ಹೊಸದಿಲ್ಲಿ: ಐಟಿ ರಿಟರ್ನ್ಸ್ ಸಲ್ಲಿಕೆಗೆ ಆಧಾರ್ ಸಂಖ್ಯೆ ಅಥವಾ ಆಧಾರ್ ನೋಂದಣಿ ಸಂಖ್ಯೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿರುವ ಆದಾಯ ತೆರಿಗೆ ಇಲಾಖೆ, ಇದೀಗ ತೆರಿಗೆದಾರರು ತಮ್ಮ ಖಾಯಂ ಖಾತೆ ಸಂಖ್ಯೆ (ಪಾನ್) ಜತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಅನುಕೂಲವಾಗುವಂತೆ ಇ-ಸೌಲಭ್ಯ ಆರಂಭಿಸಿದೆ. ತೆರಿಗೆದಾರರು ಆಧಾರ್‌ಸಂಖ್ಯೆಗಳನ್ನು ಲಿಂಕ್ ಮಾಡುವ ಕಾರ್ಯವನ್ನು ಸುಲಭವಾಗಿಸುವ ನಿಟ್ಟಿನಲ್ಲಿ, ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್:
incometaxindiaefiling.gov.inನ ಹೋಮ್ ಪೇಜ್‌ನಲ್ಲಿ ಹೊಸ ಲಿಂಕ್ ಸೃಷ್ಟಿಸಲಾಗಿದೆ.
‘ವೆಬ್‌ಸೈಟ್‌ನಲ್ಲಿರುವ ಇ-ಲಿಂಕ್ ಮೇಲೆ ಕ್ಲಿಕ್ ಮಾಡಿ, ಪಾನ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್‌ನಲ್ಲಿರುವಂತೆ ಯಥಾವತ್ತಾಗಿ ಹೆಸರನ್ನು ನಮೂದಿಸಬೇಕು. ಇದನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಪರಿಶೀಲಿಸಿ, ಅನಂತರ ದೃಢಪಡಿಸುತ್ತದೆ. ಒಂದೊಮ್ಮೆ ತೆರಿಗೆದಾರರು ನೀಡಿರುವ ಆಧಾರ್ ಹೆಸರಿನಲ್ಲಿ ಯಾವುದೇ ಸಣ್ಣಪುಟ್ಟ ವ್ಯತ್ಯಾಸಗಳು ಕಂಡುಬಂದಲ್ಲಿ ಆಧಾರ್ ಒಟಿಪಿ (ಒನ್ ಟೈಮ್ ಪಾಸ್ವರ್ಡ್) ಅಗತ್ಯವಿರುತ್ತದೆ, ಆಧಾರ್ ಸಂಖ್ಯೆ ಜತೆ ನೋಂದಣಿ ಮಾಡಿರುವ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ವಿಳಾಸಕ್ಕೆ ಒಟಿಪಿ ಕಳಿಸಲಾಗುತ್ತದೆ,’ ಎಂದು ಇಲಾಖೆ ತಿಳಿಸಿದೆ.
ಲಿಂಕಿಂಗ್ ಪ್ರಕ್ರಿಯೆ ಸರಿಯಾಗಿ ಪೂರ್ಣಗೊಳ್ಳಬೇಕೆಂದರೆ ತೆರಿಗೆದಾರರು ನೀಡುವ ಆಧಾರ್ ಮತ್ತು ಪಾನ್ ಕಾರ್ಡ್‌ಗಳಲ್ಲಿ ಅವರ ಜನ್ಮ ದಿನಾಂಕ ಒಂದೇ ಆಗಿರಬೇಕು. ಅಲ್ಲದೆ ಲಿಂಕ್ ಮಾಡುವಾಗ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಲಾಗ್ ಇನ್ ಆಗುವ ಅಗತ್ಯವಿರುವುದಿಲ್ಲ. ಹೀಗಾಗಿ ಯಾರು ಬೇಕಿದ್ದರೂ ತಮ್ಮ ಪಾನ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡಬಹುದು. 2017ರ ಜುಲೈ 1ರಿಂದರಿಂದ ಪಾನ್ ಸಂಖ್ಯೆಗೆ ಅರ್ಜಿ ಸಲ್ಲಿಸುವವರು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು.
– ಎರಡೂ ಗುರುತಿನ ಸಂಖ್ಯೆ ನಮೂದಿಸುವುದು ಕಡ್ಡಾಯ
– ಎರಡೂ ಕಾರ್ಡ್‌ಗಳಲ್ಲಿ ಜನ್ಮ ದಿನಾಂಕ ಒಂದೇ ಇರದಿದ್ದರೆ ಲಿಂಕಿಂಗ್ ಫೇಲ್
– ಆಧಾರ್ ಕಂರ್ಡ್‌ನಲ್ಲಿರುವಂತೆ ಯಥಾವತ್ ಹೆಸರು ನಮೂದಿಸಲೇಬೇಕು
ಲಿಂಕ್ ಮಾಡಲು 3 ಹಂತ
1. ಇಲಾಖೆ ಹೋಮ್‌ಪೇಜ್‌ನಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
2. ಆಧಾರ್, ಪಾನ್ ಸಂಖ್ಯೆ ನಮೂದಿಸಿ
3. ಆಧಾರ್ ಕಾರ್ಡ್‌ನಲ್ಲಿರುವಂತೆ ಹೆಸರು ನಮೂದಿಸಿ