ಬೆಂಗಳೂರು: ಅಮೇರಿಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕನ್ನಡಿಗ ಜೆ ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅರುಣ್ ಕುಮಾರ್, ಯುಎಸ್ ಎ ಟೆಸ್ಟ್ ಕ್ರಿಕೆಟ್ ಆಡುವ ದೇಶವಾಗಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಅಮೇರಿಕಾ ಕ್ರಿಕೆಟ್ ತಂಡ ಸದ್ಯ ಕ್ರಿಕೆಟ್ ನಲ್ಲಿ ಅಂಬೆಗಾಲಿಡುತ್ತಿರುವ ಶಿಶು. ಐಸಿಸಿ ಅಸೋಸಿಯೇಟ್ ತಂಡ. ಇದುವರೆಗೆ ಯಾವುದೇ ಐಸಿಸಿ ಪ್ರಮುಖ ಲೀಗ್ ಆಡಿಲ್ಲ.
ಈ ಕುರಿತು ಮಾತನಾಡಿರುವ ಅರುಣ್ ಕುಮಾರ್, ಅಮೇರಿಕಾ ಟೆಸ್ಟ್ ತಂಡ ಮಾಡುವುದು ಸುಲಭವಲ್ಲ. ಅದು ಒಂದು ದೀರ್ಘ ಕಾಲದ ಪ್ರಕ್ರಿಯೆ ಆಗಬೇಕು. ಆದರೆ ಅದು ನಮ್ಮ ಗುರಿ. ಅದಕ್ಕಿಂತ ಮೊದಲು ಯಾವುದೇ ವಿಶ್ವಕಪ್ ನಲ್ಲಿ ಆಡುವಂತಾಗಬೇಕು. ಅದು ನನ್ನ ಗುರಿ ಎಂದಿದ್ದಾರೆ.
ಆಟಗಾರರನ್ನು, ಅಧಿಕಾರಿಗಳನ್ನು, ಆಯ್ಕೆಗಾರರನ್ನು ನಾನು ಹ್ಯೂಸ್ಟನ್ ನಲ್ಲಿ ಭೇಟಿಯಾಗಿದ್ದೆ. ಮುಂದಿನ ದಿನಗಳಲ್ಲಿ ಯಾವ ರೀತಿಯ ಯೋಜನೆಗಳನ್ನು ಕಾರ್ಯಗತ ಮಾಡಬಹುದು ಎಂದು ತಿಳಿದುಕೊಂಡಿದ್ದೇನೆ. ಪುರುಷರ ಕ್ರಿಕೆಟ್ ಮತ್ತು ಮಹಿಳೆಯರ ಕ್ರಿಕೆಟ್ ಬಗ್ಗೆ ಯೋಜನೆ ರೂಪಿಸುತ್ತಿದ್ದೇವೆ ಎಂದು ಅರುಣ್ ಕುಮಾರ್ ಹೇಳಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 7200 ರನ್, ಲಿಸ್ಟ್ ಎ ಕ್ರಿಕೆಟ್ ನಲ್ಲಿ 3000 ಕ್ಕೂ ಹೆಚ್ಚು ರನ್ ಗಳನ್ನು ಅರುಣ್ ಕುಮಾರ್ ಬಾರಿಸಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೂ ಕೋಚ್ ಆಗಿದ್ದರು. ಅರುಣ್ ಕುಮಾರ್ ಮಾರ್ಗದರ್ಶನದಲ್ಲಿ ಕರ್ನಾಟಕ ತಂಡ 2013-14, 2014-15 ವಿಜಯ್ ಹಜಾರೆ ಟ್ರೋಫಿ ಮತ್ತು ಇರಾನಿ ಕಪ್, ರಣಜಿ ಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು.