Advertisement

ನನಗಾಗಿ ಏನೂ ಬೇಡ; ನನ್ನೂರಿಗೆ ಪ.ಪೂ. ಕಾಲೇಜು ನೀಡಿ

01:16 AM Nov 10, 2021 | Team Udayavani |

ಮಂಗಳೂರು: “ನನಗಾಗಿ ಏನನ್ನೂ ಬಯಸುವುದಿಲ್ಲ. ನನ್ನೂರಿಗೆ ಒಂದು ಪದವಿಪೂರ್ವ ಕಾಲೇಜನ್ನು ನೀಡಿ ಮತ್ತು ಅದಕ್ಕಾಗಿ ಒಂದು ಕೋಟಿ ರೂ. ಅನುದಾನ ಒದಗಿಸಿ ಎಂಬುದೇ ನನ್ನ ವಿನಮ್ರ ಪ್ರಾರ್ಥನೆ’. ಇದು ಪದ್ಮಶ್ರೀ ಹಾಜಬ್ಬ ಅವರ ಭಾವುಕ ನುಡಿಗಳು.

Advertisement

ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಸೋಮವಾರ ದೇಶದ ಅತ್ಯುನ್ನತ ನಾಲ್ಕನೇ ನಾಗರಿಕ ಪ್ರಶಸ್ತಿ “ಪದ್ಮಶ್ರೀ’ ಸ್ವೀಕರಿಸಿ ಮಂಗಳವಾರ ಮಂಗಳೂರಿಗೆ ಮರಳಿದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮ್ಮಾನಿಸಲಾಯಿತು.

ಈ ವೇಳೆ ಸುದ್ದಿಗಾರರು ಹಾಜಬ್ಬ ಅವರಲ್ಲಿ, “ಸರಕಾರದಿಂದ ನಿಮ್ಮ ಸ್ವಂತಕ್ಕೆ ಏನಾದರೂ ಬೇಡಿಕೆ ಇದೆಯೇ? ಎಂದು ಪ್ರಶ್ನಿಸಿದಾಗ, “ಪ್ರಧಾನಮಂತ್ರಿಗಳ ಎದುರು ರಾಷ್ಟ್ರಪತಿಯವರು ನೀಡಿದ ಈ ಪದ್ಮಶ್ರೀಗಿಂತ ಮಿಗಿಲಾದ ಆಸ್ತಿ ಬೇರೆ ಯಾವುದಿದೆ?’ ಎಂದರು.

“ಕಿತ್ತಳೆ ಹಣ್ಣು ಮಾರಿದ ವ್ಯಕ್ತಿಗೆ ಇಂತಹ ಅತ್ಯುನ್ನತ ಪ್ರಶಸ್ತಿ ಪಡೆಯಲು ಅವಕಾಶ ಮಾಡಿದ ಎಲ್ಲರಿಗೂ ನಾನು ಶಿರಬಾಗಿ ನಮಿಸುತ್ತೇನೆ. ಪ್ರಶಸ್ತಿ ಸ್ವೀಕರಿಸಲು ಹೊಸದಿಲ್ಲಿಗೆ ಹಾಗೂ ಅಲ್ಲಿಂದ ಹಿಂದಿರುಗುವರೆಗೂ ಎಲ್ಲ ರೀತಿಯ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಮಾಡಿಸಿದ್ದಾರೆ. ಸಾಮಾನ್ಯ ಬಡ ವ್ಯಕ್ತಿಯೊಬ್ಬನನ್ನು ಈ ಜಿಲ್ಲೆಯಿಂದ ರಾಷ್ಟ್ರಪತಿ ಭವನಕ್ಕೆ ಕಳುಹಿಸಲು ಸಹಕರಿಸಿದ್ದಾರೆ’ ಎಂದವರು ಸ್ಮರಿಸಿದರು.

ಪದ್ಮಶ್ರೀ ಪದಕ, ಪ್ರಶಸ್ತಿ ಪತ್ರವನ್ನು ತೆರೆದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರ ಕೈಗಿತ್ತು ಅದನ್ನು ತೆರೆದು ನೋಡುವಂತೆ ಕೋರಿದ ಹಾಜಬ್ಬ ಆ ಸಂದರ್ಭದಲ್ಲಿ ಭಾವುಕರಾದರು.

Advertisement

ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಅವರು, ಹಾಜಬ್ಬ ಅವರನ್ನು ಪೇಟ ತೊಡಿಸಿ, ಹಾರಾರ್ಪಣೆಗೈದು, ಶಾಲು ಹೊದೆಸಿ ಜಿಲ್ಲಾಡಳಿತ ಪರವಾಗಿ ಸಮ್ಮಾನಿಸಿದರು.

ಬರಿಗಾಲಿನ ಸಂತ”ನಾನು ಹರೇಕಳದ ಮಣ್ಣಿನಲ್ಲಿ ಬರೀಗಾಲಿನಲ್ಲೇ ನಡೆದವನು. ಆದ್ದರಿಂದ ನಿನ್ನೆ ರಾಷ್ಟ್ರಪತಿ ಭವನದಲ್ಲೂ ಬರಿಗಾಲಿನಲ್ಲೇ ನಡೆದು ಪ್ರಶಸ್ತಿ ಸ್ವೀಕರಿಸಿದ್ದೇನೆ’ ಎಂದು ಹೇಳಿದ ಹಾಜಬ್ಬ, ಜಿಲ್ಲಾಡಳಿತ ನೀಡಿದ ಸಮ್ಮಾನವನ್ನೂ ಚಪ್ಪಲಿ ಕಳಚಿಟ್ಟು ಸ್ವೀಕರಿಸಿದರು.

ಕಸಪಾ ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಹಾಜಬ್ಬ ಅವರನ್ನು ಗೌರವಿಸಿದರು. ಅಪರ ಜಿಲ್ಲಾಧಿಕಾರಿ (ಪ್ರಭಾರ) ಮಾಣಿಕ್ಯ, ನಗರಾಭಿವೃದ್ಧಿ ಕೋಶದ ಉಪ ನಿರ್ದೇಶಕಿ ಗಾಯತ್ರಿ ನಾಯಕ್‌, ತಹಶೀಲ್ದಾರ್‌ ಗುರುಪ್ರಸಾದ್‌ ಉಪಸ್ಥಿತರಿದ್ದರು.

ಇದನ್ನೂ ಓದಿ:ನಕ್ಸಲ್‌ ನಾಯಕ ಬಿ.ಜಿ. ಕೃಷ್ಣಮೂರ್ತಿ ಸೆರೆ

ವಿಮಾನ ನಿಲ್ದಾಣದಲ್ಲಿ ಸ್ವಾಗತ
ಹೊಸದಿಲ್ಲಿಯಿಂದ ಬೆಂಗಳೂರು ಮೂಲಕ ಮಂಗಳವಾರ ಬೆಳಗ್ಗೆ 7.55ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಹಾಜಬ್ಬ ಅವರನ್ನು ಜಿಲ್ಲಾಡಳಿತ ಪರವಾಗಿ ತಹಶೀಲ್ದಾರ್‌ ಗುರುಪ್ರಸಾದ್‌ ಸ್ವಾಗತಿಸಿದರು. ಹಾಜಬ್ಬರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಊರಿನವರು ಸೇರಿದ್ದರು. ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿರುವುದನ್ನು ನೋಡಿದ ಹಾಜಬ್ಬ ಗಲಿಬಿಲಿಗೊಳಗಾದರು. “ನನಗೆ ಯಾವುದೇ ಸಮ್ಮಾನ ಬೇಡ’ ಎನ್ನುತ್ತಾ ಎಲ್ಲರಿಗೂ ಕೈಮುಗಿಯುತ್ತಾ ಜಿಲ್ಲಾಡಳಿತದಿಂದ ಕಳುಹಿಸಲಾಗಿದ್ದ ಕಾರಿನತ್ತ ಧಾವಿಸಿ ಬಂದು ವಾಹನ ಏರಿದರು.

ಅಲ್ಲಿಂದ ಅವರನ್ನು ಸಕೀìಟ್‌ ಹೌಸ್‌ ಅತಿಥಿ ಗೃಹಕ್ಕೆ ಕರೆದೊಯ್ದು ವಿಶ್ರಾಂತಿ ಪಡೆದುಕೊಳ್ಳಲು ಅವಕಾಶ ನೀಡಲಾಯಿತು. ಜಿಲ್ಲಾಧಿಕಾರಿಯವರು ಸಕೀìಟ್‌ ಹೌಸ್‌ಗೆ ತೆರಳಿ ಅವರನ್ನು ಸ್ವಾಗತಿಸಿ ತಮ್ಮ ಕಚೇರಿಗೆ ಕರೆ ತಂದರು.

ಸಕೀìಟ್‌ ಹೌಸ್‌ನಲ್ಲಿ ಚಹಾ-ತಿಂಡಿ ನೀಡಿ ದಾಗಲೂ ನಿರಾಕರಿಸಿದ್ದರು. ನೀವು ತಿನ್ನದಿದ್ದರೆ ನಾನೂ ತಿನ್ನುವುದಿಲ್ಲ ಎಂದಾಗ ಸ್ವಲ್ಪ ತಿಂಡಿ ತಿಂದರು ಎಂದು ಅವರನ್ನು ಸ್ವಾಗತಿಸಲು ಹೋಗಿದ್ದ ತಹಶೀಲ್ದಾರ್‌ ಗುರುಪ್ರಸಾದ್‌ ಹಾಜಬ್ಬರ ಸರಳತೆ ಬಗ್ಗೆ ವಿವರಿಸಿದರು.

ಪ್ರಧಾನಿ ಸ್ಪರ್ಷದ ಹರ್ಷ
“ಕಡು ಬಡವನಾದ ನನಗೆ ದೇಶದ ರಾಷ್ಟ್ರಪತಿ, ಪ್ರಧಾನಿ ಮುಂದೆ ನಿಲ್ಲುವ ಸೌಭಾಗ್ಯ ದೊರಕಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಲಾಗಿದ್ದ ಚಹಾಕೂಟದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿಯವರು ಕುಶಲೋಪರಿ ಮಾತನಾಡುತ್ತಾ ಬಳಿಗೆ ಬಂದರು. ನನಗೆ ಭಾಷೆ ಗೊತ್ತಿಲ್ಲ. ಜತೆಗಿದ್ದವರು ಪ್ರಧಾನಿಗೆ ಪರಿಚಯಿಸಿದರು. ಊರಿನಲ್ಲಿ ಸೀಯಾಳ ಕತ್ತರಿಸುವ ಸಂದರ್ಭ ನನ್ನ ಎಡಗೈ ಹೆಬ್ಬೆರಳಿಗೆ ಕತ್ತಿ ತಾಗಿದ್ದು, ಬ್ಯಾಂಡೇಜ್‌ ಹಾಕಲಾಗಿತ್ತು. ಅದೇ ಬ್ಯಾಂಡೇಜ್‌ನೊಂದಿಗೆ ನಾನು ಪ್ರಶಸ್ತಿ ಸ್ವೀಕರಿಸಿದ್ದೇನೆ. ಅದೇ ಕೈಯನ್ನು ಪ್ರಧಾನಿ ಮುಟ್ಟಿದರು. ಅದು ನನ್ನ ಪಾಲಿನ ಅಪೂರ್ವ ಕ್ಷಣ’ ಎನ್ನುತ್ತಾ ಹಾಜಬ್ಬ ತಮ್ಮ ಕೈಬೆರಳನ್ನು ತೋರಿಸಿದರು.

ಪ.ಪೂ. ಕಾಲೇಜಿಗೆ ಪ್ರಸ್ತಾವನೆ
ಹಾಜಬ್ಬರ ಬೇಡಿಕೆಯಂತೆ ಹರೇಕಳದಲ್ಲಿ ಪದವಿಪೂರ್ವ ಕಾಲೇಜು ತೆರೆಯುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಹಾಗೂ ಇದನ್ನು ಜನಪ್ರತಿನಿಧಿಗಳೊಂದಿಗೆ ಫಾಲೋಅಪ್‌ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ತಿಳಿಸಿದರು. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿ ಹಾಜಬ್ಬರನ್ನು ಸಮ್ಮಾನಿಸಲು ಉದ್ದೇಶಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next