ಬೆಂಗಳೂರು: “ನಾನೂ ನಗಬೇಕು. ನನ್ನ ಕ್ಷೇತ್ರದ ಜನರೂ ಸಂತಸದಿಂದ ನಗಬೇಕು ಎಂಬುದು ನನ್ನ ಅಭಿಲಾಷೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೆ ನನಗೆ ಗಂಟು ಮುಖ ಹಾಕಿಕೊಳ್ಳಲು ಬರುವುದಿಲ್ಲ,’ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರು ಟಾಂಗ್ ನೀಡಿದರು.
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಸಂಜೆ ಬೃಹತ್ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡ ನಂತರ ಕುರುಬರಹಳ್ಳಿ ವೃತ್ತದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. “ನಾನು ಯಾವಾಗಲೂ ನಗುತ್ತಿರುತ್ತೇನೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ನಗು ಆರೋಗ್ಯಕ್ಕೆ ಒಳ್ಳೆಯದು. ಸಿದ್ದರಾಮಯ್ಯ ಇದನ್ನು ಅರ್ಥ ಮಾಡಿಕೊಳ್ಳಬೇಕು,’ ಎಂದು ತಿರುಗೇಟು ನೀಡಿದರು.
ನಾನು ಏನು ಅಭಿವೃದ್ಧಿ ಮಾಡಿದ್ದೇನೆ ಎಂದು ಕಾಂಗ್ರೆಸಿಗರು ಪ್ರಶ್ನಿಸುತ್ತಿದ್ದಾರೆ. ಎಲ್ಲೆಡೆ ಅಪಪ್ರಚಾರ ಮಾಡಿಕೊಂಡು ಬರುತ್ತಿದ್ದಾರೆ. ರಕ್ಷಣಾ ಇಲಾಖೆಗೆ ಸೇರಿದ ರಾಜ್ಯದ ಕೆಲ ಭೂಮಿಗಳ ವಿವಾದ ಹಲವು ವರ್ಷಗಳಿಂದ ಇತ್ಯರ್ಥವಾಗಿರಲಿಲ್ಲ. ನಾನು ಕೇಂದ್ರ ಸಚಿವನಾದ ನಂತರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನೇ ಬೆಂಗಳೂರಿಗೆ ಕರೆಸಿ 28 ಪ್ರಕರಣದಲ್ಲಿ 21 ಸಮಸ್ಯೆ ಪರಿಹರಿಸಿಕೊಟ್ಟಿದ್ದೇನೆ ಎಂದು ಹೇಳಿದರು.
ಇದರಿಂದಾಗಿ ಬಿಬಿಎಂಪಿ, ಬಿಡಿಎ ಸೇರಿದಂತೆ ಹಲವು ಯೋಜನೆಗಳಿಗೆ ವೇಗ ಸಿಕ್ಕಿದೆ. ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಹಾಯಕವಾಗಿದೆ. ನಾನು ಪ್ರಚಾರಕ್ಕೆ ಹಾತೊರೆಯುವುದಿಲ್ಲ. ಜನರ ಸಮಸ್ಯೆಗೆ ಸ್ಪಂದಿಸುತ್ತೇನೆ. ನಯಾಪೈಸೆ ಭ್ರಷ್ಟಾಚಾರ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾವುದೋ ವ್ಯಕ್ತಿ ಅಥವಾ ಪಕ್ಷವನ್ನು ಅಧಿಕಾರಕ್ಕೆ ತರಲು ನಡೆಯುವ ಚುನಾವಣೆ ಇದಲ್ಲ. ಸಮರ್ಥ ನಾಯಕ, ಸ್ಥಿರ ಸರಕಾರಕ್ಕಾಗಿ ಬಿಜೆಪಿಯನ್ನು ಬೆಂಬಲಿಸಬೇಕು. ನರೇಂದ್ರ ಮೋದಿಯವರನ್ನು ಪುನಃ ಪ್ರಧಾನಿ ಮಾಡಬೇಕು. ಕ್ಷೇತ್ರದಲ್ಲಿ ತಾವು ಕೈಗೊಂಡಿರುವ ಅಭವೃದ್ಧಿ ಕಾರ್ಯಗಳನ್ನು ಗಮನಿಸಿ ಪುನರಾಯ್ಕೆ ಮಾಡಬೇಕು.
ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸುತ್ತೇನೆ ಎಂದು ಮನವಿ ಮಾಡಿದರು. ಮುಖಂಡರಾದ ನರೇಂದ್ರ ಬಾಬು, ಹರೀಶ್, ನಾಗರಾಜ್, ರಾಜೇಂದ್ರಕುಮಾರ್, ಪ್ರಸನ್ನ, ಗಂಗಹನುಮಯ್ಯ, ಶಿವಾನಂದ್, ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.