Advertisement

ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆದರೂ ನನಗೇನೂ ಸಮಸ್ಯೆಯಿಲ್ಲ..: ಬಿಜೆಪಿ ಸಂಸದ ಉಮೇಶ ಜಾಧವ್

04:09 PM Jul 30, 2023 | Team Udayavani |

ಕಲಬುರಗಿ: ಲೋಕಸಭೆಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿರುವ ಕಾರಣಕ್ಕೆ ಕೇಂದ್ರದ ಮಂತ್ರಿ ಮಾಡಿ ಎಂದು ನಾನು ಡಿಮ್ಯಾಂಡ್ ಮಾಡಿಲ್ಲ. ಆದರೆ ಇಡೀ ದೇಶದಲ್ಲಿ ಹಿಂದುಳಿದ ಬಂಜಾರ ಸಮುದಾಯದಿಂದ ಆಯ್ಕೆಗೊಂಡಿರುವ ಏಕೈಕ ಸಂಸದನಾಗಿ ಕಾರ್ಯನಿರ್ವಹಿಸುತ್ತಿದ್ದು ಅರ್ಹತೆ ಇದೆ ಎಂದು ಸಂಸದ ಡಾ.ಉಮೇಶ ಜಾಧವ್ ಸ್ಪಷ್ಟ ನೆ ನೀಡಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಡಿ… ನಾನು ಜಾಧವ್.. ಅವರು ಮಲ್ಲಿಕಾರ್ಜುನ ಖರ್ಗೆ… ಇಬ್ಬರಿಗೂ ಪ್ರತ್ಯೇಕ ವ್ಯಕ್ತಿತ್ವಗಳಿವೆ. ಇಷ್ಟಕ್ಕೂ ಅವರು ಪ್ರಧಾನಿ ಆಗುವುದಾದರೆ ಅದರಲ್ಲಿ ನನಗೇನೂ ಸಮಸ್ಯೆಯಿಲ್ಲ ಎಂದು ನಸು ನಕ್ಕರು.

ಅದು ಆ (ಕಾಂಗ್ರಸ್) ಪಕ್ಷದ ಸಮಸ್ಯೆ. ಅದಕ್ಕೂ ನನಗೂ ಸಂಬಂಧವಿಲ್ಲ.  ನಾನು ಅತ್ಯಂತ ಹಿಂದುಳಿದ ಜಾತಿಯಿಂದ ಬಂದವ. ಒಳ್ಳೆಯ ವಿದ್ಯಾರ್ಹತೆಯಿದೆ. ಮೇಲಾಗಿ ಸಂಸತ್ತಿನಲ್ಲೂ ಮತ್ತು ಹೊರಗೂ ಅತಿ ಹೆಚ್ಚು ಕ್ರಿಯಾಶೀಲ ಸಂಸದ ಎಂಬುದು ಎಲ್ಲರಿಗೂ ಗೊತ್ತಿದೆ. ಇಷ್ಟಕ್ಕೂ ಮಂತ್ರಿ ಸ್ಥಾನ ಸಿಕ್ಕರೂ-ಸಿಗದಿದ್ದರೂ ಪಕ್ಷದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುವುದಾಗಿ ಹೇಳಿದರು.

25 ಸ್ಥಾನ ಖಚಿತ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಈ ಬಾರಿ 22ರಿಂದ 25 ಸಂಸದರು ಆಯ್ಕೆಗೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದಂತು ನಿಜ ಎಂದ ಜಾಧವ್,  ರಾಜ್ಯದ 13 ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಯಿದೆ ಎಂಬ ಪ್ರಶ್ನೆಗೆ ನೋಡಿ, ಯಾರಿಗೆ  ಟಿಕೆಟ್ ಕೊಟ್ಟರೂ; ಅವರ ಪರವಾಗಿ ನಾವೆಲ್ಲರೂ ಕಾರ್ಯನಿರ್ವಹಿಸುತ್ತೇವೆ. ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ಕೇಂದ್ರದಲ್ಲಿ ಪುನಃ ಅಧಿಕಾರಕ್ಕೆ ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:“ಹಣ, ದುರಹಂಕಾರ, ಅಹಂ…” ಭಾರತೀಯ ಕ್ರಿಕೆಟಿಗರ ವಿರುದ್ಧ ಕಪಿಲ್ ದೇವ್ ಕಿಡಿ

Advertisement

ಕಲಬುರಗಿ ನಗರದ ಸುತ್ತಲೂ ಎರಡನೇ ರಿಂಗ್ ರಸ್ತೆ ನಿರ್ಮಾಣ ಕುರಿತಂತೆ ಇತ್ತೀಚೆಗೆ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ತಾವು ಚರ್ಚಿಸಿದ್ದು, ನಿತ್ಯ ಸುಮಾರು 40 ಸಾವಿರ ವಾಹನಗಳು ಹಾಲಿ ರಿಂಗ್ ರಸ್ತೆ ಮೂಲಕ ಹಾದು ಹೋಗುತ್ತವೆ ಎಂದು ಪ್ರಮುಖ ಮಾಹಿತಿಯನ್ನು ಅವರ ಗಮನಕ್ಕೆ ತಂದಿದ್ದೇನೆ. ಎಲ್ಲ ಮಾಹಿತಿ ಆಲಿಸಿದ ಸಚಿವರು ಆದಷ್ಟು ಶೀಘ್ರ ಪೂರಕ ವರದಿ ತರಿಸಿಕೊಂಡು ಕಾಮಗಾರಿ ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದರು.

ಸಂಸದರ ನಿಧಿ ಬಳಕೆ; ನಿಯಮ ಬದಲು:  ಈ ಹಿಂದೆ ಸಂಸದರ ನಿಧಿಯನ್ನು ಖರ್ಚು ಮಾಡಿದ ಬಳಿಕ ಬಳಕೆಯ ಪ್ರಮಾಣಪತ್ರ (ಯುಟಿಲೈಸೇಷನ್ ಸರ್ಟಿಫಿಕೆಟ್) ನೀಡಿದರೆ ಮಾತ್ರ ಅನುದಾನ ಬಿಡುಗಡೆಯಾಗುತ್ತಿತ್ತು. ಆದರೆ, ಇತ್ತೀಚೆಗೆ ಕೇಂದ್ರ ಸರಕಾರವು ಈ ನಿಟ್ಟಿನಲ್ಲಿ ನಿಯಮಾವಳಿ ಬದಲಿಸಿದೆ. ಹೀಗಾಗಿ, ಇನ್ನು ಮುಂದೆ ಯುಟಿಲೈಸೇಷನ್ ಸರ್ಟಿಫಿಕೆಟ್ ಇಲ್ಲದೆಯೂ ನೇರವಾಗಿ ಸಂಸದರ ಖಾತೆಗೆ ಅನುದಾನ ಜಮಾ ಆಗಲಿದೆ. ಮುಂದಿನ ಮರ‍್ನಾಲ್ಕು ದಿನಗಳಲ್ಲಿ ಈ ಕುರಿತಾದ ಆದೇಶ ಹೊರಬೀಳಲಿದೆ. ಈವರೆಗೆ ತಾವು ಸುಮಾರು ಎರಡುವರೆ ಕೋಟಿ ಅನುದಾನ ಪಡೆದಿದ್ದು, ಇನ್ನೂ ಎಂಟರಿಂದ 10 ಕೋಟಿ ರೂ. ಅನುದಾನ ಬರಬಹುದು ಎಂದು ಸಂಸದ ಡಾ.ಉಮೇಶ್ ಜಾಧವ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಶಶೀಲ್ ನಮೋಶಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹರ್ಷಾನಂದ ಗುತ್ತೇದಾರ್, ರವಿರಾಜ ಕೊರವಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾದಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next