ಗುವಾಹಟಿ(ಅಸ್ಸಾಂ): ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮೊಮ್ಮಗ, ಹಾಸನದ ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಪ್ರಕರಣದ ಕುರಿತು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸಚಿವ ಅಮಿತ್ ಶಾ ಮಂಗಳವಾರ (ಏ.30) ಪ್ರಶ್ನಿಸಿದ್ದಾರೆ.
ಇದನ್ನೂ ಓದಿ;JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕುರಿತ ಅಶ್ಲೀಲ ವಿಡಿಯೋ ಪ್ರಕರಣದ ಕುರಿತ ಪ್ರಶ್ನೆಗೆ ಸುದ್ದಿಗಾರರ ಜತೆ ಮಾತನಾಡಿದ ಶಾ, ಈ ವಿಚಾರದಲ್ಲಿ ಭಾರತೀಯ ಜನತಾ ಪಕ್ಷದ ನಿಲುವು ಸ್ಪಷ್ಟವಾಗಿದೆ. ನಾವು ಮಾತೃಶಕ್ತಿ ಪರವಾಗಿದ್ದೇವೆ, ಮಾತೃಶಕ್ತಿಗೆ ಅವಮಾನವಾಗುವುದನ್ನು ಪಕ್ಷ ಸಹಿಸಿಕೊಳ್ಳೋದಿಲ್ಲ ಎಂದು ಹೇಳಿದರು.
ನಾನು ಕಾಂಗ್ರೆಸ್ ಪಕ್ಷದವರನ್ನು ಕೇಳುತ್ತೇನೆ, ಅಲ್ಲಿ ಯಾರ ಸರ್ಕಾರವಿದೆ.? ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಆದರೂ ಈವರೆಗೆ ಯಾಕೆ ಕ್ರಮ ತೆಗೆದುಕೊಂಡಿಲ್ಲ? ರಾಜ್ಯ ಸರ್ಕಾರದ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲು ಸಾಧ್ಯವಿಲ್ಲ, ರಾಜ್ಯ ಸರ್ಕಾರವೇ ಕ್ರಮ ತೆಗೆದುಕೊಳ್ಳಬೇಕು ಎಂದು ಅಮಿತ್ ಶಾ ತಿಳಿಸಿದರು.
ಈ ಪ್ರಕರಣದಲ್ಲಿ ತನಿಖೆ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ. ಅಷ್ಟೇ ಅಲ್ಲ ನಮ್ಮ ಮೈತ್ರಿ ಪಕ್ಷವಾದ ಜೆಡಿಎಸ್ ಕೂಡಾ ಪಕ್ಷದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅಮಿತ್ ಶಾ ಈ ಸಂದರ್ಭದಲ್ಲಿ ಹೇಳಿದರು.
“ಇದು ತುಂಬಾ ಗಂಭೀರವಾದ ವಿಷಯವಾಗಿದೆ. ನಾವು ಇದನ್ನು ಸಹಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ ಪಕ್ಷ ಈವರೆಗೂ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಪ್ರಿಯಾಂಕಾಜೀ, ನಿಮ್ಮ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಳಿ ವಿಚಾರಿಸಿ ಎಂದು ಶಾ ತಿರುಗೇಟು ನೀಡಿದ್ದಾರೆ.