Advertisement

Govt.,: ನಾಲ್ಕು ವರ್ಷವಾದರೂ ಸಿಕ್ಕಿಲ್ಲ ವಿವಾಹ ಪ್ರೋತ್ಸಾಹಧನ!  

12:33 AM Oct 04, 2024 | Team Udayavani |

ಕಲಬುರಗಿ: ರಾಜ್ಯದಲ್ಲಿ ಒಳಪಂಗಡ, ಅಂತರ್‌ಜಾತಿ ಹಾಗೂ ದೇವದಾಸಿ ಮಕ್ಕಳ ಮದುವೆಗೆ ಅನುದಾನ ಕೊರತೆಯಿಂದಾಗಿ ಪೋತ್ಸಾಹಧನ ಸಿಗುತ್ತಿಲ್ಲ. ಹೀಗಾಗಿ ನವವಿವಾಹಿತರು ಒಂದೆಡೆ ಸಮಾಜ-ಹೆತ್ತವರು ಕೊನೆಗೆ ಸರಕಾರದಿಂದಲೂ ತಿರಸ್ಕಾರಕ್ಕೊಳಗಾದ ಪ್ರಸಂಗ ಎದುರಾಗಿದೆ.

Advertisement

ಕಳೆದ ನಾಲ್ಕು ವರ್ಷಗಳಿಂದ 38,524 ಜೋಡಿಗಳು ಪ್ರೋತ್ಸಾಹಧನಕ್ಕಾಗಿ ಕಾಯ್ದು ಕುಳಿತಿದ್ದಾರೆ. ಇನ್ನೊಂದೆಡೆ ಮಕ್ಕಳಾಗಿದ್ದರೂ ಇನ್ನೂವರೆಗೂ ಸಾಮಾಜಿಕ ಕಟ್ಟುಪಾಡು, ಕೌಟುಂಬಿಕ ಹಗೆತನ ಮತ್ತು ಆರ್ಥಿಕ ಪರಿಸ್ಥಿತಿ ಯಾವುದೂ ಸುಧಾರಣೆ ಕಂಡಿಲ್ಲ. ಹೀಗಾಗಿ ಸರಕಾರದ ಯೋಜನೆ ಪ್ರಯೋಜನವಾಗುವ ಬದಲು ಹೊರೆಯಾಗಿ ಪರಿಣಮಿಸುತ್ತಿದೆ.

ವಿಲೇವಾರಿ ಆಗುತ್ತಿಲ್ಲ
ಭಾರತೀಯ ಜನತಾ ಪಕ್ಷ ನೇತೃತ್ವದ ಸರಕಾರದಲ್ಲೂ ಸೂಕ್ತ ಪ್ರೋತ್ಸಾಹ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದಾದ ಮೇಲೆ ಎಲ್ಲವೂ ಸರಿ ಹೋದೀತು ಎಂದು ಆಸೆ ಇಟ್ಟುಕೊಂಡಿದ್ದವರಿಗೆ ಭ್ರಮನಿರಸನವಾಗಿದೆ. ಗ್ಯಾರಂಟಿ ಯಿಂದಾಗಿ ಇಲಾಖಾವಾರು ಅನುದಾನ ಸಮರ್ಪಕವಾಗಿ ಬಿಡುಗಡೆಯಾಗದೆ ವಿವಾಹಿತರಿಗೆ ಪ್ರೋತ್ಸಾಹಧನ ಸಿಗುತ್ತಿಲ್ಲ. ಅಂತರ್ಜಾತಿ ವಿವಾಹ ಆದವರಿಗೆ 3ಲಕ್ಷ ರೂ., ಒಳಪಂಗಡ ಮದುವೆಗೆ 2ಲಕ್ಷ ರೂ. ಹಾಗೂ ದೇವದಾಸಿ ಮಕ್ಕಳ ಮದುವೆಗೆ 5ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಒಳಪಂಗಡದಲ್ಲಿ ವಿವಾಹವಾದವರದ್ದು 2697 ಅರ್ಜಿ, ಅಂತರ್ಜಾತಿ ವಿವಾಹವಾದವರದ್ದು 30,453 ಅರ್ಜಿ ಹಾಗೂ ದೇವದಾಸಿ ಮಕ್ಕಳನ್ನು ಮದುವೆಯಾದವರದ್ದು 5374 ಅರ್ಜಿಗಳಿವೆ. ಇದಲ್ಲದೆ, ವಿವಾಹಕ್ಕೆ ಬೇಕಾದ ಸಮರ್ಪಕವಾಗಿ ದಾಖಲೆಗಳನ್ನು ನೀಡಿಲ್ಲ ಎನ್ನುವ ಕಾರಣಕ್ಕೆ ಮೂರು ವಿಭಾಗದಲ್ಲಿ ಒಟ್ಟು 6456 ಅರ್ಜಿಗಳನ್ನು ಪೆಂಡಿಂಗ್‌ ಇಡಲಾಗಿದೆ. ಇದಲ್ಲದೆ, 1433 ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಇನ್ನೊಂದೆಡೆ ಮದುವೆಗೂ ಮುನ್ನ ಆಧಾರ್‌ ಕಾರ್ಡ್‌ದಲ್ಲಿ ತಂದೆ ಹೆಸರು ತೆಗೆಸಬೇಕು ಎನ್ನುವುದು ಅಧಿಕಾರಿಗಳ ಇತ್ತೀಚಿನ ವಾದವಾಗಿದ್ದು, ಇದು ವಿವಾದದ ಸ್ವರೂಪ ಪಡೆದಿದೆ.

ಜಿಲ್ಲಾವಾರು ಅರ್ಜಿಗಳ ವಿವರ
ಕಲಬುರಗಿ 1956, ಬಾಗಲಕೋಟೆ 1158, ರಾಯಚೂರು 1126, ಬಳ್ಳಾರಿ 1128, ಕೊಪ್ಪಳ 1021, ವಿಜಯನಗರ 1016, ವಿಜಯಪುರ 1012, ಬೆಳಗಾವಿ 1970, ಗದಗ 700, ಯಾದಗಿರಿ 398, ದಾವಣಗೆರೆ 1464, ಧಾರವಾಡ 1407, ಹಾವೇರಿ 936, ಚಿತ್ರದುರ್ಗ 1044, ಬೆಂಗಳೂರು 5655, ಬೆಂಗಳೂರು ಗ್ರಾಮಾಂತರ 1205, ಬೀದರ್‌ 395, ಚಿಕ್ಕಮಗಳೂರು 1229, ದಕ್ಷಿಣ ಕನ್ನಡ 276, ತುಮಕೂರು 1716, ಮೈಸೂರು 1880, ಉತ್ತರ ಕನ್ನಡ 686, ಚಿಕ್ಕಬಳ್ಳಾಪುರ 869, ಕೊಡಗು 470, ಉಡುಪಿ 316, ಶಿವಮೊಗ್ಗ 2010, ಮಂಡ್ಯ 1109, ಕೋಲಾರ 1340, ರಾಮನಗರ 1049, ಹಾಸನ 1572, ಚಾಮರಾಜನಗರದಲ್ಲಿ 403 ಅರ್ಜಿಗಳನ್ನು ಸಲ್ಲಿಸಲಾಗಿದೆ.

-ಸೂರ್ಯಕಾಂತ್‌ ಎಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next