Advertisement

ನಾನು ಪಕ್ಷದಲ್ಲಿ ಪ್ರತ್ಯೇಕ ಪಡೆ ರಚನೆ ಮಾಡಿಲ್ಲ

08:15 AM Mar 09, 2018 | |

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ  ಪಕ್ಷವನ್ನು ಮತ್ತೂಂದು ಬಾರಿ ಅಧಿಕಾರಕ್ಕೆ ತರಲು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ  ಎರಡು ಹಂತದ ಜನಾಶೀರ್ವಾದ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ “ಉದಯವಾಣಿ’ಯೊಂದಿಗೆ ಅವರು ನೇರಾನೇರ ಮಾತಿಗಿಳಿದಾಗ.

Advertisement

ಜನಾಶೀರ್ವಾದ ಯಾತ್ರೆಯಿಂದ  ಚುನಾವಣೆಗೆ ಅನುಕೂಲ ಆಗುತ್ತಾ ?
ಜನಾಶೀರ್ವಾದ ಯಾತ್ರೆಯಿಂದ ಖಂಡಿತ ಜನರ ಆಶೀರ್ವಾದ ನಮಗೆ ದೊರೆಯುತ್ತದೆ. ರಾಹುಲ್‌ ಗಾಂಧಿಯ ಬಗ್ಗೆ ಜನರ ಅಭಿಪ್ರಾಯ ಈಗ ಬದಲಾಗಿದೆ. ಅವರಲ್ಲಿ ನಾಯಕತ್ವ ಗುಣ, ಸರಳ ಸ್ವಭಾವ ಎದ್ದು ಕಾಣುತ್ತಿದೆ. ರಾಜ್ಯ ಸರಕಾರದ ಸಾಧನೆಗಳು ಜನರಿಗೆ ತಲುಪಿವೆ. ನಾನು ಸಾಮಾನ್ಯವಾಗಿ ಯಾರಾದ್ರೂ ಕಿವಿಯಲ್ಲಿ ಹೇಳಿದರೆ ನಂಬುವುದಿಲ್ಲ. ಕಣ್ಣಾರೆ ಕಂಡರೆ ಮಾತ್ರ ನಂಬುತ್ತೇನೆ. ಎರಡು ವಿಭಾಗದಲ್ಲಿ ನಾವು ಪ್ರವಾಸ ಮಾಡಿದಾಗ ಯುವಕರು ಮತ್ತು ಹೆಣ್ಣುಮಕ್ಕಳು ತೋರಿಸಿದ ಅಭಿಮಾನ ನಮಗೆ ದೊಡ್ಡ ಶಕ್ತಿ ತುಂಬಿದೆ.

ಯಾತ್ರೆಯಲ್ಲಿ ಸರಕಾರದ ಸಾಧನೆ ಬಿಟ್ಟು ಬಸವಣ್ಣನ ಧ್ಯಾನ ಮಾಡಿದರು ಎಂಬ ಆರೋಪ ಕೇಳಿ ಬರುತ್ತಿದೆ?
ನಮ್ಮ ಸರಕಾರ ಆರಂಭದಿಂದಲೂ ಬಸವಣ್ಣನ ತತ್ವದಡಿಯ ಲ್ಲಿಯೇ ನಡೆಯುತ್ತಿದೆ. ಬಸವಣ್ಣ ಒಬ್ಬ ಆದರ್ಶ ವ್ಯಕ್ತಿ. ಬಸವಣ್ಣನ ಬಗ್ಗೆ ರಾಹುಲ್‌ ಗಾಂಧಿ ಅಧ್ಯಯನ ಮಾಡಿ, ಅದನ್ನು ಪ್ರತಿಪಾದನೆ ಮಾಡುತ್ತಿದ್ದಾರೆ.

ಕಾಂಗ್ರೆಸ್‌ಗೆ ಚುನಾವಣೆ ಸಂದರ್ಭದಲ್ಲಿ ಬಸವಣ್ಣ ನೆನಪಾಗಿದ್ದೇಕೆ?
ಮೇ 13ರಂದು ಬಸವಣ್ಣನ ಜಯಂತಿ ದಿನದಂದೇ ಸರಕಾರ ರಚನೆಯಾಗಿದೆ. ಸಿದ್ದರಾಮಯ್ಯ ಬಸವ ಜಯಂತಿ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ನಾವು ಆದರ್ಶ ವ್ಯಕ್ತಿಗಳ ತತ್ವಗಳನ್ನು ಪಾಲಿಸಿಕೊಂಡು ಹೋಗು ವುದರಲ್ಲಿ ತಪ್ಪಿಲ್ಲ. ನಾವು ಯಾವುದೋ ಒಂದು ಜಾತಿಯಲ್ಲಿ ಹುಟ್ಟಿರಬಹುದು. ಬಸವಣ್ಣ, ಬುದ್ಧ, ಅಂಬೇಡ್ಕರ್‌, ಗಾಂಧೀಜಿ ಅಂತಹ ಮಹಾಪುರುಷರ ತತ್ವಗಳನ್ನು ಪಾಲಿಸುತ್ತೇವೆ. ನಾನು ಗಂಗಾಧರ ಅಜ್ಜ ಅವರ ಮಾನವ ತತ್ವ ಪಾಲಿಸುತ್ತೇನೆ. 

ಈ ಚುನಾವಣೆಯಲ್ಲಿ ಬಸವಣ್ಣನೇ ನಿಮ್ಮನ್ನು ಕಾಪಾಡಬೇಕು ಅಂತೀರಾ?
ನಮ್ಮದು ಕಾಯಕವೇ ಕೈಲಾಸ. ಜನರು ನಮ್ಮ ಮುಂದೆ ಬಂದು ನೋವು ತೋಡಿಕೊಂಡಾಗ ಅವರ ಸೇವೆ ಮಾಡುವುದೇ ನಮ್ಮ ಕಾಯಕ. ಅದೇ ನಮಗೆ ಕೈಲಾಸ. ಎಲ್ಲ ಜನರೂ ಸಂತೋಷ ವಾಗಿರಬೇಕೆಂಬುದೇ ನಮ್ಮ ಬಯಕೆ.  

Advertisement

ಜನಾಶೀರ್ವಾದ ಯಾತ್ರೆಯಲ್ಲಿ ಸಿದ್ದರಾಮಯ್ಯ ಜಾಸ್ತಿ ಹೈಲೈಟ್‌ ಆದ್ರಂತೆ?
ನನ್ನ ಯಾರೂ ನೆಗ್ಲೆಕ್ಟ್ ಮಾಡಲು ಸಾಧ್ಯವಿಲ್ಲ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ಫ‌ಲಾಫ‌ಲ ದೇವರಿಗೆ ಬಿಟ್ಟಿದ್ದು, ಈಗ ನಮ್ಮ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರು ಹೇಳಿದಂತೆ ನಾವು ಕೇಳಬೇಕು. ಸಿದ್ದರಾಮಯ್ಯ ಎಲ್ಲ ಇಲಾಖೆಗಳ ಸಾಧನೆಗಳನ್ನು ಈಗಾಗಲೇ ಹೇಳುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಹೀಗಿರುವಾಗ ಅವರನ್ನು ಲೀಡರ್‌ ಅಲ್ಲ ಅಂತ ಹೇಳಲಿಕ್ಕಾಗುತ್ತಾ?

ರಾಜ್ಯಕ್ಕೆ ರಾಹುಲ್‌ ಬಂದರೆ ಬಿಜೆಪಿಗೆ ಅನುಕೂಲ ಆಗುತ್ತದೆ ಅಂತ ಹೇಳ್ತಿದಾರೆ?
ರಾಹುಲ್‌ ಗಾಂಧಿ ಎಫೆಕ್ಟ್ ಏನು ಅಂತ ಚುನಾವಣೆಯಲ್ಲಿ ಗೊತ್ತಾಗುತ್ತದೆ. ಅವರ ಬಗ್ಗೆ ಭಯ ಇರುವುದುರಿಂದಲೇ ಈ ರೀತಿ ಹೇಳಲಾಗುತ್ತಿದೆ. ಬೇಕಿದ್ದರೆ ಪ್ರಧಾನಿ ಮೋದಿಯೂ ಬರಲಿ, ಅಮಿತ್‌ ಶಾನೂ ಬರಲಿ, ಇನ್ನು ಯಾರಿ ದ್ದಾರೆ ಅವರೆಲ್ಲಾ ಬರಲಿ, ನಮ್ಮ ಪಕ್ಷದ ಅಧ್ಯಕ್ಷರೂ ಬರ್ತಾರೆ. 

ರಾಹುಲ್‌ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್‌ ಸೋತಿದೆ ಎನ್ನುತ್ತಿದ್ದಾರಲ್ಲ ಬಿಜೆಪಿಯವರು?
ಬಿಜೆಪಿಯವರು ರಾಹುಲ್‌ ಗಾಂಧಿಯನ್ನ ಅಂಡರ್‌ ಎಸ್ಟಿ ಮೇಟ್‌ ಮಾಡ್ತಿದ್ದಾರೆ. ರಾಹುಲ್‌ಗೆ ಪ್ರಧಾನಿ ಆಗಲಿಕ್ಕೆ ಅಥವಾ ಮನಮೋಹನ್‌ ಸಿಂಗ್‌ ಸರ್ಕಾರದಲ್ಲಿ ಪ್ರಮುಖ ಖಾತೆ ಹೊಂದಲಿಕ್ಕೆ ಆಗುತ್ತಿರಲಿಲ್ಲವೇ? ಸೋನಿಯಾ ಗಾಂಧಿಗೂ ಪ್ರಧಾನಿ ಹುದ್ದೆಗೆ ಆಹ್ವಾನ ಬಂದಿತ್ತಲ್ಲ? ಮನಮೋಹನ್‌ ಸಿಂಗ್‌ ಬದಲು ರಾಹುಲ್‌ಗೆ ಪ್ರಧಾನಿ ಆಗುವಂತೆ ಪಕ್ಷದ ಮುಖಂಡರು ಹೇಳಿರಲಿಲ್ಲವೇ? ಅವರು ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ್ದಾರೆ.

ಮೋದಿ-ಶಾ “ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1 ರಾಜ್ಯ’ ಅಂತಿದ್ದಾರೆ?
ನೋಡ್ರಿ, ಪ್ರಧಾನಿಗಳು ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಎರಡು ವರ್ಷದ ಹಿಂದೆ ಇಲ್ಲಿಯೇ ಬಂದು ಗ್ಲೋಬಲ್‌ ಇನ್ವೆಸ್ಟರ್ ಮೀಟ್‌ ಮಾಡಿದ್ದರಲ್ಲ…ಇಲ್ಲಿ ಆಡಳಿತ ಸರಿ ಇಲ್ಲ, ವಿದ್ಯುತ್‌ ಇಲ್ಲ, ಭ್ರಷ್ಟಾಚಾರ ಇದೆ ಅಂದಿದ್ದರೆ ಅವರು ಇಲ್ಲಿ ಬರುತ್ತಿದ್ದರಾ? ಬೆಂಗಳೂರಿನ ಮೂಲಕ ಭಾರತವನ್ನು ವಿಶ್ವಕ್ಕೆ ಪರಿಚಯ ಮಾಡುವ ಪ್ರಯತ್ನ ಮಾಡಿದರು, ಅವರಿಗೆ ಬೇರೆ ರಾಜ್ಯಗಳಿರಲಿಲ್ಲವೇ? ನಾವೇನೂ ಅವರನ್ನು ಕರೆದಿರಲಿಲ್ಲ. ಬಿಹಾರ್‌, ಮಧ್ಯಪ್ರದೇಶ, ತಮಿಳುನಾಡು, ರಾಜಸ್ಥಾನ ಯಾವುದೇ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಕರ್ನಾಟಕ ಏಕೆ ಬೇಕಾಯ್ತು? ರಾಜಕೀಯಕ್ಕೊಸ್ಕರ ಮಾತನಾಡಿದರೆ ಏನೂ ಪ್ರಯೋಜನ ಆಗುವುದಿಲ್ಲ. ಜನರೇನು ದಡ್ಡರಾ? ಈ ರೀತಿ ಹೇಳಿ ಕರ್ನಾಟಕಕ್ಕೆ ಅವಮಾನ ಮಾಡುತ್ತಿದ್ದಾರೆ. 

ಇಷ್ಟು ವರ್ಷ ಕಾಂಗ್ರೆಸ್‌ ಏನೂ ಮಾಡಿಲ್ಲ ಅಂತ ಆರೋಪ ಮಾಡುತ್ತಿದ್ದಾರಲ್ಲಾ? 
ಇಷ್ಟು ವರ್ಷ ಕಾಂಗ್ರೆಸ್‌ ಏನೂ ಮಾಡಿಲ್ಲ ಅಂತ ಹೇಳುತ್ತಾರಲ್ಲಾ. ಈ ರಸ್ತೆ, ಕೆರೆ ಕಟ್ಟೆ, ಸಂಸ್ಥೆಗಳನ್ನು ಕಟ್ಟಿದ್ದು, ಕಂಪ್ಯೂಟರ್‌, ಐಟಿ-ಬಿಟಿ ಯಾರು ಕೊಟ್ಟಿದ್ದು?  ಇವರ ಸರಕಾರ ಇದೆಯಲ್ಲಾ ಎಲ್ಲವನ್ನೂ ತೆಗೆದು ಹಾಕಲಿ, ಆರ್‌ಟಿಇ, ಆರ್‌ಟಿಐ, ಸಂವಿಧಾನದ 73ನೇ ತಿದ್ದುಪಡಿ, ಯುವಕರಿಗೆ 18 ವರ್ಷಕ್ಕೆ ಓಟಿಂಗ್‌ ಪವರ್‌ ಕೊಟ್ಟಿದ್ದು ಯಾರು? ಮನೆಗಳಿಗೆ ಫೋನ್‌ ಬರಬೇಕಾದರೆ ಎಷ್ಟು ಕಷ್ಟ ಇತ್ತು. ಇದಕ್ಕೆ ರಾಜೀವ್‌ ಗಾಂಧಿ ಪ್ರಯತ್ನ ಮಾಡಲಿಲ್ಲವೇ? ರಾಜಕಾರಣಕ್ಕೋಸ್ಕರ ಮಾತನಾಡುತ್ತಾರೆ. ನೆಹರು, ಇಂದಿರಾಗಾಂಧಿ ಏನೂ ಮಾಡಲಿಲ್ಲವಾ? ಮೋದಿ ಯವರಿಗೆ ಮಾತನಾಡಲು ಶಕ್ತಿ ಕೊಟ್ಟಿರುವುದೇ ಕಾಂಗ್ರೆಸ್‌. 

ನಿಮ್ಮನ್ನು ಕಟ್ಟಿ ಹಾಕಲು ಐಟಿ ದಾಳಿ ಮಾಡಿಸಿದ್ದಾರಂತೆ?
ಏನೇನು ತೊಂದರೆ ಕೊಟ್ಟು ಖುಷಿ ಪಡುತ್ತಾರೋ ಪಡಲಿ. ಈ ದೇಶದಲ್ಲಿ ಕಾನೂನಿದೆ. ನನಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ. ನಾನೇನಾದರೂ ತಪ್ಪು ಮಾಡಿದರೆ ಶಿಕ್ಷೆಯಾಗುತ್ತದೆ. 

ಇದು ಹಿಂದೂ ವಿರೋಧಿ ಸರಕಾರ ಎಂಬ ಆರೋಪವಿದೆ…
ಬಿಜೆಪಿಯವರು “ನಾವು ಹಿಂದೂಗಳು. ನಾವೇ ಮುಂದು’ ಅಂತಾರೆ. ಆದರೆ ನಾವು, “ಹಿಂದೂಗಳು, ಕ್ರೈಸ್ತರು, ಮುಸಲ್ಮಾನರು ಎಲ್ಲರೂ ನಮ್ಮವರು’ ಎಂದು ಭಾವಿಸುತ್ತೇವೆ.

ನೀವು ವೀರಶೈವ ಲಿಂಗಾಯತರನ್ನು ಒಡೆದು ಆಳುತ್ತಿದ್ದೀರಂತಲ್ಲ?
ಎಲ್ಲ ಪಕ್ಷದ ವೀರಶೈವ ಮುಖಂಡರು ಮುಖ್ಯಮಂತ್ರಿ ಬಳಿ ಬಂದು ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ಇಟ್ಟಾಗ ಅವರು ಸುಮ್ಮನೇ ಕೂಡಲಿಕ್ಕೆ ಆಗುತ್ತಾ? ಅದರ ಸಾಧ್ಯತೆ ಬಗ್ಗೆ ಪರಿಶೀಲಿಸಲು ಸಮಿತಿ ರಚನೆ ಮಾಡಿದ್ದಾರೆ. ಅದನ್ನು ಬಿಟ್ಟು ಸರಕಾರ ಬೇರೇನೂ ಮಾಡಿಲ್ಲ.

ನೀವು ಪಕ್ಷದಲ್ಲಿ ಪ್ರತ್ಯೇಕ ಪಡೆ ಕಟ್ಟಲು ಪ್ರಯತ್ನಿಸುತ್ತಿದ್ದೀರಂತೆ?
ನನಗೆ ಪ್ರತ್ಯೇಕ ಪಡೆ ಬೇಕಿಲ್ಲ. ಈಗ ಕ್ಷಣ ಕ್ಷಣಕ್ಕೂ ಹೊಸ ಹೊಸ ಸುದ್ದಿಗಳು ಬರುತ್ತವೆ. ಅದಕ್ಕಾಗಿ ಬೂತ್‌ ಮಟ್ಟದಲ್ಲಿ  ಕ್ರಿಯಾ ಶೀಲ ರಾಗಿರುವ ಯುವಕರನ್ನು ಪ್ರಚಾರ ಸಮಿತಿಗೆ ನೇಮಿಸಲಾಗಿದೆ. ಜನರಿಗೆ ಎಲ್ಲ ವಿಷಯವನ್ನು ಮನದಟ್ಟು ಮಾಡ ಬೇಕಿದೆ. ನಾವು ತಂತ್ರಜ್ಞಾನ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಪ್ರಚಾರ ಸಮಿತಿ ಮಾಡದಿದ್ದರೂ ನನ್ನ ಕೆಲಸ ಮಾಡು ತ್ತಿದ್ದೆ. ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಮೊದಲು ಗುಂಡ್ಲುಪೇಟೆ ಉಸ್ತುವಾರಿ ನೀಡಿರಲಿಲ್ಲವೇ? ಬಳ್ಳಾರಿ, ಹುನಗುಂದ್‌, ಮೈಸೂರಿನಲ್ಲಿ ಉಪ ಚುನಾವಣೆಗೆ ನನ್ನನ್ನೇ ಏಕೆ ನೇಮಕ ಮಾಡಿದರು? ಏನೋ ನನ್ನಲ್ಲಿ ಶಕ್ತಿ ಇದೆ ಅಂತ ನಂಬಿ ಕೆಲಸ ಕೊಡುತ್ತಾರೆ.

ನುಡಿದಂತೆ ನಡೆದಿದ್ದೇವೆ ಅಂತ ಹೇಳ್ತಿದ್ದೀರಿ, ಜಾತಿ ಸಮೀಕ್ಷೆ ಯಾಕೆ ಬಿಡುಗಡೆ ಮಾಡುತ್ತಿಲ್ಲ?
ಅದನ್ನು ಮಾಡ್ಸಿದ್ದೀವಿ ನಿಜ. ಅದಕ್ಕೆ ದುಡ್ಡು ಬೇರೆ ಇಟ್ಟಿದ್ದೇವೆ. ಸದ್ಯ ಅದರ ಪರಿಸ್ಥಿತಿ ಏನಿದೆ ಅಂತ ಗೊತ್ತಿಲ್ಲ. ತಿಳಿದುಕೊಂಡು ಹೇಳುತ್ತೇನೆ.

ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಸಮಸ್ಯೆ ನೀವು ಮನಸ್ಸು ಮಾಡಿದರೆ ಬಗೆ ಹರಿಸಬಹುದಂತಲ್ಲಾ?
ಅದನ್ನ ರಾಹುಲ್‌ ಗಾಂಧಿಯವರೇ ಬಗೆಹರಿಸಿದ್ದಾರೆ. ಕರೆದು ಸಭೆ ಮಾಡಿ ಎಲ್ಲರೂ ಒಟ್ಟಿಗೆ ಹೋಗಿ ಅಂತ ಹೇಳಿದ್ದಾರೆ. ಇನ್ನು ಯಾವುದೇ ಸಮಸ್ಯೆ ಆಗುವುದಿಲ್ಲ.

ಈ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲವಂತೆ ?
 ನಾವಂತೂ ಬಹುಮತ ಪಡೆಯುತ್ತೇವೆ. ಕುಮಾರಸ್ವಾಮಿಯ ಒಂದು ಹೇಳಿಕೆ ನೋಡಿದೆ. ನಾವು ವಿಶ್ವಾಸದಿಂದ ಇದ್ದೇವೆ. 

ಈ ಚುನಾವಣೆಯಲ್ಲಿ ನೀವು ಸಿಎಂ ಅಭ್ಯರ್ಥಿನಾ?
ಅಯ್ಯೋ ಬಿಡಿ, ಅದೆಲ್ಲಾ ಈಗ್ಯಾಕೆ?

ದೇವೇಗೌಡರ ನಂತರ ಒಕ್ಕಲಿಗರ ನಾಯಕರಾಗಲು ಪೈಪೋಟಿ ನಡೆದಿದೆಯೇ?
ನಾನು ಯಾವುದಕ್ಕೂ ಪೈಪೋಟಿ ನಡೆಸಿಲ್ಲ. ನಾನು ಒಕ್ಕಲಿಗ ಜಾತಿ ಯಲ್ಲಿ ಹುಟ್ಟಿದೀನಿ. ಒಕ್ಕಲಿಗ ಪ್ರತಿನಿಧಿ ಅಂತ ಗುರುತಿಸುತ್ತಾರೆ. ಆದರೆ, ನಾನು ಎಲ್ಲರಿಗೂ ಕೆಲಸ ಮಾಡುತ್ತಿದ್ದೇನೆ. ಯಾರು ಬೇಕಾದರೂ ಲೀಡರ್‌ಗಳಾಗಲಿ, ನನಗೇನು ಅವಶ್ಯಕತೆ ಇಲ್ಲ. 

ಸಿಕ್ಕ ಅವಧಿಯಲ್ಲಿ ಇಂಧನ ಇಲಾಖೆಗೆ ನ್ಯಾಯ ಕೊಡಿಸಿದ್ದೀನಿ ಅನಿಸಿದೆಯಾ?
ಖಂಡಿತವಾಗಿಯೂ ಇಷ್ಟೊಂದು ಸಾಧನೆ ಮಾಡುತ್ತೇನೆ ಎಂದು ನನಗೆ ನಂಬಿಕೆ ಇರಲಿಲ್ಲ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಯಾರಿಗೂ ತೊಂದರೆಯಾಗದಂತೆ ನೋಡಿಕೊಂಡಿದ್ದೇನೆ. ನನ್ನ ಅಧಿಕಾರಿಗಳು ಹಾಗೂ ಎಲ್ಲರೂ ಸಹಕಾರ ನೀಡಿದ್ದಾರೆ. 

24 ಗಂಟೆ ತ್ರಿಫೇಸ್‌ ವಿದ್ಯುತ್‌ ಕೊಡುವ ಕಾಲ ಯಾವಾಗ ಬರುತ್ತೆ?
ಫ್ರೀ ವಿದ್ಯುತ್‌ ಕೊಡುವುದು ಕಷ್ಟ, ದುಡ್ಡು ಕೊಟ್ಟರೆ ಎಲ್ಲರಿಗೂ 24 ತಾಸು ವಿದ್ಯುತ್‌ ನೀಡುತ್ತೇವೆ. ಅದಕ್ಕೆ ಪ್ರತ್ಯೇಕ ಯೋಜನೆಗಳಿವೆ.

ಸೂರ್ಯ ರೈತ ಯೋಜನೆ ಅಂದುಕೊಂಡಷ್ಟು ಯಶಸ್ವಿಯಾಗಿದೆಯಾ?
ನಮ್ಮ ಯೋಜನೆಯನ್ನು ಕೇಂದ್ರ ಸರಕಾರವೇ ಬೇರೆ ಹೆಸರಿನಲ್ಲಿ ಜಾರಿಗೆ ತಂದಿದೆ. ಇಡೀ ದೇಶಕ್ಕೆ ಈ ಯೋಜನೆ ಮಾದರಿಯಾಗಿದೆ. ಅದು ನನ್ನ ಕನಸಿನ ಯೋಜನೆ. ಯಶಸ್ವಿಯಾಗಿದೆ.

ರೂಫ್ ಟಾಪ್‌ ಯೋಜನೆ ವಿಫ‌ಲ ಆಗಿದೆಯಂತಲ್ಲ?
ಹಾಗೇನಿಲ್ಲ. ನಾವು ಯೋಜನೆ ಘೋಷಣೆ ಮಾಡಿದಾಗ ದರ ಜಾಸ್ತಿ ಇತ್ತು. ಕೆಲವರಿಗೆ ಅದನ್ನು ಹಾಕಿಕೊಳ್ಳಲು ಆಗಲಿಲ್ಲ. ಈಗ ಯೋಜನೆ ಜಾರಿಯಲ್ಲಿದೆ. ಜನರು ಈಗಲೂ ಅನುಕೂಲ ಪಡೆದುಕೊಳ್ಳಬಹುದು. 

ನಿಮ್ಮನ್ನು ಬೈ ಎಲೆಕ್ಷನ್‌ ಸ್ಟ್ರಾಟಜಿ ಮೇಕರ್‌ ಅಂತಾರೆ ಹೌದಾ?
ಹಾಗೇನಿಲ್ಲ. ಪಕ್ಷಕ್ಕಾಗಿ ಹೆಚ್ಚಿನ ಕೆಲಸ ಮಾಡ್ತೀನಲ್ಲ ಅದಕ್ಕೆ ನನ್ನ ಮೇಲೆ ನಂಬಿಕೆ ಜಾಸ್ತಿ.

ಸಿಎಂಗೆ ಪರಮೇಶ್ವರ್‌ಗಿಂತ ಡಿಕೆಶಿ ಬಗ್ಗೆ ಭಯ ಇದೆಯಂತೆ?
ಅದೆಲ್ಲ ನನಗೆ ಗೊತ್ತಿಲ್ಲ. ನಾನು ಯಾರಿಗೂ ಥೆಟ್‌ ಅಲ್ಲ. ನನ್ನಿಂದ ಯಾರಿಗೂ ತೊಂದರೆ ಆಗುವುದು ಬೇಡ. ರಾಜಕೀಯ ಬೇಕು ಅಂತ ಬಂದಿದ್ದೇನೆ. ಜನರಿಗೆ ಒಳ್ಳೆಯದನ್ನು ಮಾಡ ಬೇಕೆಂದು ನನ್ನ ಕೆಲಸ ನಾನು ಮಾಡಿಕೊಂಡು ಹೋಗುತ್ತಿ ದ್ದೇನೆ. ನಾವು ಅಧಿಕಾರದಲ್ಲಿದ್ದಾಗ ಏನು ಮಾಡುತ್ತೇವೆಯೋ ಅದು ಜನರ ಮನಸ್ಸಿನಲ್ಲಿ ಉಳಿಯುತ್ತದೆ. 

ಸಂದರ್ಶನ ಶಂಕರ ಪಾಗೋಜಿ 

Advertisement

Udayavani is now on Telegram. Click here to join our channel and stay updated with the latest news.

Next