ಬರು ಬಂದಿಳಿದರು. ಅವರಿವರ ಸಹಾಯ ಪಡೆದು ಮಗಳನ್ನು ಹಾಸ್ಟೆಲ್ಲಿಗೆ ಸೇರಿಸಿದರು. ಮಗಳನ್ನು ಶಾಲೆಯಲ್ಲಿ ಬಿಟ್ಟು ಹೊರಡುವಾಗ ಅವರ ಜೀವ ತಲ್ಲಣಿಸಿತು. ಅಲ್ಲಿಯೇ ಇರುವ ಮಾಸ್ತರೊಬ್ಬರಿಗೆ ಕೈಮುಗಿದು- “ಮಗಳಿಗೆ ಪೇಟೆ ಹೊಸುª. ನಮ್ಮೊàರು ಅಂತ ಯಾರೂ ಇಲ್ಲ. ನೀವೇ ಅವಳಿಗೆ ತಾಯಿ, ತಂದೆ ಎಲ್ಲ. ಒಂಚೂರು ಕಾಳಜಿ ಮಾಡಿ ಗುರುಗಳೇ’ ಎಂದರು.
ಮರುದಿನದಿಂದ ಮೇಷ್ಟ್ರು ದಿನವೂ ಬೆಳಗ್ಗೆ ಬೇಗನೆ ಬಂದು ಅವಳನ್ನು ಸ್ಟಾಫ್ ರೂಮಿಗೆ ಕರೆಸಿ ಮೈಸವರಿ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು!
ಕನಸು
ಆ ಹುಡುಗನಿಗೆ ಎಲ್ಲವೂ ಇತ್ತು. ಓದಲೊಂದು ಪ್ರತ್ಯೇಕ ಕೋಣೆ, ಎ. ಸಿ. ಸೌಲಭ್ಯ, ಅತ್ಯುತ್ತಮ ಪ್ರೊಫೆಸರ್‌ಗಳು ನೀಡುವ ಆನ್‌ಲೈನ್ ಪಾಠ ವ್ಯವಸ್ಥೆ, ಪ್ರತಿಷ್ಠಿತ ಶಾಲೆ, ರುಚಿಕಟ್ಟಾದ ಊಟ- ತಿಂಡಿಯ ವ್ಯವಸ್ಥೆ, ಬೇಸರವಾದಾಗ ಆಡಲು ವೀಡಿಯೋ ಗೇಮ್, ವೀಕೆಂಡಲ್ಲಿ ಪಾಲಕರೊಂದಿಗೆ ಭೇಟಿ ಎಲ್ಲವೂ. ಶಾಲೆಯ ಶಿಕ್ಷಕರೊಮ್ಮೆ “ನನ್ನ ಕನಸು’ ಎಂಬ ವಿಷಯವನ್ನಿಟ್ಟುಕೊಂಡು ಚಿತ್ರ ರಚಿಸಲು ಹೇಳಿದರು. ಅವನು ಚಿತ್ರ ಬಿಡಿಸಿದ. ಪಂಜರ, ಅದರಲ್ಲೊಂದು ಹಕ್ಕಿ. ಆ ಹಕ್ಕಿಯ ನೋಟ, ದೂರದ ಆಗಸದಲ್ಲಿ ಗುಂಪು ಕಟ್ಟಿಕೊಂಡು ಹಾರುವ ಹಕ್ಕಿಗಳ ಗುಂಪಿನೆಡೆಗೆ ನೆಟ್ಟಿತ್ತು.
ಅಮ್ಮ
ಅವಳು ಆ ಮಗುವನ್ನು ಪ್ರೀತಿಯಿಂದ ಸಾಕಿದ್ದಳು. ಪೊದೆಯಲ್ಲೆಲ್ಲೋ ಅಳುತ್ತ ಮಲಗಿದ್ದ ಕೂಸು ಇದೀಗ ಶಾಲೆಯ ಮೆಟ್ಟಿಲೇರುವಷ್ಟು ದೊಡ್ಡದಾಗಿತ್ತು. ಇದ್ದಕ್ಕಿದ್ದಂತೆ ಒಂದಿನ ಬಂದಿಳಿದ ಪೊಲೀಸರು- “ಈ ಮಗು ನಿಮ್ಮದಲ್ಲ’ ಎಂದು ಶರಾ ಬರೆದರು. ಪ್ರಶ್ನೆಯಾಗಿ ನಿಂತವಳೆದುರು ಮಗುವಿನ ತಂದೆ ತಾಯಿ ಪತ್ತೆಯಾಗಿದ್ದಾರೆ ಎಂದು ಚಿತ್ರಗಳನ್ನು ತೋರಿಸಿದರು. ಮಗುವನ್ನು ಬಲವಂತವಾಗಿ ಎಳೆದುಕೊಂಡು ಹೋಗುವವರೆಗೂ ಅದು ಇವಳನ್ನೇ ಗಟ್ಟಿಯಾಗಿ ತಬ್ಬಿಕೊಂಡಿತ್ತು.
ಕೋರ್ಟು, ಕಟ್ಟಳೆ ವಿಚಾರಣೆಗಳು ಆರಂಭಗೊಂಡವು. ಮಾಡದ ತಪ್ಪಿಗೆ ಕಟಕಟೆಯಲ್ಲಿ ನಿಂತವಳನ್ನು ನ್ಯಾಯಾಧೀಶರು ಪ್ರಶ್ನಿಸಿದರು, “ನೀವು ಮಗುವಿಗೆ ಏನಾಗಬೇಕು?’ ಸಂಶಯವಿಲ್ಲದೇ ಅವಳು ಉತ್ತರಿಸಿದಳು: ಅಮ್ಮ… ನ್ಯಾಯಾಧೀಶರು ಪುರಾವೆಗಳನ್ನು ಹಾಜರುಪಡಿಸುವಂತೆ ಹೇಳಿದರು. ಬರಿಗೈಯ್ಯಲ್ಲಿ ನಿಂತ ಅವಳು ಹೇಳಿದಳು: “ಬೆಳೆದು ನಿಂತ ಮಗುವೇ ಇದಕ್ಕೆ ಸಾಕ್ಷಿ. ಅಮ್ಮನಾಗದೇ ಮಗುವನ್ನು ಬೆಳೆಸಲು ಸಾಧ್ಯವೆ?’
ಸುಧಾ ಆಡುಕಳ,ಉಡುಪಿ
**********************************************************************************************************
ಮಾತೃ ಹೃದಯ
ಪ್ರಿಯತಮ ಅಥವಾ ಗಂಡನನ್ನು ಆಯ್ದುಕೊಳ್ಳಲೇಬೇಕಾದ ಸಮಯ ಬಂದಾಗಿತ್ತು. ಸುನಿಗೆ ಯಾವುದಾದರೊಂದು ನಿರ್ಧಾರಕ್ಕೆ ಬರಲು ಸಾಧ್ಯವೇ ಆಗುತ್ತಿರಲಿಲ್ಲ. ಪುಟ್ಟ ಮಗುವಿನ ಭವಿಷ್ಯಕ್ಕೆ ಹೆದರಿ ಇಷ್ಟು ದಿನ ತಡೆದುಕೊಂಡಿದ್ದವಳು ಚೀಟಿ ಎತ್ತಿ ನಿಕ್ಕಿ ಮಾಡಲು ಬಯಸಿದಳು. ದೇವರ ಮುಂದೆ ಕುಳಿತು ಅವಳು ಚೀಟಿ ಹಾಕಿದಾಗ, ಅಂಬೆಗಾಲಿಟ್ಟು ಬಂದ ಕಂದ ಪಟ್ಟನೆ ಒಂದು ಚೀಟಿ ಹೆಕ್ಕಿ ಅವಳ ಮಡಿಲಿಗೆ ಹಾಕಿತ್ತು. ಅದರಲ್ಲಿ “ಪ್ರಿಯತಮ’ ಎಂದಿತ್ತು! ಮಾತೃತ್ವ ಚೀಟಿಯನ್ನು ಸುಟ್ಟು ಹಾಕಿ ಮಗುವನ್ನು ಮಡಿಲಿಗೆ ಸೇರಿಸಿತು.
ಪ್ರೇಮ ಜ್ಯೋತಿ
ಅವರಿಬ್ಬರೂ ಚಲಿಸುವ ರೈಲಿನ ಒಂದೇ ಬೋಗಿಯ ಬೇರೆ ಬೇರೆ ಬಾಗಿಲಿನಿಂದ ಕೆಳಕ್ಕೆ ಹಾರಿದ್ದರು. ಸಿಗದ ಪ್ರೇಮ, ಅವರಿಂದ ಈ ಕೃತ್ಯ ಮಾಡಿಸಿತ್ತು. ಇಲ್ಲಿಯೂ ವಿಧಿ ಅವರನ್ನು ವಂಚಿಸಿತ್ತು. ಕತ್ತಲಲ್ಲಿ ಹಾರಿದ ಇಬ್ಬರೂ ಹುಲ್ಲುಗಾವಲಿನ ಮೇಲೆ ಬಿದ್ದಿದ್ದರು. ಸಾಯುವ ಆಸೆ ಈಡೇರದ ದುಃಖದಲ್ಲಿ ಮೌನವಾಗಿ ಹಳಿಗುಂಟ ನಡೆಯತೊಡಗಿದರು.
ಹತ್ತು ನಿಮಿಷದ ನಂತರ ಒಬ್ಬರ ಕೈಯನ್ನೊಬ್ಬರು ಹಿಡಿದುಕೊಂಡರು. ಇದ್ದಕ್ಕಿದ್ದಂತೆ ಬೆಳಕೊಂದು ಹತ್ತಿಕೊಂಡು ಅವರನ್ನು ಮುನ್ನಡೆಸತೊಡಗಿತು. ಪ್ರೇಮ ಜ್ಯೋತಿ ಮತ್ತೆ ಅವರ ಕಣ್ಣಲ್ಲೂ ಪ್ರತಿಫಲಿಸುತ್ತಿತ್ತು. ಆಮೇಲೆ ಆ ಊರಿನಲ್ಲಿ ಕತ್ತಲಾಗಲೇ ಇಲ್ಲ.
ಸುಪಾರಿ
ವಿಕ್ರಮನ ಮೋಸದ ಅರಿವಾಗುತ್ತಿದ್ದ ಹಾಗೆ ಮೀರಾ ಸುಪಾರಿ ಕೊಟ್ಟು ಅವನನ್ನು ಕೊಲ್ಲಿಸಿದಳು. ಒಂದೇ ಒಂದು ಪುರಾವೆಯಿಲ್ಲದ ಕಾರಣ ಪಾರಾದಳು. ಇನ್ಸ್‌ಪೆಕ್ಟರ್ ಅಜಯ…, ವಿಕ್ರಮನ ಕೊಲೆ ಪ್ರಕರಣದ ಹಿಂದೆ ಬಿದ್ದು ಹಲವರನ್ನು ಭೇಟಿಯಾಗಿ ಆ ಪ್ರಕರಣದ ರಹಸ್ಯವನ್ನು ಪತ್ತೆ ಮಾಡಲು ಹೋಗುವ ವಿಷಯ ತಿಳಿದ ಮೀರಾ ಜಾಗೃತಳಾದಳು. ಮರುದಿನವೇ ಎರಡನೇ ಸುಪಾರಿ ನಿಶ್ಚಿತವಾಯಿತು. ಈಗ ಎರಡು ಭೂತಗಳು ತಮ್ಮ ಕಥೆ ಹೇಳಿಕೊಳ್ಳಲು ಕಾದಿವೆ.
ಮೌನರಾಗ
ಅರುಣನಿಗೆ ಅವಳು ಅದ್ಭುತ ಅನಿಸಿದಳು. ರೈಲಿನಲ್ಲಿ ಅವಳು ಪಕ್ಕದಲ್ಲಿಯೇ ಕುಳಿತಾಗ ಅವನ ಹೃದಯ ಚಿಟ್ಟೆಯಾಯಿತು. ತನ್ನ ಹಾಗೆಯೇ ಅವಳಿಗೂ ಮಾತು ಬಾರದ್ದು ತಿಳಿದಾಗ ಅವನಿಗೆ ತುಂಬ ಸಂತೋಷವಾ ಯಿತು. ಲೋಕವೆಲ್ಲ ಗದ್ದಲದಲ್ಲಿ ಮುಳುಗಿದ್ದರೆ ಅವನ ಕಣ್ಣುಗಳು ಪ್ರೇಮ ಕಾರಂಜಿ ಚೆಲ್ಲಿದವು. ಹೃದಯ ಮೌನರಾಗಕ್ಕೆ ನರ್ತಿಸಿತು. ಅವಳು ತನ್ನವಳೇ ಎಂದು ಬೀಗಿದ. ಅರ್ಧಗಂಟೆಯಲ್ಲಿ ಎರಡು ಮೂಕ ಮಕ್ಕಳು ಅಪ್ಪನ ಜೊತೆಗೆ ಬೇರೆ ಬೋಗಿಯಿಂದ ಬಂದು ಅಮ್ಮನನ್ನು ಸೇರಿದವು. ಅರುಣನ ವಿಚಾರಗಳು ಮಾತು ಮರೆತವು.
ವಿಪರ್ಯಾಸ
ಏನಾದರೂ ಅಸಾಮಾನ್ಯ ಘಟನೆ ಜರುಗಿ ತನ್ನ ಬದುಕನ್ನು ಶ್ರೀಮಂತಿಕೆಯತ್ತ ನಡೆಸಬೇಕೆಂದು ರಾಜು ಹಂಬಲಿಸುತ್ತಿದ್ದ. ಲಾಟರಿ, ಜೂಜು ಎಲ್ಲವುಗಳಿಂದ ಭ್ರಮನಿರಸನಗೊಂಡು ತೀವ್ರ ಬೇಸರದಲ್ಲಿ ಬೈಕು ಚಲಾಯಿಸುತ್ತಿದ್ದ. ಇದ್ದಕ್ಕಿದ್ದ ಹಾಗೆ ಕುಸಿದ ಪರ್ವತದ ಮಣ್ಣ ರಾಶಿಯಡಿ ಮುಚ್ಚಿಹೋದರೂ ಬಂಡೆಯೊಂದರಡಿ ಅಸಹಾಯಕನಾಗಿ ಸಿಕ್ಕಿಬಿದ್ದು ಇನ್ನೂ ನರಳುತ್ತಿದ್ದಾನೆ. ನಾಪತ್ತೆಯಾದವರಿಗೆ ಸರ್ಕಾರ ಲಕ್ಷ ಲಕ್ಷ ಘೋಷಣೆ ಮಾಡಿದ್ದು ಅವನಿಗೆ ಗೊತ್ತೇ ಆಗಲಿಲ್ಲ.
ಬಾರಿ ಬಾರಿಗೂ…
“ನಾನು ನಿನಗೆ ಮೋಸ ಮಾಡಿಬಿಟ್ಟೆ’ ಎಂದು ಚೀರಿ ಕಣ್ಣ ಆಣೆಕಟ್ಟಿನ ಬಾಗಿಲು ತೆರೆದ. ನೀತಾ ಅವನನ್ನು ಎದೆಗೊತ್ತಿಕೊಂಡು ಹೇಳಿದಳು: “ಪಶ್ಚಾತ್ತಾಪಕ್ಕಿಂತ ಮಿಗಿಲೇನಿದೆ? ನಾ ನಿನ್ನ ಇನ್ನಷ್ಟು ಪ್ರೀತಿಸುವೆ. ಒಮ್ಮೆ ತಪ್ಪಿನ ಅರಿವಾದ ಮೇಲಿನ್ನು ಮತ್ತೆ ಅತ್ತ ನೋಡದಿರು. ನೀನೆಂದೂ ನನ್ನವನು…’ ಅವಳ ಭುಜದ ಮೇಲೆ ತಲೆಯಿಟ್ಟು ನಕ್ಕವನು ತನ್ನೊಳಗೇ ಅಂದುಕೊಂಡ: ಇದೊಂದು ಟ್ರೇಲರ್.
ಜೋಡಿ
“ಬಾರೇ, ಪಾರ್ಕಿಗೆ ಹೋಗಿ ಬರೋಣ’ ಎಂದು ದೀಪಾ ಮಗಳನ್ನು ಕರೆದಳು. “ನಾ ಬರಲ್ಲ, ಅಲ್ಲಿ ಬರೀ ಕಪಲ್ಸ… ಬಂದಿರ್ತಾರೆ. ನಾನೇ ಒಬ್ಬಳು ಸಿಂಗಲ…. ನಂಗೆ ಬ್ಯಾಡ್ ಫೀಲಿಂಗ್ ಬರುತ್ತೆ’ ಎಂದಳು ಮಗಳು.
“ನೀನು ಹೋಪ್‌ಲೆಸ್ ರೋಮ್ಯಾಂಟಿಕ್ ಬಿಡು. ಅದ್ಯಾಕೆ ಹಾಗಾಗ್ಬೇಕು?’ ಎಂದು ಮಗಳಿಗೆ ಬೈದು ಅವಳು ಪಾರ್ಕಿಗೆ ಹೋಗಿ ಕುಳಿತಳು. ಕೈ ಕೈ ಹಿಡಿದು ಓಡಾಡುವ ಜೋಡಿಗಳು ಮಾಡುವ ಮೋಡಿ ನೋಡಿ ಒಂದು ವಿಷಾದ ಅವಳನ್ನು ಆವರಿಸಿಕೊಂಡಿತು. ಅಲ್ಲಿಂದೆದ್ದು ಮ್ಯಾಟ್ರಿಮೊನಿಗೆ ಹೋಗಿ, ಭಾವಿ ಅಳಿಯನ ಪ್ರೊಫೈಲ್ ನೋಡಲು ಕಾದಳು.
ಅಮರ ಪ್ರೇಮಿ
ಉದ್ಯಾನದಲ್ಲಿ ಕಂಡವಳನ್ನು ನೋಡುತ್ತ ಕುಳಿತ ಅಮಯ್‌ನನ್ನು ಅದೆಂಥ ಮೋಹಪಾಶ ಆವರಿಸಿಕೊಂಡಿತೆಂದರೆ ಕಣ್ಮನಗಳ ತುಂಬ ಅವಳೇ ತುಂಬಿಕೊಂಡಳು. ಎಷ್ಟು ಮೈಮರೆತನೆಂದರೆ, ಅವಳೆದ್ದು ಹೋಗಿದ್ದೂ ತಿಳಿಯದೆ ಕುಳಿತಲ್ಲೇ ಕುಳಿತಿದ್ದ. ಮೂರುಬಾರಿ ಕತ್ತಲಾವರಿಸಿ ಬೆಳಗಾದರೂ ಸಮ್ಮೋಹಿತನಂತೆ ಕುಳಿತೇ ಇದ್ದ. ಯಾರು ಎಚ್ಚರಿಸಿದರೂ ಏಳದೆ ಉಸಿರೂ ನಿಂತು ಕಲ್ಲಾದ. ಅಲ್ಲೇ ಪ್ರೇಮ ಮಂದಿರವೊಂದರ ದೇವರಾದ. ಪೂಜೆಗೊಳ್ಳುತ್ತಿ ರುವವನ ದರ್ಶನಕ್ಕೆ ತನ್ನ ಪ್ರೇಮಿಯೊಂದಿಗೆ ಬಂದವಳು, ಎಂದೆಂದಿಗೂ ತಮ್ಮ ಪ್ರೇಮ ಅಮರವಾಗಲೆಂದು ಬೇಡುತ್ತಿದ್ದಾಳೆ.
ಅನಿವಾರ್ಯತೆ
ಅವರಿಬ್ಬರೂ ಭೇಟಿಯಾಗಿ ತಮ್ಮ ಪೂರ್ವಾಪರಗಳ ಬಗ್ಗೆ ಮಾತನಾಡತೊಡಗಿದರು. ಅವನು ಹೇಳಿದ: “ನಾನು ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡೆ. ಅಮ್ಮ ಅನಿವಾರ್ಯವಾಗಿ ನನ್ನನ್ನು ಒಬ್ಬಳೇ ಬೆಳೆಸಿದಳು. ಅವಳಿಗೆ ನಾನೇ ಪ್ರಪಂಚ. ಅವಳನ್ನು ಒಪ್ಪಿಸಿಯೇ ನಾವಿಬ್ಬರೂ ಮದುವೆಯಾಗಬೇಕು.’ ಅವಳು ಹೇಳಿದಳು; “ನನ್ನಮ್ಮ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಇನ್ನೇನು ನನ್ನ ಕಾಲೇಜು ಮುಗಿಯುತ್ತದೆ ಎನ್ನುವ ಹಂತದಲ್ಲಿ ಅವರು ಕ್ಯಾನ್ಸರ್‌ಗೆ ಬಲಿಯಾದರು. ಅಪ್ಪ ಅನಿವಾರ್ಯವಾಗಿ ಇನ್ನೊಂದು ಮದುವೆಯಾದರು. ನಿನ್ನ ಅಮ್ಮ ನನಗೂ ಅಮ್ಮನೆ. ಅವರನ್ನು ಒಪ್ಪಿಸಿಯೇ ಮದುವೆಯಾಗೋಣ.’
-ಕವಿತಾ ಹೆಗಡೆ, ಅಭಯಂ, ಹುಬ್ಬಳ್ಳಿ